ಶಿರಸಿ: ಸಿದ್ದಾಪುರ ಶಿರಸಿ ತಾಲೂಕುಗಳಿಗೆ ಹೊಂದಿಕೊಡಿರುವ ಸೊರಬ ಚಂದ್ರಗುತ್ತಿ ಹೋಬಳಿಯ ಹಳ್ಳಿಗಳು ಭಾರೀ ಕಲ್ಲುಗಾರಿಕೆಯಿಂದ ನಿರ್ಜೀವ ಆಗುವ ಪರಿಸ್ಥಿತಿಗೆ ಬಂದಿದ್ದು, ಶಿರಸಿ, ಸಿದ್ದಾಪುರ ತಾಲೂಕಿನಲ್ಲಿಯೂ ದುಷ್ಪರಿಣಾಮ ಬೀರಬಹುದೇ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಅಶೀಸರ ಆತಂಕಿಸಿದ್ದಾರೆ.
ಚಂದ್ರಗುತ್ತಿ ಬಸ್ತಿಕೊಪ್ಪದಲ್ಲಿ ನಡೆದಿರುವ ಗಣಿಗಾರಿಕೆಯಿಂದ ಪ್ರಸಿದ್ಧ ರೇಣುಕಾಂಬಾ ದೇವಾಲಯದ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಗ್ರಾಮಗಳ ಮನೆಗಳು ಸ್ಪೋಟದಿಂದ ಬಿರುಕು ಬಿಟ್ಟಿವೆ. ಕೃಷಿ ತೋಟಗಾರಿಕೆ ನಾಶವಾಗಿ ಬರಗಾಲ ಎದುರಿಸುತ್ತಿವೆ. ಬೋರ್ ವೆಲ್‌ಗಳಲ್ಲಿ ತೆರೆದ ಬಾವಿಗಳಲ್ಲಿ ನೀರಿಲ್ಲ, ಸ್ವಲ್ಪ ನೀರಿದ್ದರೂ ಮಾಲಿನ್ಯವಾಗಿದೆ. ಪ್ರತಿ ದಿನ ಗಣಿ ಸ್ಪೋಟಕ ನಡೆಯುವದರಿಂದ ಆರೋಗ್ಯ ಪೂರ್ಣ ಹಾಳಾಗಿದೆ. ಗರ್ಭಪಾತ, ಕ್ಷಯ, ಹೃದಯ ಕಾಯಿಲೆ ಹೆಚ್ಚಾಗಿದೆ. ಎಲ್ಲ ಧೂಳಿನಿಂದ ತುಂಬಿದೆ. ರಸ್ತೆ ಪೂರ್ಣ ಹಾಳಾಗಿದೆ.
ಚಂದ್ರಗುತ್ತಿ ಜನರ ಆಹ್ವಾನದಂತೆ ವೃಕ್ಷಲಕ್ಷ ಆಂದೋಲನದ ತಜ್ಞರ ತಂಡ ಮಾರ್ಚ್ 2ನೇವಾರ ಚಂದ್ರಗುತ್ತಿಗೆ ಭೇಟಿ ನೀಡಿ ಸ್ಥಳ ಸಮೀಕ್ಷೆ ಮಾಡಿತು. ಸ್ಥಳೀಯ ಗ್ರಾಮ ಪಂಚಾಯತ ಜೀವ ವೈವಿಧ್ಯ ಸಮಿತಿಯವರನ್ನು ಭೇಟಿ ಮಾಡಿತು. ನಂತರ ಮಾರ್ಚ್ 28 ರಂದು ಶಿವಮೊಗ್ಗಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚಂದ್ರಗುತ್ತಿ ಗ್ರಾಮ ಜನರ ಜೊತೆ ಅಲ್ಲಿನ ಪರಿಸ್ಥಿತಿಯ ವರದಿ ನೀಡಿತು. ಜಿಲ್ಲಾಧಿಕಾರಿಗಳು ಏಪ್ರಿಲ್ 8 ರಂದು ಅಧಿಕಾರಿಗಳ ತಂಡವನ್ನು ಕಳಿಸಿ ಸ್ಥಳ ವರದಿ ಪಡೆದರು.
ಏಪ್ರೀಲ್ 17ರ ಬೆಳಿಗ್ಗೆ ಜಿಲ್ಲಾಧಿಕಾರಿಗಳು ಸ್ವತಃ ಚಂದ್ರಗುತ್ತಿ ಗಣಿಗಾರಿಕೆ ಅಧ್ಯಾಯನ ಪರಿಶೀಲಿಸಿ ಗಣಿ ಕಾಮಗಾರಿ ನಿಲ್ಲಿಸಿದರು. ಚಂದ್ರಗುತ್ತಿಯ ಸುತ್ತಲಿನ ಹಳ್ಳಿಗಳು ಸೇರಿದಂತೆ ಅಂಚಿನ ಶಿರಸಿ ಸಿದ್ದಾಪುರ ತಾಲೂಕಿನ ಅರಣ್ಯ, ಹಳ್ಳಿಗಳು, ಜಲ ಮೂಲಗಳ ಮೇಲೆ ಭಾರೀ ಗಣಿಗಾರಿಕೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎಂಬ ತಜ್ಞರ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯ ಗಣಿ, ಅರಣ್ಯ, ಪರಿಸರ ಇಲಾಖೆ ಮುಖ್ಯಸ್ಥರ ಗಮನ ಸೆಳೆಯಲಾಗಿದೆ.
ಚಂದ್ರಗುತ್ತಿ, ಬಸ್ತಿಕೊಪ್ಪ ಹಳ್ಳಿಗಳ ಜಲ, ಆರೋಗ್ಯ, ಸಂಪರ್ಕ, ಕೃಷಿ ಪರಿಸ್ಥಿತಿ, ಪರಿಹಾರ ನೆರವು ನೀಡುವ ಕುರಿತು ಗ್ರಾಮೀಣ ಅಭಿವೃದ್ಧಿ ಇಲಾಖೆ ಧಾವಿಸಬೇಕು ಎಂದು ವೃಕ್ಷ ಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮನವಿ ಮಾಡಿದ್ದಾರೆ.