Advertisement

ಅನಂತ ಆಸಕ್ತಿ

10:47 AM Dec 11, 2017 | |

“ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಮೇಕಿಂಗ್‌ ವೀಡಿಯೋ ನೋಡುತ್ತಿದ್ದಂತೆ ಬರುವ ಮೊದಲ ಪ್ರಶ್ನೆಯೆಂದರೆ, ಅನಂತ್‌ನಾಗ್‌ ಅವರು ಇತ್ತೀಚೆಗೆ ತಮ್ಮ ಚಿತ್ರಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರಾ ಎಂದು? ಅದಕ್ಕೆ ಕಾರಣ, ಪ್ರತಿ ದೃಶ್ಯದಲ್ಲೂ ಅವರು ತೊಡಗಿಸಿಕೊಳ್ಳುತ್ತಿದ್ದ ರೀತಿ. ಈ ಕುರಿತು ಅವರನ್ನು ಕೇಳಿದರೆ, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ನಂತರ ಹೆಚ್ಚು ಹೆಚ್ಚು ಆಸಕ್ತಿ ವಹಿಸಬೇಕು ಎಂದನಿಸುತ್ತಿದೆ ಎನ್ನುತ್ತಾರೆ ಅವರು.

Advertisement

“ಇತ್ತೀಚೆಗೆ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದನಿಸುತ್ತದೆ. ಹಾಗೆ ತೊಡಗಿಸಿಕೊಂಡರೆ ನಿರ್ದೇಶಕರಿಗೂ ಒಂದಿಷ್ಟು ಸಹಾಯವಾಗುತ್ತದೆ ಮತ್ತು ಅದರಿಂದ ನನಗೂ ಒಂದಿಷ್ಟು ತೃಪ್ತಿ ಸಿಗುತ್ತದೆ. ಅದೇ ಕಾರಣಕ್ಕೆ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ  ನಂತರ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದೇನೆ. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ನಾನೊಬ್ಬನೇ ಅಲ್ಲ, ಗಾಯತ್ರಿ ಸಹ ತೊಡಗಿಸಿಕೊಂಡಿರುವುದನ್ನು ನೋಡಬಹುದು.

ಆಕೆ ನನ್ನ ಜೊತೆಗೆ ಶೂಟಿಂಗ್‌ಗೆ ಬಂದಿದ್ದರು. ಅವರು ಸಹ ಉತ್ಸಾಹದಿಂದ ಒಂದಿಷ್ಟು ಟಿಪ್ಸ್‌ಗಳನ್ನು ಕೊಟ್ಟರು’ ಎನ್ನುತ್ತಾರೆ ಅನಂತ್‌ ನಾಗ್‌. ಅನಂತ್‌ ಅವರು ಹಿರಿಯ ನಿರ್ದೇಶಕ ಭಗವಾನ್‌ ಅವರಿಂದ ಶುರುವಾಗಿ ಹೇಮಂತ್‌ ರಾವ್‌, ರಿಷಭ್‌ ಶೆಟ್ಟಿ ಸೇರಿದಂತೆ ಹಲವು ನಿರ್ದೇಶಕರ ಜೊತೆಗೆ ಇತ್ತೀಚೆಗೆ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರ ಜೊತೆಗೂ ಒಂದು ವಿಭಿನ್ನವಾದ ಅನುಭವ ಎನ್ನುತ್ತಾರೆ ಅವರು.

“ಈ ವಯಸ್ಸಿನಲ್ಲೂ ಭಗವಾನ್‌ ಅವರ ಉತ್ಸಾಹ ನೋಡಬೇಕು. ನಮ್ಮ ಗುರುಗಳು ಅವರು. 70ರ ದಶಕದಲ್ಲಿ ನಾನು ಇಲ್ಲಿಗೆ ಬಂದ ಹೊಸದರಲ್ಲಿ ಕನ್ನಡ ಸಂಸ್ಕೃತಿ ಮತ್ತು ಚಿತ್ರಗಳ ಬಗ್ಗೆ ನನಗೆ ಮನವರಿಕೆ ಮಾಡಿಕೊಟ್ಟವರು ಅವರು. ಇನ್ನು ರಿಷಭ್‌ ಇತ್ತೀಚೆಗೆ ತಮ್ಮ ಚಿತ್ರದಲ್ಲಿ 14 ನಿಮಿಷಗಳ ಒಂದು ದೃಶ್ಯವನ್ನು ಇಟ್ಟು ಚಾಲೆಂಜ್‌ ಇಟ್ಟಿದ್ದರು ಅವರು. 14 ನಿಮಿಷಗಳ ಒಂದು ದೃಶ್ಯದ ಚಿತ್ರೀಕರಣಕ್ಕೆ ಒಂದಿಡೀ ದಿನ ರಿಹರ್ಸಲ್‌ ಮಾಡಿ, ಮರುದಿನದ ಕೊನೆಗೆ ಶಾಟ್‌ ಓಕೆಯಾಯಿತು.

ಬಹಳ ಸವಾಲಿನ ದೃಶ್ಯ ಅದು. ಮಾಡದಿದ್ದರೆ, 50 ವರ್ಷಗಳ ಕಾಲ ಏನು ಮಾಡುತಿದ್ರಿ ಎಂದು ಯಾರೂ ಹೇಳಿಬಿಟ್ಟಾರೋ ಎಂಬ ಭಯದಿಂದ ಮಾಡಿದೆ’ ಎಂದು ತಮ್ಮ ಟಿಪಿಕಲ್‌ ನಗೆ ನಕ್ಕರು ಅನಂತ್‌ ನಾಗ್‌. ಇತ್ತೀಚಿನ ದಿನಗಳಲ್ಲಿ ಅವರಿಗೆ ಬಹಳ ಚಿತ್ರಕಥೆಗಳು ಬರುತ್ತಿವೆಯಂತೆ. “ಯಾರು ಬಂದರೂ ಮೊದಲು ಸ್ಕ್ರಿಪ್ಟ್ ಕೊಡಿ ಎಂದು ಕೇಳುತ್ತೇನೆ. ಅದರಿಂದ ಅವರಿಗೂ ಒಂದು ಬೌಂಡ್‌ ಸ್ಕ್ರಿಪ್ಟ್ ಮಾಡುವ ಅಭ್ಯಾಸ ಆಗುತ್ತದೆ.

Advertisement

ಇಲ್ಲವಾದರೆ ಒನ್‌ಲೈನ್‌ ಇಟ್ಟುಕೊಂಡು ಬಂದಿರುತ್ತಾರೆ. ಪ್ಲಾನಿಂಗ್‌ ಸಹ ಇರುವುದಿಲ್ಲ. ಅದೇ ಕಾರಣಕ್ಕೆ ಸ್ಕ್ರಿಪ್ಟ್ ಕೇಳುತ್ತೇನೆ. ಶೂಟಿಂಗ್‌ ಸ್ಪಾಟ್‌ಗೆ ಬಂದು ಪ್ಲಾನ್‌ ಮಾಡುತ್ತಾ ಕುಳಿತರೆ, ಕೆಲಸ ಹೇಗೆ ಸಾಗುತ್ತದೆ? ಇತ್ತೀಚೆಗೆ ಓದುತ್ತಾ ಇದ್ದೆ, ಎರಡು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳೆಲ್ಲವೂ ಸೋತಿವೆ ಮತ್ತು ಅದರಿಂದ ನಿರ್ಮಾಪಕರು 50-60 ಕೋಟಿ ಕಳೆದುಕೊಂಡಿದ್ದಾರೆ ಎಂದು. ನಿರ್ಮಾಪಕರ ಗತಿ ಏನು? ಆ ಲಾಸ್‌ನ ಅವರು ಹೇಗೆ ತಡೆದುಕೊಳ್ಳುತ್ತಾರೆ?

ಒಂದು ಸಿನಿಮಾನ ಹೇಗೆ ಬೇಕಾದರೂ ಮಾಡಬಹುದು. ಒಂದು ಸಿನಿಮಾನ ಇದೇ ರೀತಿ ಮಾಡಬೇಕು ಎಂಬ ಫಾರ್ಮುಲಾ ಎಲ್ಲೂ ಇಲ್ಲ. ಆದರೆ, ಒಂದು ಚಿತ್ರ ಚೆನ್ನಾಗಿ ಬರಬೇಕಾದರೆ ಪ್ಲಾನಿಂಗ್‌ ಅವಶ್ಯಕತೆ ಹೆಚ್ಚಿರುತ್ತದೆ ಮತ್ತು ಪಕ್ಕಾ ಸ್ಕ್ರಿಪ್ಟ್ ಇದ್ದರೆ ಪ್ಲಾನಿಂಗ್‌ ಸಾಧ್ಯ’ ಎನ್ನುತ್ತಾರೆ ಅನಂತ್‌ ನಾಗ್‌. ಆದರೆ, ಈ ಸಂಸðƒತಿಯೇ ಕಡಿಮೆಯಾಗುತ್ತಿದೆ ಎಂದು ಗಮನಿಸಿದ್ದಾರೆ ಅನಂತ್‌ ನಾಗ್‌. “ಕೆಲವರು ಎಲ್ಲವನ್ನೂ ಪಕ್ಕಾ ಮಾಡಿಕೊಂಡೇ ಹೊರಡುತ್ತಾರೆ.

ಯಾಕೆ ಸ್ಕ್ರಿಪ್ಟ್ ಬೇಕು ಎನ್ನುತ್ತೀನಿ ಎಂದರೆ, ಒಬ್ಬ ನಟನಾಗಿ ನಾನು ನನ್ನ ಕೆಲಸ ಮಾಡಬಹುದು. ಆದರೆ, ನಿರ್ದೇಶಕರ ತಲೆಯಲ್ಲಿ ನನ್ನ ಪಾತ್ರದ ಬಗ್ಗೆ ಏನಿದೆ? ಅವರು ನನ್ನ ಪಾತ್ರದಿಂದ ಏನು ಬಯಸುತ್ತಾರೆ ಅಂತ ಗೊತ್ತಾಗಬೇಕಲ್ಲಾ? ಈಗ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಪಾತ್ರಗಳು ಬಂದರೆ ಅದನ್ನು ಹೇಗೆ ಮಾಡೋದು. ಉದಾಹರಣೆಗಳಿದ್ದರೆ ಸರಿ, ಇಲ್ಲವಾದರೆ ಅದನ್ನು ನಾನು ನಿಭಾಯಿಸಬೇಕು.

ನಿರ್ದೇಶಕರಿಗೂ ಪಾತ್ರದ ಬಗ್ಗೆ ಚೆನ್ನಾಗಿ ಗೊತ್ತಿದ್ದರೆ ಆಗ ಇನ್ನಷ್ಟು ಚೆನ್ನಾಗಿ ಮೂಡಿಬರುತ್ತದೆ. ಯಾರ ಸಹಾಯವೂ ಇಲ್ಲದೆ ಒಬ್ಬನೇ ಮಾಡಬೇಕಾದರೆ, ಅಂತರ್ಮುಖೀಯಾಗಿ ನಾನು ಪಾತ್ರಕ್ಕೆ ಶರಣಾಗಬೇಕಾಗುತ್ತದೆ. ಆಗ ಅದೇ ಟಿಪ್ಸ್‌ ಹೇಳುತ್ತದೆ ಮತ್ತು ಅದೇ ನನ್ನಿಂದ ಅಭಿನಯ ತೆಗೆಸುತ್ತದೆ. ಹಾಗಾಗಿ ಮೊದಲೇ ಎಲ್ಲಾ ಪಕ್ಕಾ ಆಗಿದ್ದರೆ, ಸೆಟ್‌ನಲ್ಲಿ ಕಷ್ಟ ಆಗುವುದಿಲ್ಲ’ ಎಂಬ ಅಭಿಪ್ರಾಯ ಅವರಿಂದ ಬರುತ್ತದೆ.

ಅದಕ್ಕೆ ಉದಾಹರಣೆಯಾಗಿ ಅವರು “ವಾಸ್ತು ಪ್ರಕಾರ’ ಚಿತ್ರದ ಬಗ್ಗೆ ಹೇಳುತ್ತಾರೆ. “ಯೋಗರಾಜ್‌ ಭಟ್‌ ಮೊದಲು ಪಕ್ಕಾ ಸ್ಕ್ರಿಪ್ಟ್ ತೆಗೆದುಕೊಂಡು, ರೆಡಿಯಾಗಿ ಬರೋರು. “ವಾಸ್ತು ಪ್ರಕಾರ’ ಚಿತ್ರೀಕರಣ ಶುರುವಾಗುವ ಮುನ್ನ ಸಾಕಷ್ಟು ಚರ್ಚೆಯೇನೋ ಆಗಿತ್ತು. ಆ ಚರ್ಚೆಯಲ್ಲಿ ನನ್ನ ಪಾತ್ರ ಬಹಳ ಅಗ್ರೆಸಿವ್‌ ಆಗಿತ್ತು. ಆದರೆ, ಅದೇನಾಯಿತೋ ಚಿತ್ರೀಕರಣ ಮಾಡುವಷ್ಟರಲ್ಲಿ ಬದಲಾಗಿತ್ತು. ಕೊನೆಗೆ ಸುಧಾರಾಣಿ ಅವರು ಗಟ್ಟಿಗಿತ್ತಿಯಾಗಿ, ನಾನು ಮೆದುವಾದ ಪಾತ್ರದಲ್ಲಿ ಕಾಣಿಸಿಕೊಂಡೆ.

ಅದೇ ಕಾರಣಕ್ಕೆ ಸ್ಕ್ರಿಪ್ಟ್ ಪಕ್ಕಾ ಮಾಡಿಕೊಂಡು ಬನ್ನಿ ಅಂತ ಅವರಿಗೆ ಹೇಳುತ್ತಲೇ ಇರುತ್ತೀನಿ. “ಮುಂಗಾರು ಮಳೆ’ಯಲ್ಲಿ ಎಲ್ಲವೂ ಪಕ್ಕಾ ಆಗಿತ್ತು. ಆ ನಂತರದ ಚಿತ್ರಗಳಲ್ಲಿ, ಸ್ಕ್ರಿಪ್ಟ್ ಬರಿದ್ದಾಗ ಕೇಳಿದಾಗ, “ಬರೆಯೋಕೆ ಆಗುತ್ತಿಲ್ಲ, ಅಲ್ಲೇ ಬಂದು ಬರೀತೀನಿ ಎಂದು ಸೆಟ್‌ಗೆ ಬಂದು ಬರೆಯೋರು. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಪ್ರೀ-ಪ್ರೊಡಕ್ಷನ್‌ಗಂತಲೇ ಎರಡು ತಿಂಗಳ ಕಾಲ ಕೆಲಸ ಮಾಡಿ, ಪಕ್ಕಾ ಮಾಡಿಕೊಂಡೇ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ ಅನಂತ್‌ ನಾಗ್‌.

ಈಗ ಎಲ್ಲಾ ಕಡೆ ವಂಶಪಾರಂಪರ್ಯವೇ
ಕರ್ನಾಟಕದಲ್ಲಿ ಚುನಾವಣೆಗಳು ಸಮೀಪಿಸುತ್ತಿವೆ. ಅನಂತ್‌ ನಾಗ್‌ ಅವರು ಹಿಂದೊಮ್ಮೆ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಶಾಸಕ, ಸಚಿವರಾಗಿದ್ದವರು. ಹಲವು ವರ್ಷಗಳಿಂದ ಚುನಾವಣಾ ರಾಜಕೀಯದಿಂದ ದೂರವೇ ಇದ್ದರು. ಈಗ ಚುನಾವಣೆಗಳು ಸಮೀಪಿಸುತ್ತಿರುವುದರಿಂದ, ಯಾವುದಾದರೂ ಪಕ್ಷಗಳು ಅವರನ್ನು ಸೆಳೆಯುವುದಕ್ಕೆ ಪ್ರಯತ್ನಿಸುತ್ತಿವೆಯಾ ಎಂದರೆ,

“ನಾವು ಹಿಂದೆ ಸರಿದು ಬಹಳ ಕಾಲವಾಯಿತು. ಹಿಂದೆ ವಂಶಪಾರಂಪರ್ಯದ ವಿರುದ್ಧ ನಾವು ಹೋರಾಟ ಮಾಡಿದ್ದೆವು. ಈಗ ಎಲ್ಲಾ ರಾಜ್ಯಗಳಲ್ಲೂ, ಎಲ್ಲಾ ಪಕ್ಷಗಳಲ್ಲೂ ವಂಶಪಾರಂಪರ್ಯವಿದೆ. ಹಾಗಾಗಿ ಯಾರ ಬಗ್ಗೆಯೂ ಧೂಷಣೆ ಮಾಡುವುದಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ ಅನಂತ್‌ ನಾಗ್‌.

Advertisement

Udayavani is now on Telegram. Click here to join our channel and stay updated with the latest news.

Next