Advertisement

ಮಹಾಮನೆಯಲ್ಲಿ ಇಲ್ಲದ ಆನಂದ; ಸಿಎಂ ಸೇರಿ ಗಣ್ಯರಿಂದ ಅಂತಿಮ ನಮನ

09:56 PM Oct 23, 2022 | Team Udayavani |

ಸವದತ್ತಿ: ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಯಡ್ರಾಂವಿ ರಸ್ತೆಯಲ್ಲಿನ ತೋಟದ ಮನೆಯಲ್ಲಿ ಪೊಲೀಸ್ ಇಲಾಖೆಯಿಂದ ಕುಶಾಲ ತೋಪು ಸಿಡಿಸಿ ಸರಕಾರಿ ಗೌರವ ಸಲ್ಲಿಸಿ ನಡೆಸಲಾಯಿತು.

Advertisement

ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಹುತಾತ್ಮ ಸಮರ್ಪಣಾ ಪಡೆಯಿಂದ ಮೂರು ಸುತ್ತಿನ ಕುಶಾಲ ತೋಪು ಹಾರಿಸಿ ಸರಕಾರಿ ಗೌರವದೊಂದಿಗೆ ರವಿವಾರ ಸಂಜೆ ಲಿಂಗಾಯತ ಸಂಪ್ರದಾಯದಂತೆ ಹಲವು ಮಠಾಧೀಶರು ಪೂಜ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಮಾಮನಿ ಅವರ ಅಂತಿಮ ದರ್ಶನಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಸಿ.ಸಿ. ಪಾಟೀಲ, ಲಕ್ಷ್ಮೀ ಹೆಬ್ಬಾಳಕರ, ಚನ್ನರಾಜ ಹಟ್ಟಿಹೊಳಿ, ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ, ಸಂಜಯ ಬೆನಕೆ, ಮಹಾದೇವಪ್ಪ ಯಾದವಾಡ, ಜಗದೀಶ ಶೆಟ್ಟರ, ಬಸವರಾಜ ಹೊರಟ್ಟಿ, ಮಹೇಶ ಕುಮಟಳ್ಳಿ, ಮುರಗೇಶ ನಿರಾಣಿ, ಲಕ್ಷ್ಮಣ ಸವದಿ, ಸಿದ್ದು ಸವದಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರವಿಂದ ಬೆಲ್ಲದ, ದುರ್ಯೋಧನ ಐಹೊಳೆ, ಅಮೃತ ದೇಸಾಯಿ, ಮಹಾಂತೇಶ ಕವಟಗಿಮಠ, ಈರಣ್ಣ ಕಡಾಡಿ, ಮಂಗಳಾ ಅಂಗಡಿ, ಎಚ್.ಕೆ. ಪಾಟೀಲ, ಅಶೋಕ ಪಟ್ಟಣ, ಪ್ರಕಾಶ ಹುಕ್ಕೇರಿ ಸೇರಿ ಪ್ರಮುಖರು ಅಂತಿಮ ನಮನ ಸಲ್ಲಿಸಿದರು.

ಬೈಲಹೊಂಗಲ ಮೂರು ಸಾವಿರ ಮಠದ ಶ್ರೀ, ಹೂಲಿ ಶ್ರೀ, ತೊರಗಲ್ಲ ಶ್ರೀ, ಉಪ್ಪಿನಬೆಟಗೇರಿ ಶ್ರೀ, ಶಿರಸಂಗಿ ಶ್ರೀ, ಧಾರವಾಡ ಮುರುಘಾ ಶ್ರೀ ಸೇರಿದಂತೆ ವಿವಿಧ ಭಾಗಗಳಿಂದಾಗಮಿಸಿದ ಮಠಾಧಿಪತಿಗಳು ಕಂಬನಿ ಮಿಡಿದರು.

ಕ್ಯಾನ್ಸರ್ ಕಾರಣದಿಂದ 2 ತಿಂಗಳ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ 12:15 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ತಾಯಿ, ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Advertisement

ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ದಂಡು ಶಾಸಕರ ನಿವಾಸ ಹಾಗೂ ತಾಲೂಕಾ ಕ್ರೀಡಾಂಗಣದಲ್ಲಿ ಸೇರಿ ಅತೀವ ದುಃಖವನ್ನು ಹೊರಹಾಕಿದರು. ಕುಟುಂಬಸ್ಥರು ಹಾಗೂ ಅಭಿಮಾನಿಗಳ ದುಃಖಕ್ಕೆ ಪರಿಮಿತಿಯಿಲ್ಲದಾಗಿತ್ತು. ಸವದತ್ತಿ ಕ್ರೇತ್ರದಲ್ಲಿ ಇದೀಗ ನೀರವ ಮೌನ ಆವರಿಸಿದ್ದು ಕೆಲ ವ್ಯಾಪಾರಸ್ಥರು ಅಂಗಡಿ ಮುಗ್ಗಟ್ಟುಗಳನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಿ ಮೌನದಲ್ಲಿ ಭಾಗಿಯಾಗಿ ಗೌರವ ಸೂಚಕ ವ್ಯಕ್ತಪಡಿಸಿದರು.

ಬೆಂಗಳೂರಿನಿಂದ ರಾತ್ರಿಯೇ ಆಂಬ್ಯುಲೆನ್ಸ್ ವಾಹನದ ಮೂಲಕ ಶಾಸಕರ ಪಾರ್ಥೀವ ಶರೀರ ರವಾನಿಸಲಾಗಿತ್ತು. ಸುಮಾರು 10 ಗಂಟೆಗೆ ಸವದತ್ತಿ ಆಗಮಿಸಿದ ನಂತರ ಶಾಸಕರ ನಿವಾಸದಲ್ಲಿ 2 ಗಂಟೆ ಧಾರ್ಮಿಕ ವಿಧಿ ವಿಧಾನಗಳು ಜರುಗಿ, ಬಳಿಕ ಪಾರ್ಥಿವ ಶರೀರವನ್ನು ತಾಲೂಕಾ ಕ್ರೀಡಾಂಗಣದಲ್ಲಿರಿಸಿ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.ಮೆರವಣಿಗೆ ಮೂಲಕ ಕರೆತಂದು ಅಂತ್ಯಕ್ರಿಯೆ ನಡೆಸಲಾಯಿತು.

ಶಾಲಾ ಕಟ್ಟಡ, ನೀರಾವರಿ, ದೇವಸ್ಥಾನ ಸೇರಿ ಅಭಿವೃದ್ಧಿ ಕಾರ್ಯಗಳಿಂದ ಮಾದರಿ ಶಾಸಕರಾಗಿದ್ದರೆಂದು ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. 90 ರ ದಶಕದಲ್ಲಿ ಅವರ ತಂದೆ ಚಂದ್ರಶೇಖರ ಮಾಮನಿ ಡೆಪ್ಯೂಟಿ ಸ್ಪೀಕರ್ ಹುದ್ದೆ ಅಲಂಕರಿಸಿದ್ದರು. ಹುದ್ದೆಯಲ್ಲಿರುವಾಗಲೇ ಇವರೂ ನಿರ್ಗಮಿಸಿದ್ದನ್ನು ಇಲ್ಲಿ ಸ್ಮರಿಸುವಂತಾಗಿದೆ.

ತಾಲೂಕಾಡಳಿತದಿಂದ ಶಾಸಕರ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ಮಾಡಲಾಗಿತ್ತು. ಕ್ರೀಡಾಂಗಣದಲ್ಲಿ ಪೋಲಿಸ್ ಇಲಾಖೆಯ ಎಸ್‍ಪಿ, ಎಎಸ್‍ಪಿ, ರಾಮದುರ್ಗ, ಗೋಕಾಕ ಡಿವೈಎಸ್‍ಪಿ ಸೇರಿ 400 ಕ್ಕೂ ಅಧಿಕ ಸಿಬಂದಿ ನಿಯೋಜಿಸಲಾಗಿತ್ತು ಎಂದು ಪಿಎಸೈ ಪ್ರವೀಣ ಗಂಗೊಳ್ಳಿ ತಿಳಿಸಿದರು.

ಆನಂದ ಮಾಮನಿಯವರ ಕಳೆಬರಹವನ್ನು ತಾಲೂಕಾ ಕ್ರೀಡಾಂಗಣದಲ್ಲಿ ಇರಿಸಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಜಾರ ಮಾರ್ಗ, ಎಪಿಎಮ್ಸಿಯಿಂದ ಬಸ್ ನಿಲ್ದಾಣ ಸೇರಿ ಸ್ಥಳೀಯವಾಗಿ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.

ತಂದೆ ಚಂದ್ರಶೇಖರ ಮತ್ತು ಸಹೋದರ ಬಾಪು ಸಮಾಧಿಯಿರುವ ಯಡ್ರಾಂವಿ ರಸ್ತೆಯಲ್ಲಿರುವ ತೋಟದಲ್ಲಿ ಆನಂದ ಮಾಮನಿ ಯವರ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮೊದಲು ತಾಲೂಕಾ ಕ್ರೀಡಾಂಗಣದಿಂದ ಆರಂಭಗೊಂಡ ಅಂತಿಮ ಯಾತ್ರೆ ಪಟ್ಟಣದಲ್ಲಿ ಸಂಚರಿಸಿತು. ಹಲವು ಯುವಕರು ಹಿರಿಯರು  ಸಾತ್ ನೀಡಿದರು. ಅಭಿಮಾನಿಗಳು ದುಃಖಭರಿತರಾಗಿದ್ದರು. ಮೆರವಣಿಗೆ ಸಂಜೆ 4-30 ಆರಂಭಗೊಂಡು ತೋಟ ತಲುಪಿತು. ಧಾರ್ಮಿಕ ವಿಧಿವಿಧಾನಗಳ ಬಳಿಕ ಅಂತ್ಯಕ್ರಿಯೆ ನಡೆಯಿತು. ಸಚಿವರು, ಶಾಸಕರು, ಪ್ರಮುಖ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸೇರಿ ಸಾವಿರಾರು ಜನರು ಅಗಲಿದ ನಾಯಕನಿಗೆ ಮಣ್ಣು ಹಾಕಿ ಅಶ್ರುತರ್ಪಣ ಸಲ್ಲಿಸಿದರು.

ಕ್ರೀಡಾಂಗಣದ ಜನಜಂಗುಳಿ ನಿಯಂತ್ರಿಸಲು ಮೂರು ದ್ವಾರಗಳ ಪೈಕಿ ಒಂದನ್ನು ಪ್ರಮುಖರಿಗೆ, ಉಳಿದೆರಡನ್ನು ಸಾರ್ವಜನಿಕರು ದರ್ಶನ ಪಡೆಯಲು ಮೀಸಲಿರಿಸಿ ಸರದಿ ಸಾಲಿನಲ್ಲಿ ತೆರಳಿ ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಪಾರ್ಥಿವ ಶರೀರದ ಹತ್ತಿರ ಪ್ರಮುಖರಿಗೆ ಮತ್ತು ಕುಟುಂಬಸ್ಥರಿಗೆ ಆಸನವಿರಿಸಲಾಗಿತ್ತು. ಉಪಹಾರ, ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸರಕಾರದಿಂದ ಸಾಕಷ್ಟು ಅನುದಾನ ತಂದು ಕ್ಷೇತ್ರ ಅಭಿವೃದ್ಧಿಯತ್ತ ಕೊಂಡೊಯ್ಯದ ಮಾಮನಿ ಅವರು ತಾಲೂಕನ್ನು ಸಮಗ್ರ ಅಭಿವೃದ್ಧಿ ಪಡಿಸಿದ್ದರು. ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ ಮಾಮನಿ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ತಂದೆಯೂ ಡೆಪ್ಯುಟಿ ಸ್ಪೀಕರ ಇರುವಾಗಲೇ ಇಹಲೋಕ ತ್ಯಜಿಸಿದ್ದರು. ಅದೇ ಹುದ್ದೆಯಲ್ಲಿರುವಾಗ ಸಾವನ್ನಪ್ಪಿದ್ದು ಮಾತುಗಳೇ ಬಾರದ ಹಾಗಿದೆ. ಸಹೋದರನಂತಿದ್ದ ಮಾಮನಿ ಪ್ರತಿ ಕಾರ್ಯದಲ್ಲೂ ಸಹಕಾರ ಮತ್ತು ಸಹಾನುಭೂತಿ ತೋರುವ ವ್ಯಕ್ತಿಯಾಗಿದ್ದರು. ಕುಟುಂಬ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಸಹೋದರನಾಗಿದ್ದ ಆನಂದ ಮಾಮನಿ ಚಿಕ್ಕ ವಯಸ್ಸಿನಲ್ಲಿ ನಿರ್ಗಮಿಸಿದ್ದು ಆಘಾತ ತಂದಿದೆ. ಪಕ್ಷ ಬೇರೆಯಾದರೂ ಒಂದೇ ತಾಯಿ ಮಕ್ಕಳಂತೆ ಇದ್ದೆವು. ದೇವರು ಇವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಮಾಮನಿ ಅಕಾಲಿಕ ನಿಧನ ತೀವ್ರ ನೋವು ತಂದಿದೆ. ನಿಕಟ ಒಡನಾಟ ಹೊಂದಿದ್ದ ಇವರ ದಿಢೀರ ನಿಧನ ರಾಜಕೀಯ ವಲಯಕ್ಕೆ ಅತೀ ದೊಡ್ಡ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಕುಟುಂಬ ವರ್ಗಕ್ಕೆ ಅಗಲಿಕೆ ನೋವು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next