ಬೆಂಗಳೂರು: “ಭಾರತವು ಹಿಂದೂ ರಾಷ್ಟ್ರವಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮಾಜಿ ಸಚಿವ ಅನಂತಕುಮಾರ್ ಅವರಂಥ ದೇಶಪ್ರೇಮಿಗಳು ನಮಗೆ ಆದರ್ಶ ಪುರುಷರಾಗಿದ್ದಾರೆ’ ಎಂದು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ತಿಳಿಸಿದರು. ನಗರದ ಬಂಟರ ಸಂಘದ ಸಭಾಂಗಣದಲ್ಲಿ ಸೋಮವಾರ ಜನಮನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎಚ್.ಎನ್. ಅನಂತಕುಮಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
“ಇಂಡಿಯಾ’ ಎಂಬ ಬಳಕೆ ತಪ್ಪು. ಭಾರತ ಎನ್ನುವುದೇ ಸರಿಯಾದ ಪದ. ಈ ಬಗ್ಗೆ ನಾನು ಹಿಂದೆ ಲೇಖನವೊಂದನ್ನು ಬರೆದಿದ್ದೆ. ಅದಕ್ಕೆ ಅನಂತಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದ ಡಾ.ಚಿದಾನಂದಮೂರ್ತಿ, “ದೇಶಪ್ರೇಮದ ವಿಚಾರದಲ್ಲಿ ಅನಂತಕುಮಾರ್ ಒಬ್ಬ ಆದರ್ಶ ಪುರುಷ. ಅವರದ್ದು ನಡೆ-ನುಡಿ ಒಂದೇ ಆಗಿತ್ತು. ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುವ ಸಾಕಾರಮೂರ್ತಿಯಾಗಿದ್ದರು’ ಎಂದು ಬಣ್ಣಿಸಿದರು.
ಸಾಹಿತಿ ಡಾ.ದೊಡ್ಡರಂಗೇಗೌಡ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹೇಗೆ ಮಾದರಿ ವ್ಯಕ್ತಿಯೋ, ಅದೇ ರೀತಿ ಕನ್ನಡಿಗರಿಗೆ ಕನ್ನಡದ ಮಣ್ಣಿನ ಮಗ ಅನಂತಕುಮಾರ್ ಎಂದರೆ ತಪ್ಪಾಗದು. ನಾನು ಅನಂತಕುಮಾರ್ ಅವರ ಒಡನಾಡಿಯಾಗಿದ್ದೆ. ಎಬಿವಿಪಿ ಕಾರ್ಯಕರ್ತರಾಗಿ ಹುರುಪು ಮತ್ತು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದೆವು. ಆಗ ನಮಗೆ ಒಬ್ಬ ಮಾದರಿ ವ್ಯಕ್ತಿ ಬೇಕಿತ್ತು. ಆ ಸಂದರ್ಭದಲ್ಲಿ ಸಿಕ್ಕವರೇ ವಾಜಪೇಯಿ ಎಂದು ಮೆಲುಕುಹಾಕಿದರು.
ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಪತಿ ಅನಂತಕುಮಾರ್ ಅಗಲಿದ ನಂತರ ಕೇಂದ್ರದ ನಾಯಕರು ಭೇಟಿ ನೀಡಿ, ತಾವೊಬ್ಬ ಒಳ್ಳೆಯ ಸ್ನೇಹಿತ ಮತ್ತು ಒಡನಾಡಿಯನ್ನು ಕಳೆದುಕೊಂಡಿದ್ದೇವೆ ಎಂದಾಗ ದುಃಖ ತುಂಬಿ ಬರುತ್ತಿತ್ತು. ಮನೆ ಮಂದಿಯನ್ನು ಹಚ್ಚಿಕೊಂಡಂತೆಯೇ ಹೊರಗಡೆ ಕೂಡ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಭಾವುಕರಾದರು.
ಲೇಖಕಿ ಪ್ರೇಮಾ ಭಟ್ ಮಾತನಾಡಿ, ಕನ್ನಡದ ಬಗ್ಗೆ ಬರೀ ಭಾಷಣ ಮಾಡುವವರು ಇದ್ದಾರೆ. ಆದರೆ, ಅನಂತಕುಮಾರ್ ನಿಜವಾಗಿ ಕನ್ನಡದ ಕೆಲಸ ಮಾಡಿತೋರಿಸಿದರು. ರಾಜಕೀಯ ಮಾತ್ರವಲ್ಲ; ಸಮಾಜಸೇವೆ, ದೇಶಾಭಿಮಾನ, ಶಿಕ್ಷಣ ಹೀಗೆ ಎಲ್ಲದರಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು. ಜನಮನ ಸಂಸ್ಥೆ ಅಧ್ಯಕ್ಷ ಚೇತನ್, ಪ್ರಧಾನ ಕಾರ್ಯದರ್ಶಿ ಬಿ.ಜಿ. ಭಟ್, ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಡಾ.ಆರತಿ ಮತ್ತಿತರರು ಉಪಸ್ಥಿತರಿದ್ದರು.