Advertisement

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

08:27 PM Sep 18, 2021 | Team Udayavani |

ಉಡುಪಿ:  ನಾಡಿನಾದ್ಯಂತ ಅನಂತಪದ್ಮನಾಭ ವ್ರತ ರವಿವಾರ (ಸೆ. 19) ವಿವಿಧೆಡೆ ನಡೆಯುತ್ತಿದೆ. ಇದು ಚತುರ್ದಶಿಯಂದು ಆಚರಣೆಗೊಳ್ಳುವ ಕಾರಣ ಅನಂತನ ಚತುರ್ದಶಿ ಎಂದು ಕರೆಯುತ್ತಾರೆ.

Advertisement

ಶೇಷಶಾಯಿ ವಿಷ್ಣು:

ಇದು ಕಲ್ಪೋಕ್ತ ಪೂಜೆ ಆಧಾರಿತ ವ್ರತ. ಏಳು ಹೆಡೆಯ ನಾಗನ ಬಿಂಬವನ್ನು ದರ್ಭೆಯಲ್ಲಿ ರಚಿಸಿ ವರ್ತುಲಾಕಾರದ (ಇರಿಕೆ) ಮೇಲೆ ಸಾಲಿಗ್ರಾಮ ಶಿಲೆಯನ್ನು ಇರಿಸಿ ಪೂಜಿಸಲಾಗುತ್ತದೆ. ಇಲ್ಲಿ ಸಾಲಿಗ್ರಾಮವು ವಿಷ್ಣುವಿನ ಸಂಕೇತವೂ, ಸರ್ಪವು ಶೇಷನ ಸಂಕೇತವೂ ಆಗಿದೆ. ಒಟ್ಟಾರೆ ಶೇಷಶಾಯಿಯಾದ ಮಹಾವಿಷ್ಣುವಿನ ಪೂಜಾ ಕ್ರಮವಿದು.

14ಮಹತ್ವ:

ಚತುರ್ದಶಿ ಎಂದರೆ 14ನೇ ತಿಥಿ. ಇಲ್ಲಿ 14 ಗಂಟಿನ ದಾರವನ್ನು ಪೂಜಿಸಿ ತೋಳಿಗೆ ಕಟ್ಟಿಕೊಳ್ಳುವುದು, 14 ಭಕ್ಷ್ಯಗಳ ನೈವೇದ್ಯ, ಒಂದು ಹೆಡೆಗೆ 14 ದರ್ಭೆಯ ಕಡ್ಡಿಗಳನ್ನು ಬಳಸುವುದು ಇತ್ಯಾದಿಗಳಿವೆ.

Advertisement

ಮಹಾಭಾರತದಲ್ಲಿ ಉಲ್ಲೇಖ:

ಈ ವ್ರತದ ಉಲ್ಲೇಖ ಮಹಾಭಾರತದ ಅರಣ್ಯ ಪರ್ವದಲ್ಲಿ ಬರುತ್ತದೆ. ಪಾಂಡವರು ಅರಣ್ಯದಲ್ಲಿರುವಾಗ ಶ್ರೀಕೃಷ್ಣನು ಧರ್ಮರಾಯ ನಿಗೆ ಈ ವ್ರತವನ್ನು ಆಚರಿಸಲು ಹೇಳುತ್ತಾನೆ. ವ್ರತದ ಆಚರಣೆಯಿಂದ ಸಂಪತ್ತು, ದಾಂಪತ್ಯ ಜೀವನದ ಏಕತೆ, ಸಮಸ್ಯೆ ಪರಿಹಾರ ಇತ್ಯಾದಿ ಫ‌ಲವನ್ನು ವ್ರತದ ಫ‌ಲಭಾಗದಲ್ಲಿ ತಿಳಿಸಲಾಗಿದೆ.

 ವಿವಿಧ ದೇವಸ್ಥಾನಗಳಲ್ಲಿ:

ಶ್ರೀಕೃಷ್ಣಮಠ ಸಹಿತ ವಿವಿಧ ಮಠಗಳಲ್ಲಿ, ಅನಂತ ಹೆಸರಿನಿಂದ ಆರಂಭವಾಗುವ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಅಂದರೆ ಪೆರ್ಡೂರು, ಹೆಬ್ರಿ, ಉಡುಪಿ ಪಣಿಯಾಡಿ, ತಿರುವನಂತಪುರ ಅನಂತಪದ್ಮನಾಭ ದೇವಸ್ಥಾನಗಳಲ್ಲಿ, ಉಡುಪಿ, ಕಾಸರಗೋಡು ಜಿಲ್ಲೆಯ ಮಧೂರು, ಮಂಜೇಶ್ವರ ಮತ್ತು ಉಡುಪಿಯ ಅನಂತೇಶ್ವರ ಮೊದಲಾದ ದೇವಸ್ಥಾನಗಳಲ್ಲಿ, ನಾಗನ (ಅನಂತ) ಸನ್ನಿಧಿಯಾದ ಕುಡುಪು, ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಎಲ್ಲ ಶ್ರೀವೆಂಕಟರಮಣ ದೇವಸ್ಥಾನಗಳಲ್ಲಿ ಅನಂತನ ವ್ರತ ನಡೆಯುತ್ತದೆ. ಮನೆಗಳಲ್ಲಿಯೂ ಅನಂತಪದ್ಮನಾಭ ವ್ರತ ನಡೆಯುತ್ತದೆ. ಸ್ವಾಮೀಜಿಯವರ ಎರಡು ತಿಂಗಳ ಚಾತುರ್ಮಾಸ ವ್ರತ ಮುಕ್ತಾಯಗೊಳ್ಳುವುದು ಇದೇ ದಿನ.

ಪಣ  ಆಕೃತಿಯ  ಕಲೆ:

ಏಳು ಹೆಡೆಯ ದರರಭೆಯ ಪಣ ರಚಿಸುವುದು ಒಂದು ಕಲೆ. ಇದರಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡವರು ಹಿರಿಯಡಕದ ಭಾಗ್ಯಶ್ರೀ ಮಠದ.  ಅವರು ಈ ಬಾರಿ 25 ಆಕೃತಿಗಳನ್ನು ರಚಿಸಿದ್ದಾರೆ. ಪ್ರತೀ ವರ್ಷ ಮೂರು ತಿಂಗಳು ಇದಕ್ಕಾಗಿಯೇ ಸಮಯವನ್ನು ಮೀಸಲಿಡುವ ಭಾಗ್ಯಶ್ರೀಯವರು ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠ, ಕೃಷ್ಣಾಪುರ, ಪೇಜಾವರ, ಪಲಿಮಾರು, ಕಾಣಿಯೂರು, ಮುಳುಬಾಗಿಲಿನ ಶ್ರೀಪಾದರಾಜ ಮಠ, ಸುಬ್ರಹ್ಮಣ್ಯ, ಕೂಡ್ಲಿ ಮಠಗಳಿಗೆ, ಪಾಜಕ ಕ್ಷೇತ್ರಕ್ಕೆ ನೀಡಿದ್ದಾರೆ. ಹಲವು ಗೃಹಸ್ಥರೂ ಇವರಿಂದ ದಭೆìಯ ಅನಂತನನ್ನು ಪಡೆದಿದ್ದಾರೆ. ಮಠಗಳಿಗೆ 15 – 16 ಇಂಚು ಎತ್ತರದ, ಗೃಹಸ್ಥರಿಗೆ 10-12 ಇಂಚು ಎತ್ತರದ ಪಣಗಳನ್ನು ನೀಡಿದ್ದಾರೆ. ಇವರಿಗೆ ಸಹಾಯಕರಾಗಿ ಸೊಸೆ ಭೈಷ್ಮಿ, ಮಗ ಹೃಷೀಕೇಶ ಸಹಕರಿಸಿದ್ದಾರೆ. “ಸಾಕಷ್ಟು ಬೇಡಿಕೆಗಳು ಬರುತ್ತಿವೆ. ಆದರೆ ಮಾಡುವುದು ಕಷ್ಟ. ಇದನ್ನು ಸಾಕಷ್ಟು ಮುಂಚೆ ಮಾಡಿ ದಾಸ್ತಾನು ಇಡಲೂ ಆಗುವುದಿಲ್ಲ. ಕೇವಲ ಎರಡು- ಮೂರು ತಿಂಗಳಲ್ಲಿ ರಚಿಸಬೇಕಾಗಿದೆ’ ಎನ್ನುತ್ತಾರೆ ಭಾಗ್ಯಶ್ರೀ.

Advertisement

Udayavani is now on Telegram. Click here to join our channel and stay updated with the latest news.

Next