ಆನಂದಪುರ: ಸ್ಥಳೀಯ ದಾಸಕೊಪ್ಪದ ಗೃಹಿಣಿಗೆ ಗಂಡ ಮತ್ತು ಅತ್ತೆ ವರದಕ್ಷಿಣೆ ಕಿರುಕುಳ ನೀಡಿ ಕೀಟನಾಶಕ ಕುಡಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ದಾಸಕೊಪ್ಪ ಗ್ರಾಮದ ವಿವಾಹಿತ ಮಹಿಳೆಗೆ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು ಗಂಡ ಹಾಗೂ ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ಅತ್ತೆ ಗಾಯಿತ್ರಿ ಗಂಡ ಚರಣ್ ಗೃಹಿಣಿಯನ್ನು ದೈಹಿಕವಾಗಿ ದಂಡಿಸಿ ಕೀಟನಾಶಕವನ್ನು ಕುಡಿಸಿ ಕೊಲೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯ ಗ್ರಾಮಸ್ಥರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನಂತರ ಶಿವಮೊಗ್ಗ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧ ದೂರು ದಾಖಲಾಗಿದ್ದು ಗಂಡ ಚರಣ್ ಹಾಗೂ ಅತ್ತೆ ಗಾಯತ್ರಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಇವರ ಜೊತೆಯಲ್ಲಿ ಇನ್ನೂ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದ ದಾಸಕೊಪ್ಪ ಗ್ರಾಮದ ಜೈ ಭೀಮ್ ಸಂಘಟನೆ, ಪಾಂಡುರಂಗ ಯುವಕ ಸಂಘ, ಪರಿಸರ ಶ್ರೀ ಶಕ್ತಿ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ನೂರಾರು ಮಹಿಳೆಯರು ಹಾಗೂ ಪುರುಷರು ಪೊಲೀಸ್ ಠಾಣೆಯ ಮುಂದೆ ಬುಧವಾರ ರಾತ್ರಿ ಧರಣಿ ನಡೆಸಿ ಈ ಪ್ರಕರಣಕ್ಕೆ ಸೇರಿದಂತಹ ಎಲ್ಲಾ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು, ನೊಂದ ಮಹಿಳೆಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ವಿಷಯ ತಿಳಿಯುತ್ತಿದ್ದಂತೆ ಸಾಗರ ಗ್ರಾಮಾಂತರ ಹಾಗೂ ನಗರ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿದ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣವೇ ತನಿಖೆ ನಡೆಸಿ ಆಪಾದಿತರನ್ನು ಬಂಧಿಸುವದಾಗಿ ಭರವಸೆ ನೀಡಿದರು. ನೊಂದ ಮಹಿಳೆಗೆ ಸರಿಯಾದ ನ್ಯಾಯ ದೊರೆಯದೆ ಇದ್ದರೆ ಮತ್ತೆ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸದ್ಯ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.