ಹೊಸಪೇಟೆ: ಮಾಜಿ ಸಚಿವ ಆನಂದಸಿಂಗ್ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡು ಪಕ್ಷದ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆಯಿತು.
ಉಪಚುನಾವಣೆ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಜಯನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರವಿಕುಮಾರ್ ಹಾಗೂ ಸಂಸದ ದೇವಂದ್ರಪ್ಪ ಸೇರಿದಂತೆ ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ರವಿಕುಮಾರ್ ಮಾತನಾಡಲು ಆರಂಭಿಸುತ್ತಿದ್ದಂತೆ, ಕೋಮವಾದಿ ಬಿಜೆಪಿ ಹಾಗೂ ಮೋದಿ ಚೋರ್ ಎಂದು ಕರೆದ ಆನಂದ ಸಿಂಗ್‌ಗೆ ಯಾವ ಸಿದ್ಧಾಂತ ಆಧಾರದ ಮೇಲೆ ನೀವು ಟಿಕೆಟ್ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದರು. ಅನೇಕ ವರ್ಷಗಳಿಂದ ಪಕ್ಷದ ತತ್ವ, ಸಿದ್ಧಾಂತಕ್ಕೆ ಅಂಟಿಕೊಂಡು ತಳಮಟ್ಟದಿಂದ ಕೆಲಸ ಮಾಡಿದ ಕಾರ್ಯಕರ್ತರನ್ನು ಪಕ್ಷ ಕಡೆಗಣಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹರಿಹಾಯ್ದರು.
ಕಾರ್ಯಕರ್ತರ ಗಲಾಟೆ-ಗದ್ದಲಕ್ಕೆ ಮುಜುಗರಕ್ಕೀಡಾದ ಬಿಜೆಪಿ ಮುಖಂಡರು, ಪಕ್ಷದ ಆಂತರಿಕ ಚರ್ಚೆಗಳು ನಡೆಯುತ್ತಿದ್ದು ದಯವಿಟ್ಟು ಮಾಧ್ಯಮದವರು ಹೊರ ಹೋಗಬೇಕು ಎಂದು ಹೇಳುತ್ತಿಿದ್ದಂತೆ, ಕಾರ್ಯಕರ್ತರು ಮಾಧ್ಯಮದವರು ಹೊರ ಹೋಗುವುದು ಬೇಡ. ಅವರು ಸ್ಥಳದಲ್ಲಿಯೇ ಇರಬೇಕು. ನಮ್ಮ ಕೂಗು, ಆಕ್ರೋಶ ಪಕ್ಷದ ಮುಖಂಡರಿಗೆ ತಿಳಿಯಲಿ ಎಂದು ಪಟ್ಟು ಹಿಡಿದರು.
ಗದ್ದಲ-ಗಲಾಟೆ ಜೋರಾಗುತ್ತಿದಂತೆ ರವಿಕುಮಾರ್, ಸಂಸದ ದೇವೇಂದ್ರಪ್ಪ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಇನ್ನಿತರರು ಸಭೆಯಿಂದ ಹೊರ ನಡೆದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರವಿಕುಮಾರ, ಆನಂದಸಿಂಗ್ ಹಾಗೂ ಸ್ಥಳೀಯ ಕಾರ್ಯಕರ್ತರ ನಡುವೆ ಅಸಮಾಧಾನವಿದೆ. ಸಿಂಗ್ ಪಕ್ಷಕ್ಕೆ ಬಂದರೆ ಸ್ಥಳೀಯ, ಮೂಲ ಕಾರ್ಯಕರ್ತರನ್ನು ಕಡೆಗಣನೆ ಮಾಡುತ್ತಾರೆ ಎಂಬ ಆರೋಪಗಳಿವೆ.
ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಸಮಾಧಾನಗಳನ್ನು ದೂರ ಮಾಡಿ, ಎಲ್ಲವನ್ನೂ ಸರಿ ಮಾಡಲಾಗುವುದು. ಶನಿವಾರ ಮತ್ತೊಮ್ಮೆ ಕಾರ್ಯಕರ್ತರ ಸಭೆ ನಡೆಸಿ ಮನವೊಲಿಸಲಾಗುವುದು. ಸೋಮವಾರ ಆನಂದ ಸಿಂಗ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.