ಗಂಗಾವತಿ : ತಾಲ್ಲೂಕಿನ ಆನೆಗೊಂದಿಯಲ್ಲಿ ಕೋವಿಡ್ ರೋಗ ಬಾರದಂತೆ ಆಂಧ್ರಪ್ರದೇಶದ ಆನಂದಯ್ಯನ ನಾಟಿ ಔಷಧವನ್ನು ರವಿವಾರ ವಿತರಣೆ ಮಾಡಿದ್ದಾರೆ.
ಕಿಷ್ಕಿಂದಾ ಅಂಜನಾದ್ರಿ ಟ್ರಸ್ಟ್ ಅಧ್ಯಕ್ಷ ಗೋವಿಂದ ಆನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಆನಂದಯ್ಯನ ನಾಟಿ ಔಷಧವನ್ನು ಆನೆಗುಂದಿ ಗ್ರಾಮದ 500 ಕುಟುಂಬಗಳಿಗೆ ವಿತರಣೆ ಮಾಡಿದ್ದಾರೆ.
1 ಪಾಕೆಟ್ ನಲ್ಲಿ ಕುಟುಂಬದ 6ಜನರು ಔಷಧವನ್ನು ಸೇವಿಸಬಹುದಾಗಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ತಾಲ್ಲೂಕಿನಲ್ಲಿ ಆನಂದಯ್ಯ ನಾಟಿ ಔಷಧಕ್ಕೆ ಇನ್ನಿಲ್ಲದ ಬೆಲೆ ಇದ್ದು, ಆಂಧ್ರಪ್ರದೇಶ ಸರಕಾರ ಮತ್ತು ಕೇಂದ್ರದ ಆಯುಷ್ ಇಲಾಖೆ ಆನಂದಯ್ಯ ನಾಟಿ ಔಷಧ ಸೇವನೆಯಿಂದ ಮನುಷ್ಯನ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂದು ಪ್ರಮಾಣೀಕರಿಸಲಾಗಿದೆ. ಆಂಧ್ರಪ್ರದೇಶ ಕರ್ನಾಟಕದ ಗಡಿ ಭಾಗ ಮತ್ತು ತಮಿಳುನಾಡಿನಲ್ಲಿ ಆನಂದಯ್ಯ ನಾಟಿ ಔಷಧಕ್ಕೆ ಬಹಳ ಬೆಲೆ ಇದ್ದು ಅಲ್ಲಿಯ ಲಕ್ಷಾಂತರ ಜನರು ಈಗಾಗಲೇ ಈ ನಾಟಿ ಔಷಧವನ್ನು ಕೊರೋನಾ ರೋಗ ತಡೆಗಾಗಿ ಸ್ವೀಕರಿಸಿದ್ದಾರೆ.
ಇದನ್ನು ಮನಗಂಡ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅಲ್ಲಿಗೆ ತೆರಳಿ ಸುಮಾರು 5 ಲಕ್ಷ ಮೌಲ್ಯದ ಆನಂದಯ್ಯ ನಾಟಿ ಔಷಧವನ್ನು ತೆಗೆದುಕೊಂಡು ಬಂದು ಹಂಪಿ ಮತ್ತು ಆನೆಗೊಂದಿ ಸುತ್ತಲಿನ ನೂರಾರು ಕುಟುಂಬ ಗಳಿಗೆ ಈ ಔಷಧವನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ.
ರವಿವಾರ ಆನೆಗುಂದಿಯ ಸುಮಾರು 5ನೂರು ಕುಟುಂಬಗಳಿಗೆ ಆನಂದಯ್ಯ ನಾಟಿ ಔಷಧವನ್ನು ಪೂಜ್ಯರು ವಿತರಿಸಿದರು.
ಈ ವೇಳೆ ಗೋವಿಂದ ಆನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಆನಂದಯ್ಯನ ನಾಟಿ ಔಷಧ ಮನುಷ್ಯನ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈಗಾಗಲೇ ಆಂಧ್ರಪ್ರದೇಶ ತೆಲಂಗಾಣ ಮತ್ತು ಕೇಂದ್ರ ಸರ್ಕಾರ ಈ ನಾಟಿ ಔಷಧಕ್ಕೆ ಒಪ್ಪಿಗೆಯನ್ನು ಸೂಚಿಸಿದೆ.ಇದರಿಂದ ಮನುಷ್ಯರು ರೋಗ ನಿರೋಧಕವನ್ನು ಹೆಚ್ಚು ಮಾಡಿಕೊಂಡು ಆರೋಗ್ಯವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಬಹಳಷ್ಟು ಜನರು ಕೊರೋನಾ ರೋಗದಿಂದ ಮುಕ್ತರಾಗಲು ಈ ನಾಟಿ ಔಷಧವನ್ನು ಸ್ವೀಕಾರ ಮಾಡಿರುವುದಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆಂದು ಸ್ವಾಮೀಜಿ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಗುತ್ತಿ ಚಂದ್ರಶೇಖರ್ ಮತ್ತು ಬಸವರಾಜ್ ಹಾಗೂ ಗ್ರಾಮಸ್ಥರು ಇದ್ದರು.