Advertisement

ಈಕೆಯದ್ದು ನಿಜವಾದ ಸ್ವಚ್ಛ ಭಾರತ..; ಅಂಕೋಲಾ ಮಹಿಳೆಯ ಕೆಲಸಕ್ಕೆ ಆನಂದ್ ಮಹೀಂದ್ರಾ ಮೆಚ್ಚುಗೆ

01:35 PM Apr 11, 2023 | Team Udayavani |

ಅಂಕೋಲಾ: ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಸದಾ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರಿತಿಸುವ ಮನೋಭಾವ ಹೊಂದಿರುವವರು. ಸಾಮಾಜಿಕ ಜಾಲತಾಣಗಳಲ್ಲಿ ತಾನು ಕಂಡ ವಿಶಿಷ್ಟ ಜನರನ್ನು ಗುರುತಿಸುವ ಆನಂದ್ ಮಹೀಂದ್ರಾ ಅವರು ಆ ಜನರನ್ನು ಲೋಕಕ್ಕೆ ಪರಿಚಯ ಮಾಡಿಕೊಡುತ್ತಾರೆ. ಈಗ ಕರ್ನಾಟಕದ ಅಂಕೋಲಾ ಮಹಿಳೆಯ ಬಗ್ಗೆ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಗಮನ ಸೆಳೆದಿದ್ದಾರೆ.

Advertisement

ಆದರ್ಶ್ ಹೆಗ್ಡೆ ಎಂಬ ಟ್ವಿಟರ್ ಬಳಕೆದಾರರೊಬ್ಬರು ಅಂಕೋಲಾ ಬಸ್ ನಿಲ್ದಾಣದಲ್ಲಿನ ಓರ್ವ ಮಹಿಳೆಯ ಸ್ವಚ್ಛ ಭಾರತ ಕಾಯಕದ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಜೊತಗೆ, “ಈ ಮಹಿಳೆ ಹಣ್ಣು ಮಾರಾಟಗಾರ್ತಿ ಮತ್ತು ಅವರು ಕರ್ನಾಟಕದ ಅಂಕೋಲಾ ಬಸ್ ನಿಲ್ದಾಣದಲ್ಲಿ ಎಲೆಗಳಲ್ಲಿ ಸುತ್ತಿ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಕೆಲವರು ಹಣ್ಣು ತಿಂದು ಮುಗಿಸಿದ ನಂತರ ಬಸ್ಸಿನ ಕಿಟಕಿಯಿಂದ ಎಲೆಗಳನ್ನು ಎಸೆಯುತ್ತಾರೆ. ಆದರೆ ಈ ಮಹಿಳೆ ಅಲ್ಲಿಗೆ ಹೋಗಿ ಎಲೆಗಳನ್ನು ತೆಗೆದುಕೊಂಡು ಕಸದ ಬುಟ್ಟಿಗೆ ಹಾಕುತ್ತಾರೆ. ಇದು ಅವರ ಕೆಲಸವಲ್ಲ ಆದರೂ ಅವರು ಅದನ್ನು ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದರು.

ಈ ಟ್ವೀಟ್ ಗಮನಿಸಿದ ಆನಂದ್ ಮಹೀಂದ್ರಾ ಅವರು ಈ ವಿಡಿಯೋ ಶೇರ್ ಮಾಡಿ, “ಇವರು ಭಾರತ ಸ್ವಚ್ಛ ಮಾಡುವ ನಿಜವಾದ, ಶಾಂತ ಹೀರೋಗಳು. ಆಕೆಯ ಪ್ರಯತ್ನಗಳು ಜನರ ಗಮನಕ್ಕೆ ಬಂದಿದೆ ಮತ್ತು ಮೆಚ್ಚುಗೆ ಪಡೆದಿವೆ ಎಂದು ಅವರು ತಿಳಿದು ಕೊಳ್ಳಬೇಕೆಂದು ನಾನು ನಿಜವಾಗಿಯೂ ಬಯಸುತ್ತೇನೆ. ನೀವು ಆ ಪ್ರದೇಶದಲ್ಲಿ ವಾಸಿಸುವ ಯಾರನ್ನಾದರೂ ಕಂಡುಕೊಂಡರೆ ಮತ್ತು ಅವಳನ್ನು ಸಂಪರ್ಕಿಸಬಹುದೇ?” ಎಂದು ಕೇಳಿಕೊಂಡಿದ್ದಾರೆ.

ಉದಯವಾಣಿ ಅವರನ್ನು ಸಂಪರ್ಕಿಸಿ ಮಾತನಾಡಿಸಿದೆ. ಇವರ ಹೆಸರು ಮೋಹಿನಿ ಕೃಷ್ಣ ಗೌಡ. ಅಂಕೋಲದ 15 ಕಿಮೀ ದೂರದ ತೆಂಕನಾಡು ಬೆಳಸೆಯವರು. ಪ್ರತಿ ದಿನ ಬೆಳಗ್ಗೆ ಬೆಳಸೆಯಿಂದ ಕಾಡಿನ ಹಣ್ಣುಗಳನ್ನು ಹೆಕ್ಕಿ ಮಧ್ಯಾಹ್ನದ ವೇಳೆ ಅಂಕೋಲಾದ ಬಸ್ ಸ್ಟ್ಯಾಂಡ್ ನಲ್ಲಿ ಮಾರುತ್ತಾರೆ.

Advertisement

ಈ ಶುಚಿತ್ವದ ಬಗ್ಗೆ ಮಾತನಾಡುವ ಅವರು, ನಾವು ಇವತ್ತು ಕಸ ಹೆಕ್ಕಿ ಶುಚಿಗೊಳಿಸಿದರೆ ನಾವು ನಾಳೆಯೂ ಇಲ್ಲಿ ಮಾರಾಟ ಮಾಡಲು ಅವಕಾಶ ಸಿಗುತ್ತದೆ. ನಮ್ಮ ಕೆಲಸದ ಜಾಗವನ್ನು ನಾವೇ ಶುಚಿಯಾಗಿ ಇರಿಸಬೇಕಲ್ಲವೇ ಎನ್ನುತ್ತಾರೆ.

ಸೀಸನ್ ನ ಎರಡು ತಿಂಗಳು ಮಾತ್ರ ಕಾಡು ಹಣ್ಣನ್ನು ತಂದು ಮಾರಾಟ ಮಾಡುವ ಮೋಹಿನಿ ಅವರು, ಬೇರೆ ದಿನದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅಂದಹಾಗೆ ಮೋಹಿನಿ ಅವರು ಜನಪದ ಹಾಡುಗಾರ್ತಿ ಕೂಡಾ.

 

Advertisement

Udayavani is now on Telegram. Click here to join our channel and stay updated with the latest news.

Next