Advertisement

ಪಾತ್ರವನ್ನು ಆವಾಹಿಸಿಕೊಳ್ಳುವವನೇ ನೈಜ ಕಲಾವಿದ

10:22 AM Sep 18, 2021 | Team Udayavani |

ಉಡುಪಿ : ನೀರು ತಾನಿರುವ ಪಾತ್ರೆಯ ಆಕಾರವನ್ನು ತಾಳುವಂತೆ ತನ್ನ ವ್ಯಕ್ತಿತ್ವವನ್ನು ಮರೆತು ಪಾತ್ರವನ್ನು ಆವಾಹಿಸಿಕೊಳ್ಳುವುದೇ ಕಲಾವಿದರ ನೈಜ ಯಶಸ್ಸು ಎಂದು ಕನ್ನಡ ಚಿತ್ರರಂಗದ ಹೆಸರಾಂತ ನಟ ಅನಂತ್‌ನಾಗ್‌ ವಿಶ್ಲೇಷಿಸಿದರು. ಅವರು ಶುಕ್ರವಾರ “ಉದಯವಾಣಿ’ ಕಚೇರಿಯಲ್ಲಿ ಹಮ್ಮಿಕೊಂಡ ಸಂವಾದದಲ್ಲಿ ಪಾಲ್ಗೊಂಡು ಅಭಿಪ್ರಾಯ ಗಳನ್ನು ಹಂಚಿಕೊಂಡರು.

Advertisement

ಅನಂತರ ಅವರು ಉದಯವಾಣಿ. ಕಾಮ್‌ನ ಫೇಸ್‌ಬುಕ್‌ ಲೈವ್‌ನಲ್ಲೂ ಪಾಲ್ಗೊಂಡರು. ಕಲಾವಿದ ನೀರಿನಂತೆ ಇರಬೇಕು. ಯಾವುದೇ ಪಾತ್ರೆಯಲ್ಲಿ ಹಾಕಿದರೂ ಅದರ ಆಕಾರಕ್ಕೆ ಬದಲಾಗುವ ಗುಣವನ್ನು ಹೊಂದಿರಬೇಕು. ಅಭಿನಯಕ್ಕೆ ಕಾಯಾ ವಾಚಾ ಮನಸಾ ಸಮರ್ಪಣೆಗೊಂಡಾಗ ಮಾತ್ರ ಯಾವುದೇ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ. ಇಂತಹ ಪಾತ್ರಗಳು ಜನರಲ್ಲಿ ಬೆರೆತು ಹೋಗುತ್ತವೆ. ಪ್ರಾರಂಭದಲ್ಲಿ ರಂಗಭೂಮಿ ಪ್ರವೇಶಿಸಿದ ನಾನು 50ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದೆ ಎಂದರು.

ಆಧ್ಯಾತ್ಮದ ಒಲವು : ಯತಿಗಳು ಮೊದಲು ಪ್ರಾಪಂಚಿಕರಾಗಿದ್ದು, ಬಳಿಕ ಪಾರ ಮಾರ್ಥಿಕದ ಕಡೆಗೆ ಸೆಳೆಯಲ್ಪಡುತ್ತಾರೆ.  ನಾನು ಮಾತ್ರ ಪಾರಮಾರ್ಥಿಕ ಪರಿಸರದಲ್ಲಿ ಬೆಳೆದರೂ ಪ್ರಾಪಂಚಿಕಕ್ಕೆ ಬಂದೆ. ನಾನು ಬಾಲ್ಯವನ್ನು ಕಳೆದುದು ಕಾಞಂಗಾಡ್‌ನ‌ ಆನಂದಾಶ್ರಮದಲ್ಲಿ. ಅಲ್ಲಿ ದೇವರ ಭಜನೆ, ಜಪ, ಧ್ಯಾನ, ಸೇವೆ ಮಾಡುತ್ತಿದ್ದೆ. ಆಶ್ರಮದಲ್ಲಿ ಮೂರ್ತಿ ಪೂಜೆ ಇರಲಿಲ್ಲ. ಆದರೆ ನಾಡಿನ ಎಲ್ಲ ಸಂತರ ಭಾವಚಿತ್ರಗಳಿದ್ದವು. ಇದರಿಂದ ಬಾಲ್ಯದಿಂದಲೇ ಆಧ್ಯಾತ್ಮಿಕತೆ ಮೈಗೂಡಿತ್ತು. ತಂದೆಗೆ ನಾನು ವೈದ್ಯ ಅಥವಾ ಎಂಜಿನಿಯರ್‌ ಆಗಬೇಕು ಎನ್ನುವ ಆಸೆ ಇತ್ತು. ಆದರೆ ನನಗೆ ಒಲಿದಿರುವುದು ನಟನೆ ಎಂದರು.

ಹುಲಿವೇಷದ ನಂಟು : ಉಡುಪಿಗೆ ಬರುವಾಗ ನನಗೆ ಆರೂವರೆ ವರ್ಷ. ಕಿನ್ನಿಮೂಲ್ಕಿ ಶಂಕರ ರಾಯರ ಮನೆಯಲ್ಲಿ ಅಕ್ಕ ಮನೋರಮಾ, ಶ್ಯಾಮಲಾ, ಶೈಲಾ, ನಾನು ಇದ್ದೆವು. ನನ್ನ ತಮ್ಮ ಶಂಕರನಾಗ್‌ ಇಲ್ಲೇ ಹುಟ್ಟಿದ್ದು. ಹಳೆಯ ಉಡುಪಿಗೂ ಇಂದಿನ ಉಡುಪಿಗೂ ಸಾಕಷ್ಟು ವ್ಯತ್ಯಾಸವಿದೆ. ಕೃಷ್ಣಾಷ್ಟಮಿಯಲ್ಲಿ ಹುಲಿವೇಷ, ಕ್ರಿಸ್ಮಸ್‌ ವೇಳೆ ಕ್ಯಾರೊಲ್‌ ಹಾಡುವುದು, ನೃತ್ಯ ಮಾಡುತ್ತಿದ್ದೆ ಎಂದು ಅನಂತನಾಗ್‌ ನೆನಪುಗಳನ್ನು ಹಂಚಿಕೊಂಡರು.

ಹಾಸ್ಯ ಪಾತ್ರಗಳತ್ತ ಒಲವು : ವೈಯಕ್ತಿಕವಾಗಿ ನನಗೆ ಹಾಸ್ಯಭರಿತ ಪಾತ್ರಗಳಲ್ಲಿ ಒಲವಿದೆ. ನಮ್ಮ ಮಾತುಗಳು ಜನರನ್ನು ನಗಿಸುತ್ತವೆ. ಹಾಸ್ಯಪಾತ್ರಗಳಲ್ಲಿ ಹಲವು ವಿಧಗಳಿವೆ. ಹಾಸ್ಯವೇ ಸ್ವ-ಭಾವವಾಗಿರುವ ಪಾತ್ರಗಳು ನನಗೆ ಇಷ್ಟ. ಚಿತ್ರರಂಗಕ್ಕೆ ಪ್ರವೇಶ ಪಡೆದ ಪ್ರಾರಂಭದ ವರ್ಷಗಳಲ್ಲಿ ಕಾಲ ಹೆಚ್ಚು ಯೋಚನೆ ಮಾಡದೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೆ. ಅನಂತರ ಸಮಾಜಕ್ಕೆ ಸಂದೇಶ ನೀಡುವ ಮತ್ತು ಜನಾಭಿರುಚಿ ಚಿತ್ರಗಳನ್ನು ಒಪ್ಪಿಕೊಳ್ಳಲಾರಂಭಿಸಿದೆ. ಇಂದಿಗೂ ಮುಖ್ಯ ಪಾತ್ರಗಳನ್ನು ಆಧರಿಸಿದ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

Advertisement

ಶಂಕರ್‌ ಬಹಳ ಚತುರ : ಶಂಕರನಾಗ್‌ ನನಗಿಂತ ಆರು ವರ್ಷ ಚಿಕ್ಕವನು. ಆಶ್ರಮದ ಸಂಸ್ಕಾರ ಮತ್ತು ಸಂಸ್ಕೃತಿ ಅವನಲ್ಲಿ ಇತ್ತು. ಓದಿನಲ್ಲಿ ತುಂಬಾ ಚುರುಕು. ಅವನನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿತ್ತು. ಶಂಕರ್‌ಗೆ ಶಾಲೆಗಳಲ್ಲಿ ಆಯೋಜಿಸುತ್ತಿದ್ದ ಏಕಪಾತ್ರಾಭಿನಯ, ನಾಟಕಗಳಲ್ಲಿ ಬಹುಮಾನ ಸಿಗುತ್ತಿತ್ತು. ಕ್ರಮೇಣವಾಗಿ ರಂಗಭೂಮಿ ಪ್ರವೇಶಿಸಿದ. ಅನಂತರ ಚಿತ್ರರಂಗಕ್ಕೆ ಪ್ರವೇಶಿಸಿ ವಿವಿಧ ಚಿತ್ರಗಳಲ್ಲಿ ನಟಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ. ಇದರ ನಡುವೆ ಮಾಲ್ಗುಡಿ ಡೇಸ್‌, ಜತೆಗೆ ಹಲವು ಯೋಜನೆಗಳಿದ್ದವು.  ದೇವರ ಇಚ್ಛೆ, 35ನೇ ವರ್ಷಕ್ಕೆ ಅವನನ್ನು ದೇವರು ಕರೆಸಿಕೊಂಡರು ಎಂದರು ಅನಂತನಾಗ್‌.

 ಸಿನೆಮಾಕ್ಕೆ ಸವಾಲು, ದೇಸೀ ಒಟಿಟಿ ಅಗತ್ಯ : ಪ್ರಸ್ತುತ ಕೊರೊನಾ ಕಾಲಘಟ್ಟದಲ್ಲಿ 18 ತಿಂಗಳುಗಳಿಂದ ಚಿತ್ರರಂಗ ಬಂದ್‌ ಆಗಿದೆ. ಚಿತ್ರ ಮಂದಿರಗಳು ತುಂಬುತ್ತಿಲ್ಲ. ಪ್ರಸ್ತುತ ಒಟಿಟಿ ಹಾವಳಿಯಿಂದ ಸೆನ್ಸಾರ್‌ ಮಾಡದ ಚಿತ್ರಗಳು ರಾಜಾರೋಷವಾಗಿ ಬಿಡುಗಡೆಯಾಗುತ್ತಿವೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಪ್ರತಿಬಿಂಬಿಸುವ ದೊಡ್ಡ ಸವಾಲು ಎಲ್ಲರ ಮುಂದೆ ಇದೆ. ಕೊರೊನಾದಿಂದಾಗಿ ಚಿತ್ರಗಳಿಗೆ ಮಾರುಕಟ್ಟೆ ಒದಗಿಸುವುದು ಕಷ್ಟವಾಗುತ್ತಿದೆ.

ವಿದೇಶಿಗರ ನೆಟ್ ಫ್ಲಿಕ್ಸ್‌ನಂತಹ ಒಟಿಟಿಗಳ ಬದಲು ನಮ್ಮದೇ ದೇಶ ಅಥವಾ ರಾಜ್ಯದ ಒಟಿಟಿ ವೇದಿಕೆ ಪ್ರಾರಂಭವಾಗಬೇಕಿದೆ. ಸರಕಾರಗಳು ಅಥವಾ ಖಾಸಗಿಯವರು ಯಾ ಸಂಯುಕ್ತವಾಗಿ ಇದಕ್ಕೆ ಮನಸ್ಸು ಮಾಡಬೇಕಿದೆ. 1970ರಿಂದ ಇದುವರೆಗೆ ಚಿತ್ರರಂಗ ಹಂತ ಹಂತವಾಗಿ ಬದಲಾವಣೆಯಾಗುತ್ತಲೇ ಇದೆ.

ಚಿತ್ರ ಎನ್ನುವುದು ಮನೋರಂಜನೆಯ ಜತೆಗೆ ಜನರಿಗೆ ಮಾಹಿತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಬೇಕು. ಕೇವಲ ಮನೋರಂಜನೆಗೆ ಸೀಮಿತಗೊಂಡದ ಚಿತ್ರ ಪ್ರತೀ ಬಾರಿ ಯಶಸ್ವಿಯಾಗಬೇಕು ಎಂದೇನಿಲ್ಲ. ಈಗ ಸವಾಲುಗಳ ಜತೆಗೆ ಹೊಸ ಪ್ರತಿಭೆಗಳಿಗೆ ಸಿನೆಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ತೆರೆದುಕೊಳ್ಳುತ್ತಿವೆ. ಯಾವ ಚಿತ್ರ ಯಶಸ್ವಿಯಾಗುತ್ತದೆ, ಯಾವುದು ಸೋಲುತ್ತದೆ ಎಂದು ಊಹಿಸುವುದು ಯಾರಿಗೂ ಸಾಧ್ಯವಿಲ್ಲ. ಇದು ಸತ್ವಪರೀಕ್ಷೆಯ ಕಾಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next