ಸಿದ್ದಾಪುರ: ಭಾರತೀಯ ಮಣ್ಣಿನಲ್ಲಿ ಹುದುಗಿರುವ ಪರಂಪರೆಯನ್ನು ಹೊರ ಪ್ರಪಂಚಕ್ಕೆ ವೈಜ್ಞಾನಿಕವಾಗಿ ತೆರದುಕೊಳ್ಳವ ಹಾಗೇ ಕೆಲಸವಾಗಬೇಕು ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರು ಹೇಳಿದರು. ಅವರು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಹಾಗೂ ಯುವ ವಿಪ್ರವೇದಿಕೆ ಜಂಟಿ ಆಶ್ರಯದಲ್ಲಿ ಡಿ.2ರಂದು ಸಿದ್ದಾಪುರ ಶ್ರೀ ಅನಂತಪದ್ಮನಾಭ ಸಭಾಗೃಹದಲ್ಲಿ ನಡೆದ ಯುವ ವಿಪ್ರೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಭಾರತೀಯ ಮಣ್ಣಿನಲ್ಲಿರುವ ಸತ್ವ, ಸಿದ್ಧಾಂತ, ಧರ್ಮ, ನೀತಿ, ಸಂಸ್ಕೃತಿಯನ್ನು ಪ್ರಪಂಚಕ್ಕೆ ಪರಿಚಯಿಸುವ ಕೆಲಸ ಈಗ ಆಗುತ್ತಿದೆ. ಪ್ರಪಂಚಕ್ಕೆ ಬದುಕಿನ ಸಿದ್ಧಾಂತ, ತತ್ವವನ್ನು ಹೇಳುವ ತಾಕತ್ತು ಭಾರತಕ್ಕೆ ಇದೆ. ಅದನ್ನು ಹೇಳುವ ಕೆಲಸವಾಗಬೇಕಾದರೆ ಜ್ಞಾನದ ಕ್ರಾಂತಿಯಾಗಬೇಕೆಂದು ತಿಳಿಸಿದರು.
ಹಿಂದೂ ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯನ್ನು ವ್ಯವಸ್ಥಿತವಾಗಿ ತುಳಿಯುವ ಕೆಲಸ ನಡೆಯುತ್ತಿದೆ. ವಿದೇಶೀಯರು ಆಳಿದಾಗ ಅವರು ನಂಬಿಕೆಯ ಬಗ್ಗೆ ಅವಹೇಳನ ಮಾಡಿಲ್ಲ. ಆದರೆ ಸ್ವಾತಂತ್ರ್ಯದ ಅನಂತರದ ದಿನಗಳಿಂದ ನಂಬಿಕೆಯ ಅವಹೇಳನ ನಡೆಯುತ್ತಿದೆ. ಎಷ್ಟೆ ಅವಹೇಳನಗಳು ನಡೆದರೂ ನಮ್ಮ ದೇಶದ ಭಾಷೆ, ಸಂಸ್ಕೃತಿ ನಾಶಮಾಡಲು ಸಾಧ್ಯವಾಗಿಲ್ಲ. ಅದು ಇನ್ನಷ್ಟು ಗಟ್ಟಿಯಾಗಿ ಸಾಗುತ್ತಿದೆ ಎಂದರು. ಕುಂದಾಪುರ ತಾಲೂಕು ಯುವ ವಿಪ್ರವೇದಿಕೆ ಅಧ್ಯಕ್ಷ ವಿಶ್ವಾಸ್ ಕುಂಜತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ರಾಘವೇಂದ್ರ ಅಡಿಗ, ಮಹಿಳಾ ವೇದಿಕೆ ಅಧ್ಯಕ್ಷೆ ಪವಿತ್ರಾ ಆರ್. ಅಡಿಗ, ಸಿದ್ದಾಪುರ ವಲಯಾಧ್ಯಕ್ಷ ರಂಗನಾಥ ಉಡುಪ, ಯುವ ವಿಪ್ರ ವೇದಿಕೆ ಸಿದ್ದಾಪುರ ವಲಯಾಧ್ಯಕ್ಷ ವಸಿಷ್ಟ ಮಂಜ, ತಾಲೂಕು ವಿಪ್ರ ಕಾರ್ಯದರ್ಶಿ ವಿನಾಯಕ ಅಡಿಗ ಗುಡ್ಡಟ್ಟು ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಎನ್. ಸತೀಶ ಅಡಿಗ ಸ್ವಾಗತಿಸಿದರು. ಪಂಚಾಂಗಕರ್ತ ವಾಸುದೇವ ಜೋಯಿಸ್ ತಟೋಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ವೆಂಕಟರಮಣ ಭಟ್ ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಭಟ್ ಯಳಂತೂರು ವಂದಿಸಿದರು.