ಬೆಂಗಳೂರು: ಮಾಜಿ ಕೇಂದ್ರ ಸಚಿವ, ಸಂಸದ ಅನಂತ್ ಕುಮಾರ್ ಹೆಗಡೆ ಟ್ವಿಟರ್ ಖಾತೆಯನ್ನು ರದ್ದು ಮಾಡಲಾಗಿದೆ. ಕಾರಣ ತಬ್ಲಿಘಿ ಜಮಾತ್ ವಿರುದ್ಧ ಮಾಡಿದ್ದ ಒಂದು ಟ್ವೀಟ್!
ಈ ಪ್ರಕಟಣೆ ನೀಡಿರುವ ಅನಂತ್ ಕುಮಾರ್ ಹೆಗಡೆ, ಟ್ವಿಟರ್ ನ ಭಾರತ ವಿರೋಧಿ ನೀತಿ ಮತ್ತೊಮ್ಮೆ ಬಯಲಾಗಿದೆ. ಭಾರತದ ವಿರುದ್ಧ ಷಡ್ಯಂತ್ರ ಹಾಗೂ ಭಾರತವನ್ನು ಒಡೆಯುವ ಟ್ವೀಟ್ ಗಳನ್ನು ಪ್ರಚಾರ ಮಾಡುವ ಉದ್ಯಮವನ್ನು ಟ್ವಿಟರ್ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗುರುಪಟವಂತ ಸಿಂಗ್ ಪನ್ನೂನ್ ಎಂಬ ಟ್ವಿಟರ್ ಖಾತೆಯಿಂದ ಪಂಜಾಬ್ ರಾಜ್ಯವನ್ನು ಭಾರತದಿಂದ ಸ್ವಾತಂತ್ರಗೊಳಿಸಿ ಖಲಿಸ್ಥಾನ ಎಂಬ ಪ್ರತ್ಯೇಕ ರಾಷ್ಟ್ರವನ್ನಾಗಿಸುವುದರ ಬಗ್ಗೆ ಟ್ವೀಟ್ ಮಾಡಿದ್ದು ಅದನ್ನು ಟ್ವಿಟರಿಗೆ ಹಣಪಾವತಿಸಿ ಜಾಹಿರಾತು ನೀಡಿದ್ದಾರೆ. ಇದು ಭಾರತದ ವಿರುದ್ಧ ನಡೆಸುತ್ತಿರುವ ಜಾಹೀರಾತಾಗಿದ್ದು ಇದನ್ನು ಟ್ವಿಟರ್ ಅನುಮೋದಿಸಿ ಜಾಹೀರಾತನ್ನು ಪ್ರಚುರ ಪಡೆಸಿದೆ. ಇಂತಹ ರಾಷ್ಟ್ರವಿರೋಧ ಚಟುವಟಿಕೆಯನ್ನು ಬಯಲು ಮಾಡಿ, ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ನಾನು ತಂದಿದ್ದರ ಪರಿಣಾಮವಾಗಿ, ಏಪ್ರಿಲ್ 22 ರಂದು ತಬ್ಲಿಘಿ ಜಮಾತ್ ನ ವಿರುದ್ಧ ನಾನು ಮಾಡಿರುವ ಟ್ವೀಟಿನ ನೆಪವಿಟ್ಟುಕೊಂಡು ನನ್ನ ಟ್ವಿಟ್ಟರ್ ಖಾತೆಯನ್ನು ರದ್ದು ಮಾಡಿದ್ದಾರೆ. ಬದಲಾಗಿ, ನಾನು ಮಾಡಿರುವ ಟ್ವೀಟನ್ನು ತಗೆದುಹಾಕಿದರೆ ನನ್ನ ಖಾತೆಯನ್ನು ಪುನಃ ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ ಎಂದು ಹಗಡೆ ಹೇಳಿದ್ದಾರೆ.
ದೇಶದ ವಿರುದ್ಧ ನಡೆಯುವ ಯಾವುದೇ ನಡೆಯನ್ನು ಅದು ಯಾರೇ ಇರಲಿ, ನನ್ನ ವಿರೋಧವನ್ನು ನಾನು ವ್ಯಕ್ತಪಡಿಸುತ್ತಾ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಿ ಇಲ್ಲಾ. ಈ ನಿಟ್ಟಿನಲ್ಲಿ ನಾನು ಮಾಡಿರುವ ಟ್ವೀಟನ್ನು ನಾನು ಅಳಿಸುವ ಪ್ರಶ್ನೆಯೇ ಇಲ್ಲಾ. ದೇಶ ವಿರೋಧಿ ಸಾಮಾಜಿಕ ಜಾಲತಾಣದ ಖಾತೆಗಿಂತ ನನ್ನ ದೇಶ, ನನ್ನ ಸಿದ್ಧಾಂತ ನನ್ನ ಜೀವನದ ಆದ್ಯತೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.