ಬೆಂಗಳೂರು: ಹೈಕಮಾಂಡ್‌ಗೆ ಹಣ ನೀಡಿರುವ ವಿಚಾರದ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ನಡೆಸಿರುವ ಸಂಭಾಷಣೆಯ ಸೀಡಿಯನ್ನು ಯುವ ಕಾಂಗ್ರೆಸ್ ಅಂಚೆ ಮೂಲಕ ಅಮಿತ್ ಶಾಗೆ ಕಳುಹಿಸಿಕೊಟ್ಟಿದೆ. ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್‌ಗೆ ತೆರಳಿ ಸೀಡಿಗಳನ್ನು ಅಮಿತ್ ಶಾ ವಿಳಾಸಕ್ಕೆ ಕಳುಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಅಮೃತ್‌ರಾಜ್, ಬಿಜೆಪಿ ನಾಯಕರು ಹೈ ಕಮಾಂಡ್‌ಗೆ ನೀಡಿದ ಲಂಚದ ಹಣ ರಾಜ್ಯದ ಜನರಿಗೆ ಸೇರಿದ್ದು. ರಾಜ್ಯದ ಬಡ ಜನರ ಹಣವನ್ನು ವಾಪಸ್ ನೀಡಬೇಕು. ಯಡಿಯೂರಪ್ಪ, ಅನಂತಕುಮಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಸೌಮ್ಯ ರೆಡ್ಡಿ ಮಾತನಾಡಿದರು.
ಬಿಎಸ್‌ವೈ-ಅನಂತ್ ವಿರುದ್ಧ ದೂರು: ಯಡಿಯೂರಪ್ಪ, ಅನಂತ ಕುಮಾರ್ ಬಿಜೆಪಿ ಹೈಕಮಾಂಡ್‌ಗೆ ಹಣ ನೀಡಿದ್ದಾರೆಂಬ ಸೀಡಿ ಬಯಲಾದ ಪ್ರಕರಣದ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರ ವಿರುದ್ಧ ಕಾಂಗ್ರೆಸ್ ಮುಖ್ಯ ಸಚೇತಕ ಐವಾನ್ ಡಿಸೋಜಾ ಮಲ್ಲೇಶ್ವರ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ದೂರು ಪಡೆದಿರುವ ಪೊಲೀಸರು, ಎಫ್ಐಆರ್ ದಾಖಲಿಸಿಲ್ಲ. ದೂರು ಭ್ರಷ್ಟಾಚಾರದ ಪ್ರಕರಣದಡಿ ಬರುವುದರಿಂದ ಪೊಲೀಸರ ವ್ಯಾಪ್ತಿಗೆ ಬರುವುದಿಲ್ಲ.
ದೂರು ಪಡೆದಿದ್ದು, ಈ ಸಂಬಂಧ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಯಡಿಯೂರಪ್ಪ, ಅನಂತ್ ಕುಮಾರ್ ಅವರು ಬಿಜೆಪಿ ಹೈಕಮಾಂಡ್‌ಗೆ ಹಣ ಕೊಟ್ಟಿರುವ ಬಗ್ಗೆ ಸಂಭಾಷಣೆ ನಡೆಸಿದ್ದಾರೆ. 58 ಸೆಕೆಂಡ್‌ಗಳ ಸಂಭಾಷಣೆ ವಿಡಿಯೋದಲ್ಲಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಡಿಸೋಜಾ ದೂರಿನಲ್ಲಿ ತಿಳಿಸಿದ್ದಾರೆ.