Advertisement

ಕೇಂದ್ರ ಬಜೆಟ್‌ ಕುರಿತ ವಿಶ್ಲೇಷಣೆ

11:23 AM Feb 02, 2018 | Team Udayavani |

ಹಲವು ಸುಧಾರಣಾ ಕ್ರಮಗಳ ಬಳಿಕ ಕೇಂದ್ರ ಬಜೆಟ್‌ನಲ್ಲಿ ಸಹಜವಾಗಿಯೇ ಜನಸಾಮಾನ್ಯರಲ್ಲಿ ನಿರೀಕ್ಷೆ ಇದ್ದದ್ದು ನಿಜ. ಕುತೂಹಲಭರಿತ ಕೇಂದ್ರದ ಬಜೆಟ್‌ ನಿರೀಕ್ಷೆಯನ್ನು ತಲುಪಿಲ್ಲ ಎನ್ನಬಹುದಾದರೂ, ಒಂದಷ್ಟು ಅಭಿವೃದ್ಧಿಗೆ ದಾರಿದೀಪವಾಗಿದೆ ಎನ್ನಲಡ್ಡಿಯಿಲ್ಲ. ಎಲ್ಲ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಬಜೆಟ್‌ ಹೆಣೆಯಲಾಗಿರುವುದು ಸ್ಪಷ್ಟ.

Advertisement

ಈ ಆಯವ್ಯಯದಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಾರುಕಟ್ಟೆಗಳ ನಿರ್ಮಾಣ, ಗ್ರಾಮೀಣ ಮೂಲ ಸೌಕರ್ಯಗಳ ಹೆಚ್ಚಳಕ್ಕೆ ಅನುದಾನ ನೀಡಿರುವುದು, ಜತೆಗೆ ಬಡತನ ನಿವಾರಣೆಗೆ ವಿಶೇಷ ಗಮನ ಹರಿಸಲಾಗಿದೆ.

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು 24 ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಏಕಲವ್ಯ ವಸತಿ ಶಾಲೆಗಳ ಸ್ಥಾಪನೆ, ಶಿಕ್ಷಣದ ಮೂಲ ಸೌಕರ್ಯಕ್ಕಾಗಿ ಅನುದಾನವನ್ನು ಘೋಷಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಕಲ್ಯಾಣಕ್ಕಾಗಿ ಪ್ರೋತ್ಸಾಹ ನೀಡಲಾಗಿದೆ.

ಉದ್ಯೋಗ ಸೃಷ್ಟಿ ಮತ್ತು ಬಂಡವಾಳ ಹೂಡಿಕೆಯನ್ನು ಪ್ರೋತ್ಸಾಹಿಸಲು 250 ಕೋಟಿ ರೂ. ವಾರ್ಷಿಕ ವ್ಯವಹಾರ ಇರುವ ಕಂಪೆನಿಗಳಿಗೆ ಶೇ. 25ರಷ್ಟು ಕಾರ್ಪೊರೇಟ್‌ ಇನ್‌ ಕಮ್‌ ಟ್ಯಾಕ್ಸ್‌ ರೇಟ್‌ ಕಡಿತ ಮಾಡಲಾಗಿದೆ. ಕಾರ್ಮಿಕ ಭವಿಷ್ಯ ನಿಧಿ  ಕಾಯಿದೆಗೆ ತಿದ್ದುಪಡಿ ತಂದು ಮಹಿಳೆಯರ ಇಪಿಎಫ್‌ ಕೊಡುಗೆ ಶೇ. 12ರಿಂದ ಶೇ.8ಕ್ಕೆ ಇಳಿಸಿರುವುದು ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿರುವುದರ ಸಂಕೇತ.

ಹಿರಿಯ ನಾಗರಿಕರಿಗೆ ಬಡ್ಡಿ ಆದಾಯದ ಮೇಲಿನ ತೆರಿಗೆ ಮಿತಿಯನ್ನು ಐವತ್ತು ಸಾವಿರ ರೂ.ಗಳಿಗೆ ಏರಿಸಿರುವುದು ಒಳ್ಳೆಯ ಬೆಳವಣಿಗೆ. ರೈಲ್ವೇ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲಕ ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ಇರಾದೆ ಪ್ರಕಟಿಸಲಾಗಿದೆ. ಕನಿಷ್ಠ ಸರಕಾರ ಮತ್ತು ಗರಿಷ್ಠ ಆಡಳಿತದ ಉದ್ದೇಶದಿಂದ ಪರೋಕ್ಷ ತೆರಿಗೆಯನ್ನು ಜಿಎಸ್‌ಟಿ ಸುಧಾರಣೆಯ ಮೂಲಕ ಸರಳೀಕರಣಸಿರುವುದೂ ಸೂಕ್ತ.

Advertisement

ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ವೇತನಗಳನ್ನು ಗಣನೀಯವಾಗಿ ಏರಿಸಿ, ನೌಕರರ
ವೈಯಕ್ತಿಕ ಆದಾಯ ತೆರಿಗೆಯ ಮಿತಿಯನ್ನು ಪರಿಷ್ಕರಿಸದಿರುವುದು ಬೇಸರದ ಸಂಗತಿ. ವಿತ್ತೀಯ ಕೊರತೆ ಶೇ.3.2ರಿಂದ 3.5ಕ್ಕೆ ಏರಿಕೆಯಾಗಿದ್ದು ಆರ್ಥಿಕ ಸಮತೋಲನ ಕಾಯ್ದುಕೊಳ್ಳುವುದು ಕೇಂದ್ರ ಸರಕಾರಕ್ಕೆ ಸವಾಲೇ ಸರಿ.

ನಿರ್ದಿಷ್ಟ ಕ್ಷೇತ್ರದಲ್ಲಿ ತೊಡಗಿಸಿ ಕೊಂಡ ವ್ಯಕ್ತಿಗೆ ಮತ್ತು ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡಿದ ಉದ್ಯಮಿಗಳಿಗೆ ಹೆಚ್ಚು ಗಮನ ನೀಡಿ, ನಿರುದ್ಯೋಗಿಗಳಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ವಿಶೇಷ ಸೌಲಭ್ಯ ಪ್ರಕಟಿಸದಿರುವುದು ವಿಷಾದನೀಯ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಶೇ. 4ರಷ್ಟು ಸೆಸ್‌ ವಿಧಿಸಿರುವುದರಿಂದ ಮಧ್ಯಮ ವರ್ಗದವರಿಗೆ ತುಟ್ಟಿಯಾಗಬಹುದು. ಪೆಟ್ರೋಲಿಯಮ್‌ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಇಳಿಸದಿರುವುದೂ ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನ ಎನ್ನಬಹುದು.

ಕೇಂದ್ರ ವಿತ್ತ ಸಚಿವರು ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಮಂಡಿಸಿದ್ದರೂ, ಎಲ್ಲ ಕ್ಷೇತ್ರಗಳ
ಪರಿಗಣನೆಯಲ್ಲಿ ಜನರ ನಿರೀಕ್ಷೆಯನ್ನು ಸಂಪೂರ್ಣವಾಗಿ ತಲುಪುವಲ್ಲಿ ಎಡವಿದೆ ಎಂಬುದೇ ನನ್ನ ಅಭಿಪ್ರಾಯ.
ಡಾ| ಮಂಜಳಾ ಬಿ.ಸಿ.
ಪ್ರಾಧ್ಯಾಪಕರು, ಅರ್ಥಶಾಸ್ತ್ರ
ಸ್ನಾತಕೋತ್ತರ ವಿಭಾಗ,
ಸಂತ ಫಿಲೋಮಿನಾ ಕಾಲೇಜು,
ದರ್ಬೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next