ಬೆಂಗಳೂರು: ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಜಂಬುನಾಥನಹಳ್ಳಿಯಲ್ಲಿ ಹಂಪಿ ಶುಗರ್ಸ್ ಪ್ರೈ.ಲಿ. ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲಿದ್ದು, ಇದಕ್ಕೆ ಸಚಿವ ಸಂಪುಟ ಸಭೆಯ ಒಪ್ಪಿಗೆ ದೊರೆತಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿತ್ತು. ಇದೀಗ 84 ಎಕರೆ ಪ್ರದೇಶದಲ್ಲಿ ಹಂಪಿಶುಗರ್ಸ್ ಕಾರ್ಖಾನೆ ತಲೆ ಎತ್ತಲಿದೆ. ಇದಕ್ಕೆ ಬೇಕಾದ ಸ್ಥಳವನ್ನು ನೀಡಲು ಕಂದಾಯ ಇಲಾಖೆ ಒಪ್ಪಿಗೆಯನ್ನು ಸೂಚಿಸಿದೆ. ಜಂಬೂನಾಥನಹಳ್ಳಿಯಲ್ಲಿ 484 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಹಂಪಿ ಶುಗರ್ಸ್ ಪ್ರೈ.ಲಿ.ಕಾರ್ಖಾನೆ ಸಂಸದರಾದ ಜಿ.ಎಂ. ಸಿದ್ದೇಶ್ವರ ಒಡೆತನದ ಕಾರ್ಖಾನೆಯಾಗಿದೆ ಎಂದು ತಿಳಿಸಿದರು.
ಇದೀಗ ನೂತನ ಕಾರ್ಖಾನೆ ಆರಂಭವಾಗುವುದರಿಂದ ಸ್ಥಳೀಯವಾಗಿ 2 ಸಾವಿರ ಉದ್ಯೋಗ ಸೃಷ್ಟಿಯಾಗಲಿದ್ದು, ಶೀಘ್ರವೇ ಕಾರ್ಖಾನೆ ಸ್ಥಾಪನೆ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಸಕ್ಕರೆ ಕಾರ್ಖಾನೆಯನ್ನು ಪುನಃ ಸ್ಥಾಪಿಸಬೇಕೆಂಬುದು ಇಲ್ಲಿನ ಸ್ಥಳೀಯರ ಬೇಡಿಕೆಯಾಗಿತ್ತು. ಮನವಿಗೆ ಸ್ಪಂದಿಸಿ ಕಾರ್ಖಾನೆ ಸ್ಥಾಪಿಸಲು ಸಹಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಆನಂದ್ ಸಿಂಗ್ ಅವರು ಇದೇ ವೇಳೆ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ: ಕರ್ಕಶ ಮ್ಯೂಸಿಕ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ದುಷ್ಕರ್ಮಿಗಳಿಂದ ಕೆನಡಾ ನಿವಾಸಿಯ ಹತ್ಯೆ