ಆನಂದಪುರ: ಇಲ್ಲಿಯ ಸುತ್ತಮುತ್ತ ಕಳೆದ ವಾರದಿಂದ ಜಾನುವಾರುಗಳು ಕಳ್ಳತನವಾಗುತ್ತಿವೆ. ಇದರಿಂದ ಜಾನುವಾರು ಸಾಕುವವರಿಗೆ ಆತಂಕವಾಗುತ್ತಿದೆ. ಗ್ರಾಮೀಣ ಭಾಗದ ರೈತರ ಜಾನುವಾರುಗಳನ್ನು ಅಪಹರಿಸುವ ಒಂದು ಜಾಲ ಇದ್ದು ಇದಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಳೆದ 3 ದಿನಗಳ ಹಿಂದೆ ಅಕ್ರಮವಾಗಿ ಜಾನುವಾರುಗಳನ್ನು ತುಂಬಿ ಸಾಗಿಸುತ್ತಿದ್ದ ಸಮಯದಲ್ಲಿ ಸ್ಥಳೀಯರು ಅನುಮಾನಗೂಂಡು ವಾಹನ ತಡೆದು ಪರಿಶೀಲಿಸಿದಾಗ ಈ ವಾಹನದಲ್ಲಿ ಸುಮಾರು 4 ಹಸುಗಳನ್ನು ಕಂಡ ಸ್ಥಳೀಯರು ಆನಂದಪುರ ಪೊಲೀಸ್ ಠಾಣೆಗೆ ಹಸು ಮತ್ತು ವಾಹನ ಸಾಗಿಸುತಿದ್ದವರನ್ನು ತಂದು ಒಪ್ಪಿಸಲಾಯಿತು. ಇದೇ ದಿನ ರಾತ್ರಿ ಯಡೇಹಳ್ಳಿಯ ಸಮೀಪ ಅಕ್ರಮವಾಗಿ ಹಸುಗಳನ್ನು ವಾಹನಕ್ಕೆ ತುಂಬುವಾಗ ಸ್ಥಳೀಯರು ತಡೆದು ಸುಮಾರು 6 ಹಸುಗಳನ್ನು ಕಳ್ಳರಿಂದ ತಪ್ಪಿಸಿದ್ದಾರೆ. ಈ ವಿಚಾರವಾಗಿಯೂ ಪೊಲೀಸರಿಗೆ ತಿಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಸುಗಳನ್ನು ಕಳ್ಳತನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಜನರು 1 ಅಥವಾ 2 ಹಸುಗಳು ಮನೆಯಲ್ಲಿ ಇರುವುದನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಬಹುತೇಕ ನಮ್ಮ ಸುತ್ತಮುತ್ತಲಿನ ಕೆಲವು ಭಾಗದಲ್ಲಿ ಹಸುಗಳಿಗೆ ಕಾವಲು ಇದೆ. ಅಲ್ಲಿ ಪ್ರತಿಯೊಂದು ಮನೆಯವರು ಒಬ್ಬರು ಒಂದೂಂದು ದಿನ ಗ್ರಾಮದ ಹಸುಗಳನ್ನು ಕಡ್ಡಾಯವಾಗಿ ಕಾಯುತ್ತಾರೆ. ಮಳೆಗಾಲದಲ್ಲಿ ಬೆಳೆಗಳನ್ನು ತಿನ್ನುತ್ತವೆ ಎಂಬ ಕಾರಣದಿಂದ ಕಾವಲು ನಡೆಯುತ್ತದೆ. ನಂತರ ಇರುವುದಿಲ್ಲ. ಪಟ್ಟಣಕ್ಕೆ ಸಮೀಪ ಇರುವ ಗ್ರಾಮದ ಜನರು ತಮ್ಮ ಹಸುಗಳು ಹಾಲು ಕೊಡುತ್ತಿರುವಾಗ ಮಾತ್ರ ಜೋಪಾನ ಮಾಡುತ್ತಾರೆ. ನಂತರ ಅವು ಮನೆಗಳಿಗೆ ಬಾರದೆ ರಸ್ತೆ ಬದಿಯಲ್ಲಿ ಶಾಲಾ ಕಟ್ಟಡ, ಬಸ್ ನಿಲ್ದಾಣ ಹಾಗೂ ಹೆದ್ದಾರಿಯ ಮೇಲೆ ಇರುತ್ತವೆ. ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿರುವ ಹಸುಗಳು ವಾಹನಗಳು ಡಿಕ್ಕಿಯಾಗಿ ಮೃತಪಟ್ಟರೂ ಜನ ಎಚ್ಚರ ವಹಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಆನಂದಪುರ- ಶಿಕಾರಿಪುರ ರಸ್ತೆಯಲ್ಲಿ ನೂರಾರು ಹಸುಗಳಿಗೆ ರಾತ್ರಿ ವಾಹನ ಡಿಕ್ಕಿಯಾಗಿ ನೂರಾರು ಹಸುಗಳು ಮೃತಪಟ್ಟಿದ್ದರೂ ಜನ ಎಚ್ಚೆತ್ತುಕೊಂಡಿಲ್ಲ. ಇದು ಕೂಡ ಹಸುಗಳನ್ನು ಕಳ್ಳತನ ಮಾಡಲು ತುಂಬಾ ಅನುಕೂಲವಾಗುತ್ತದೆ. ಹಸುಗಳನ್ನು ಸಾಕುವವರು ರಾತ್ರಿ ತಮ್ಮ ಹಸುಗಳನ್ನು ಮನೆಯಲ್ಲಿ ಕಟ್ಟಿಹಾಕುವ ಕೆಲಸವಾಗಬೇಕು. ಹಾಗೆಯೇ ಪೊಲೀಸ್ ಇಲಾಖೆಯಿಂದ ಹೆದ್ದಾರಿಯ ಮುಖ್ಯ ಸರ್ಕಲ್ಗಳಲ್ಲಿ ಚೆಕ್‌ಪೋಸ್ಟ್‌ಗಳ ನಿರ್ಮಾಣವಾಗಬೇಕು. ಇದರಿಂದ ಜಾನುವಾರುಗಳ ಕಳ್ಳಳತನ ತಡೆಯಬಹುದು. ಇಲ್ಲವಾದರೆ ಹೀಗೆ ಮುಂದುವರಿಯುತ್ತದೆ. ಜಾನುವಾರುಗಳ ಕಳ್ಳರನ್ನು ಹಿಡಿದು ಶಿಕ್ಷೆ ನಿಡುವಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.