ಆನಂದಪುರ: ಕೆರೆಗಳ ಸ್ವಚ್ಛತಾ ಕೆಲಸ ಸರ್ಕಾರದ ಆದ್ಯತಾ ಯೋಜನೆಗಳಲ್ಲಿ ಒಂದಾಗಬೇಕು. ಮಲೆನಾಡು ಭಾಗದ ಜಲಜೀವನಾಡಿಗಳಾಗಿರುವ ಕೆರೆಗಳನ್ನು ಪುನಶ್ಚೇತನಗೊಳಿಸುವುದು ಪುಣ್ಯದ ಕೆಲಸ ಎಂದು ಮುರುಘಾಮಠದ ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ತಿಳಿಸಿದರು.
ಪಟ್ಟಣದ ಗಾಣಿಗನ ಕೆರೆ ಪುನಶ್ಚೇತನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕೆರೆಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆರೆ ಅಭಿವೃದ್ಧಿ ಎಂದರೆ ಕೇವಲ ಅದರ ಅಚ್ಚುಕಟ್ಟಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಾಗಿ ಆ ಪ್ರದೇಶದ ಜನರ ಅಭಿವೃದ್ಧಿಯ ಸೂಚ್ಯಂಕವಾಗಿರುತ್ತದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಬಹುತೇಕ ತೆರೆದ ಬಾವಿಗಳಿವೆ. ಕೊಳವೆ ಬಾವಿಗಳನ್ನು ವಿಪರೀತವಾಗಿ ಕೊರೆದ ಪರಿಣಾಮ ಅಂತರ್ಜಲ ಕುಸಿದು ಬಾವಿಗಳು ಬತ್ತುತ್ತಿವೆ. ಮಳೆಗಾಲ ಹೊರತುಪಡಿಸಿ ಇತರೆ ತಿಂಗಳುಗಳಲ್ಲಿ ಜನರು ನೀರಿನ ಬರ ಅನುಭವಿಸುತ್ತಿದ್ದಾರೆ. ಇಂತಹ ಕೆರೆಗಳನ್ನು ಪುನಶ್ಚೇತನಗೊಳಿಸುವುದರಿಂದ ಅಂತರ್ಜಲ ಹೆಚ್ಚಿ ಬಾವಿಗಳು ಸದಾ ಕಾಲ ನೀರಿನಿಂದ ತುಂಬಿರುತ್ತವೆ ಎಂದರು.
ಗಾಣಿಗನಕೆರೆ ಸುಮಾರು 59.2 ಎಕರೆಗೂ ಅಧಿಕ ವಿಸ್ತಾರ ಭಾಗ ಹೊಂದಿದ್ದು ಈ ಭಾಗದ ಬಹುದೊಡ್ಡಕೆರೆಯಾಗಿದೆ. ಇದು ಅಂತರ್ಜಲವನ್ನು ಉಳಿಸುವಂತಹ ಕೆರೆಯಾಗಿದೆ. ಇಂತಹ ಕೆರೆಯ ಕಾಯಕಲ್ಪವಾಗುವುದರಿಂದ ಈ ಭಾಗದ ಜನರಿಗೆ ಕುಡಿಯುವ ನೀರು ದೊರೆಯಲಿದೆ. ಹಾಗೆಯೇ ಈ ಕೆರೆ ಗಂಡಿಬೈಲು ಭಾಗದಲ್ಲಿ ಸಾವಿರಾರು ಎಕರೆ ಭತ್ತ ಬೆಳೆಯುವುದಕ್ಕೆ ಸಹಕಾರಿಯಾಗಲಿದೆ. ಅಲ್ಲದೆ ಈ ಕೆರೆಯಿಂದ ಮಳೆಗಾಲದಲ್ಲಿ ತುಂಬಿ ಕೋಡಿ ಹರಿದ ನೀರು ಅಂಬ್ಳೊಗೋಳ ಜಲಾಶಯಕ್ಕೆ ಸೇರುತ್ತದೆ ಎಂದರು.
ಕೆರೆ ಪುನಶ್ಚೇತನದ ಜೊತೆ ಸಾರ್ವಜನಿಕ ಕಟ್ಟಡ, ಜಾಗ ಒತ್ತುವರಿಯನ್ನು ಸಾರ್ವಜನಿಕರು ಪ್ರತಿಭಟಿಸುವ ಮೂಲಕ ತೆರವುಗೊಳಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಶಾಸಕ ಎಚ್. ಹಾಲಪ್ಪ ಮಾತನಾಡಿ, ಸಾಗರದ ಗಣಪತಿ ಕೆರೆ ಕಾಯಕಲ್ಪ ನಮಗೆ ವಿಶೇಷ ಶಕ್ತಿ ನೀಡಿದೆ. ಗಣಪತಿ ಕೆರೆ ಕಾಯಕಲ್ಪದ ಸಂದರ್ಭದಲ್ಲಿ ಜಾತ್ಯಾತೀತವಾಗಿ ಸಂಘ-ಸಂಸ್ಥೆಗಳು, ಸಾರ್ವಜನಿಕರು, ಪಕ್ಷಾತೀತವಾಗಿ ಜನಪ್ರತಿನಿಧಿಗಳು ನಮಗೆ ಸಹಕಾರ ನೀಡಿದ್ದು ಮರೆಯಲು ಸಾಧ್ಯವಿಲ್ಲ. ಹಾಗೆಯೇ ಅಧಿಕಾರಿ ವರ್ಗ ಸಹ ಒಳ್ಳೆಯ ಕೆಲಸಕ್ಕೆ ತಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದರು. ಅದೇ ಮಾದರಿಯಲ್ಲಿ ಆನಂದಪುರದ ಗಾಣಿಗನ ಕೆರೆಯನ್ನು ಸಹ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಸರ್ಕಾರದ ಯಾವುದೇ ಅನುದಾನ ಗಾಣಿಗನ ಕೆರೆ ಕಾಯಕಲ್ಪಕ್ಕೆ ಇಲ್ಲ. ನನ್ನ ಮತ್ತು ಸ್ಥಳೀಯರ ಆಸಕ್ತಿಯಿಂದ ಕೆರೆ ಕಾಯಕಲ್ಪ ಮಾಡಲಾಗುತ್ತಿದೆ. ಕೆರೆಹಬ್ಬ ನೆಪಮಾತ್ರಕ್ಕಾದರೂ ವಾಸ್ತವವಾಗಿ ಜನರಿಗೆ ಕೆರೆ ಪುನಶ್ಚೇತನ ಹಬ್ಬದ ವಾತಾವರಣ ನಿರ್ಮಾಣ ಮಾಡಬೇಕು ಎನ್ನುವ ಉದ್ದೇಶ ಹೊಂದಲಾಗಿದೆ.
ಮುಂದಿನ ಒಂದು ತಿಂಗಳ ಕಾಲ ಗಾಣಿಗನ ಕೆರೆಯನ್ನು ಸ್ವತ್ಛಗೊಳಿಸಲಾಗುತ್ತದೆ. ಗಾಣಿಗನ ಕೆರೆ ಸುಮಾರು 57 ಎಕರೆ ವಿಸ್ತೀರ್ಣ ಹೊಂದಿದೆ ಎನ್ನುವ ಮಾಹಿತಿ ಇದೆ. ಸ್ವಚ್ಛತೆ ಜೊತೆಗೆ ಕೆರೆ ಒತ್ತುವರಿಯನ್ನು ಸಹ ತೆರವುಗೊಳಿಸಲು ಮುಂದಿನ ದಿನಗಳಲ್ಲಿ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.
ಮೂಲೆಗದ್ದೆಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಕಾರ್ಯದರ್ಶಿ ಚೇತನರಾಜ ಕಣ್ಣೂರು, ತಾಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ಉಪಾಧ್ಯಕ್ಷ ರೇವಪ್ಪ ಕೆ. ಹೊಸಕೊಪ್ಪ, ಅ.ನಾ. ವಿಜೇಂದ್ರ, ಆಶಾ ಮಹೇಶ್, ನಾಗರತ್ನ ಇನ್ನಿತರರು ಇದ್ದರು.