Advertisement

ನಾಡ ದೇಗುಲವಾಗಿ ಪುನರ್‌ ನಿರ್ಮಿತ ಅನಂತಾಡಿ ಸ.ಹಿ.ಪ್ರಾ. ಶಾಲೆ

08:33 PM Jul 03, 2019 | mahesh |

ಬಂಟ್ವಾಳ: ಹಳೆ ವಿದ್ಯಾರ್ಥಿಗಳು ಸಾಂಘಿಕ ಶಕ್ತಿಯ ಮೂಲಕ ತಾಲೂಕಿನ ಅನಂತಾಡಿ ಸರಕಾರಿ ಹಿ.ಪ್ರಾ. ಶಾಲೆಯನ್ನು ನಾಡ ದೇಗುಲವಾಗಿ ಕಟ್ಟುವ ಮೂಲಕ ಮಾದರಿಯಾಗಿದ್ದಾರೆ. ಶಾಲೆಗೆ ಬೇಕಾದ ಮೂಲ ಸೌಕರ್ಯ ಕಲ್ಪಿಸಲು ಅವರು ದಾನಿಗಳಲ್ಲಿ ಬೇಡಿದ್ದಾರೆ. ಇದು ನಿಮ್ಮದೇ ಶಾಲೆ ಎಂದಿದ್ದಾರೆ. ಆ ಮೂಲಕ ಶಾಲೆಯನ್ನು ಕಟ್ಟಿದ್ದಾರೆ.

Advertisement

2017ರಲ್ಲಿ ಈ ಶಾಲೆಯ ಶತಮಾನೋತ್ಸವ ನಡೆದಿತ್ತು. ಅದಕ್ಕೂ ಪೂರ್ವದಲ್ಲಿ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿತ್ತು. ಶತಮಾನೋತ್ಸವ ಕಾರಣವಾಗಿ ಹಳೆ ವಿದ್ಯಾರ್ಥಿಗಳ ಪ್ರಯತ್ನದಿಂದ ಮೂಲ ಸೌಕರ್ಯಗಳು ಒದಗಿ ಬಂದವು. 2019-20ರ ಸಾಲಿಗೆ 187 ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ಕನ್ನಡ ಭಾಷಾ ಮಾಧ್ಯಮದಲ್ಲಿಯೇ ವಿದ್ಯಾರ್ಥಿ ಸಂಖ್ಯೆ ಹೆಚ್ಚಿಸಿಕೊಂಡು ಸಾಧನೆ ಮಾಡಿದೆ.

ಇಲ್ಲಿನ ಮುಖ್ಯ ಶಿಕ್ಷಕರಾದ ದೊಡ್ಡಕೆಂಪಯ್ಯ ಅವರು ಹಳೆ ವಿದ್ಯಾರ್ಥಿ ಹರಿಶ್ಚಂದ್ರ ಶೆಟ್ಟಿ ಬಾರಿಕೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನೇರಳಕಟ್ಟೆ ನೇತೃತ್ವದಲ್ಲಿ ಶಾಲೆಯನ್ನು ಮಾದರಿಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಲೆಯಲ್ಲಿರುವ ಸೌಲಭ್ಯಗಳು
ಶಾಲೆ 2.04 ಎಕ್ರೆ ಜಮೀನು ಹೊಂದಿದೆ. ಬಾಳೆಗಿಡ, 10ಕ್ಕೂ ಹೆಚ್ಚು ತೆಂಗಿನ ಮರಗಳು ಫಲವನ್ನು ನೀಡುತ್ತಿವೆ. ಆಟದ ಮೈದಾನ, ಬಾಲವನ, ರಂಗಮಂದಿರ, ನಲಿಕಲಿ ವಿಶೇಷ ವಿನ್ಯಾಸದ ತರಗತಿ, ಹೊಸ ತರಗತಿ ಕೊಠಡಿ, ಲೈಬ್ರೆರಿ, ಶೌಚಾಲಯ, ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ಶಾಲೆಗೆ ಪ್ರವೇಶ ಮಾಡುವಲ್ಲಿ ವಿಶೇಷ ಪ್ರವೇಶ ದ್ವಾರ, ಅದರಲ್ಲಿ ಯಕ್ಷಗಾನ ಚಿತ್ರಕಲೆ ನಿರ್ಮಿಸಲಾಗಿದೆ. ನಿವೃತ್ತ ಶಿಕ್ಷಕ ದೇರಣ್ಣ ಶೆಟ್ಟಿ ಸ್ಮಾರಣಾರ್ಥ ನಿರ್ಮಿಸಿದ ಬಹು ಆಯಾಮಗಳ ರಂಗಮಂದಿರವು ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ.

ಶೌಚಾಲಯ, ಶಾಲಾಭಿವೃದ್ಧಿ ಸಮಿತಿಯಿಂದ ವಿಶೇಷ ಧ್ವಜಸ್ತಂಭ, ಗಾರ್ಡನ್‌, ನಲಿಕಲಿಯಲ್ಲಿ ಮಕ್ಕಳ ಆಕರ್ಷಣೆಯ ಸಾಮಗ್ರಿ ಮಿಂಚುಪಟ್ಟಿ, ಪ್ಲಾಸ್‌ಕಾರ್ಡ್‌, ವಿವಿಧ ಪ್ರಾಣಿಪಕ್ಷಗಳ ಚಿತ್ರ, ಮಕ್ಕಳ ವಿಶೇಷ ಪೀಠೊಪಕರಣ, ಟೇಬಲ್‌ ಸಹಿತ ಸುಸಜ್ಜಿತ ವ್ಯವಸ್ಥೆ ಇಲ್ಲಿದೆ. ನೈಋತ್ಯ ವಲಯ ರೈಲ್ವೇ ಅನುದಾನವಾಗಿ ಛಾವಣಿ ದುರಸ್ತಿಯ ಕೊಡುಗೆ ನೀಡಿದೆ. ಪ್ರಸ್ತುತ ವರ್ಷದಲ್ಲಿ 187 ಮಕ್ಕಳು, 7 ಮಂದಿ ಸರಕಾರಿ ಶಿಕ್ಷಕರಿದ್ದಾರೆ. ಶಾಲಾಭಿವೃದ್ಧಿ ಸಮಿತಿಯಿಂದ ಒಬ್ಬರು ಶಿಕ್ಷಕರನ್ನು ನೇಮಿಸಲಾಗಿದೆ.

Advertisement

40 ಲಕ್ಷ ರೂ. ಮೌಲ್ಯದ ಅಭಿವೃದ್ಧಿ
2017-18 ಸಾಲಿನಲ್ಲಿ ಶಾಲೆಯ ರಂಗಮಂದಿರ-10 ಲಕ್ಷ ರೂ., ಆಟದ ಮೈದಾನ-4 ಲಕ್ಷ ರೂ., ಪ್ರವೇಶ ದ್ವಾರ ಇಂಟರ್‌ಲಾಕ್‌-70 ಸಾವಿರ ರೂ., ಶೌಚಾಲಯ 4.50 ಲಕ್ಷ ರೂ., ಸಣ್ಣಮಕ್ಕಳ ಶೌಚಾಲಯ-50 ಸಾವಿರ ರೂ., ಇಂಗುಗುಂಡಿ – 1 ಲಕ್ಷ ರೂ., ಟೈಲ್ಸ್‌ ಅಳವಡಿಕೆ-1.50 ಲಕ್ಷ ರೂ., ಪ್ರೊಜೆಕ್ಟರ್‌-45 ಸಾವಿರ ರೂ. ನೂತನ ಪ್ರವೇಶ ದ್ವಾರ- 70 ಸಾವಿರ ರೂ., ರಂಗಮಂದಿರಕ್ಕೆ ಟೈಲ್ಸ್‌- 35 ಸಾವಿರ ರೂ., ನೂತನ ಧ್ವಜಸ್ತಂಭ – 25 ಸಾವಿರ ರೂ., ಆವರಣ – 25 ಸಾವಿರ ರೂ., ಕೈತೊಳೆಯುವ ನೀರಿನ ಘಟಕ-35 ಸಾವಿರ ರೂ., ಘಟಕ ಶೆಡ್‌-80 ಸಾವಿರ ರೂ., ಬಾಲವನ ಆಟಿಕೆ-35 ಸಾವಿರ ರೂ., ಕುಡಿಯುವ ನೀರಿನ ಪಂಪ್‌ಸೆಟ್‌-8 ಸಾವಿರ, ರೂ., ಶಾಲಾ ಸೌಂದರ್ಯ-50 ಸಾವಿರ ರೂ., ಕೊಠಡಿ ನಿರ್ಮಾಣ-10.50 ಲಕ್ಷ ರೂ., ಬಿಸಿಯೂಟ ಕೊಠಡಿ ಟೈಲ್ಸ್‌-50 ಸಾವಿರ, ಮಕ್ಕಳ ಆಟದ ಮೈದಾನ ಸುತ್ತುಗೋಡೆ-50 ಸಾವಿರ ರೂ., ಬಾಲವನ ಆವರಣ ಗೋಡೆ-50 ಸಾವಿರ ರೂ., ಜಾರು ಬಂಡಿ – 50 ಸಾವಿರ ರೂ.

ಸಂಘಟಿತ ಪ್ರಯತ್ನ
ಶೈಕ್ಷಣಿಕ ವಿಚಾರದಲ್ಲಿ ಊರಿನ ಜನರ ಪಾಲ್ಗೊಳ್ಳುವಿಕೆಗೆ ಅನಂತಾಡಿ ಶಾಲೆ ನಂ.1 ಸ್ಥಾನದಲ್ಲಿದೆ. ಬಹುತೇಕ ಅಭಿವೃದ್ಧಿ ಕಾರ್ಯಗಳ ಹಿಂದೆ ಹಳೆ ವಿದ್ಯಾರ್ಥಿಗಳ ಶ್ರಮ ಇದೆ. ಮುಖ್ಯ ಶಿಕ್ಷರು, ಸಹಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸಂಘಟಿತ ಪ್ರಯತ್ನ ಶಾಲೆಯ ಪ್ರಗತಿಗೆ, ಮಕ್ಕಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಮಕ್ಕಳಿಗಾಗಿ ಬಾಲವನ ನಿರ್ಮಾಣ ತಾಲೂಕಿನಲ್ಲಿ ಇಲ್ಲಿ ಮಾತ್ರ.
 - ಎನ್‌. ಶಿವಪ್ರಕಾಶ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

 ಬಡಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ
ನಮ್ಮ ಶಾಲೆಯಲ್ಲಿ ತಾಲೂಕಿನಲ್ಲಿಯೇ ಪ್ರಥಮವಾಗಿ ವಿಶೇಷ ಕ್ರೀಡಾಪಟುಗಳ ಅನ್ವೇಷಣ ಶಿಬಿರ ಆಯೋಜಿಸಲಗಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನ ಮಾಡಲಾಗುವುದು. ಸರಕಾರದ ಸೌಲಭ್ಯ ಬಳಸಿಕೊಂಡು ಕನ್ನಡ ಶಾಲೆಯಾಗಿ ಉಳಿಯಲು ಪ್ರಯತ್ನ ನಡೆಸಲಾಗುವುದು. ಬಡಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
 - ದೊಡ್ಡಕೆಂಪಯ್ಯ, ಶಾಲಾ ಮುಖ್ಯಶಿಕ್ಷರು

Advertisement

Udayavani is now on Telegram. Click here to join our channel and stay updated with the latest news.

Next