Advertisement
ಕನ್ನಡದ ಬಗ್ಗೆ ಅತ್ಯಂತ ಅಭಿಮಾನ, ಪ್ರೀತಿ, ಕಳಕಳಿಯಿಂದ ಮಾತಾಡಿರುವುದನ್ನು ತಿರುಚಿ, ಕೆಲವರಿಗೆ ನೋವಾಗುವಂತೆ ಮಾತನಾಡಿದ್ದಾರೆ ಎನ್ನುತ್ತಿದ್ದಾರೆ. ವಾಸ್ತವಿಕತೆ ಏನೇ ಇರಲಿ. ಇದರಿಂದ ಕನ್ನಡಿಗರಿಗೆ ನೋವಾಗಿದೆ ಎಂದಾದರೆ ಕ್ಷಮೆ ಕೇಳುವುದರಲ್ಲಿ ನನಗೆ ಯಾವುದೇ ಅಳುಕಿಲ್ಲ. ಕರ್ನಾಟಕದ ಜನರು ನನ್ನನ್ನು ಬೆಳೆಸಿದ್ದಾರೆ. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರ ಎದುರು ಕ್ಷಮೆ ಕೇಳಲು ನನಗೆ ಏನೂ ತೊಂದರೆ ಇಲ್ಲ. ಕನ್ನಡದ ಬಗ್ಗೆ ಅಧ್ಯಯನ ಇನ್ನಷ್ಟು ಅಳವಾಗಿ ಆಗಬೇಕು. ಕನ್ನಡ ತರ್ಜುಮೆ ಮಾಡಿಕೊಂಡು ಕೇಳುವ ಪರಿಸ್ಥಿತಿಗೆ ಬರಬಾರದು. ನಮ್ಮ ಭಾಷೆ ಯಾವತ್ತು ನಮ್ಮ ನೆಲದಲ್ಲಿ ವಿಜೃಂಭಿಸುತ್ತಿರಬೇಕು. ನನ್ನಿಂದ ಕನ್ನಡಿಗರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಫೇಸ್‌ಬುಕ್ ವಿಡಿಯೋ ಮೂಲಕ ಅನಂತ್ ಕುಮಾರ್ ಹೆಗಡೆ ಮನವಿ ಮಾಡಿಕೊಂಡಿದ್ದಾರೆ.
Related Articles
Advertisement
ಅನಂತ ಕುಮಾರ್ ಹೆಗಡೆಯವರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮತ್ತಷ್ಟು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದು, ಕೇಂದ್ರದಿಂದ ಅನುದಾನದಲ್ಲಿ ಬದುಕುವ ಗಂಜಿ ಗಿರಾಕಿಗಳು ಎಂದು ಟೀಕಿಸಿರುವುದಕ್ಕೂ ಗೃಹ ಸಚಿವ ರಾಮಲಿಂಗಾರೆಡ್ಡಿ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಸಹ ಮೋದಿಯ ಗಂಜಿ ಗಿರಾಕಿಗಳು, ಜನರ ತೆರಿಗೆ ಹಣವನ್ನು ನೀವೂ ನೆಕ್ಕುತ್ತಾ ಇದ್ದೀರಾ ?ಎಂದು ಅನಂತಕುಮಾರ್ ಹೆಗಡೆಗೆ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
ಸುರೇಶ್ ಕುಮಾರ್ ವಿರೋಧ: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಸ್ವಪಕ್ಷೀಯರೇ ತಿರುಗಿ ಬಿದ್ದಿದ್ದಾರೆ. ಬಿಜೆಪಿ ವಕ್ತಾರರಾಗಿರುವ ಶಾಸಕ ಸುರೇಶ್ ಕುಮಾರ್ ಕನ್ನಡ ಭಾಷೆ ಬಳಕೆ ಕುರಿತು ಅನಂತ ಕುಮಾರ್ ಹೆಗಡೆ ಹೇಳಿಕೆಯನ್ನು ವಿರೋಧಿಸಿ, ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ, ಬೀದರ್‌ನಿಂದ ಹಿಡಿದು ಚಾಮರಾಜನಗರದ ವರೆಗೆ ವೈವಿಧ್ಯಮಯದಿಂದ ಕೂಡಿರುವ ಕನ್ನಡ ಭಾಷೆಯ ಬಳಕೆಯ ಬಗ್ಗೆ ಆಯಾ ಪ್ರದೇಶದಲ್ಲಿ ಅಭಿಮಾನ ಇದೆ. ಸಚಿವರ ಈ ರೀತಿಯ ಹೇಳಿಕೆ ಒಳ್ಳೆಯ ಸಂಪ್ರದಾಯವಲ್ಲ. ಅದನ್ನು ವಾಪಸ್ ಪಡೆಯುವಂತೆ ಬಹಿರಂಗವಾಗಿಯೇ ಅನಂತಕುಮಾರ ಹೆಗಡೆಗೆ ಸುರೇಶ್‌ಕುಮಾರ್ ಆಗ್ರಹಿಸಿದ್ದಾರೆ.
ನಟ ಹಾಗೂ ಮಾಜಿ ಶಾಸಕ ಜಗ್ಗೇಶ್ ಕೂಡ ಅನಂತಕುಮಾರ್ ಹೆಗಡೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹೆಗಡೆಯವರೆ ನೀವು ವ್ಯಾಕರಣ ಶುದ್ಧ ಕನ್ನಡ ಮಾತನಾಡುತ್ತೀರಿ, ಅದು ನನಗೆ ಇಷ್ಟವಾಗಿದೆ. ಹಾಗೆಂದು ಉಳಿದ ಭಾಗದ ಕನ್ನಡಿಗರು ಕನ್ನಡ ಮಾತನಾಡಲು ಬಾರದಿರುವರು ಎನ್ನುವುದು ಸರಿಯಲ್ಲ. ನಾಡಿನ ಪ್ರತಿಯೊಂದು ಭಾಗಕ್ಕೆ ಅದರದೇ ಭಾಷಾ ಸೊಗಡಿದೆ. ನಾನು ತುಮಕೂರು ಗ್ರಾಮೀಣ ಭಾಗದವನು. ನನ್ನ ಭಾಗದಲ್ಲಿ ಗ್ರಾಮೀಣ ಒಕ್ಕಲಿಗ ಮನೆತನದ ಭಾಷೆ ಮಾತನಾಡುತ್ತೇನೆ. ಕಲಾವಿದನಾಗಿ ಎಲ್ಲಾ ಭಾಗದ ಭಾಷೆ ತಪ್ಪಿಲ್ಲದೇ ಬಳಸುತ್ತೇನೆ. ನನಗೆ ಇಷ್ಟರ ಮಟ್ಟಿಗೆ ವ್ಯಾಕರಣದ ತಾಲೀಮು ಇದೆ. ಮಕ್ಕಳಿಗೆ ವ್ಯಾಕರಣ ಶುದ್ಧ ಕನ್ನಡ ಕಲಿಯುವುದಕ್ಕೆ ಪ್ರೇರೇಪಿಸಿರಿ ಎಂದು ತಿವಿದಿದ್ದಾರೆ.