Advertisement

Mangaluru: ವೆನ್ಲಾಕ್ನಲ್ಲಿ ಶೀಘ್ರ ಕ್ರಿಟಿಕಲ್‌ ಕೇರ್‌ ವಿಭಾಗ

05:19 PM Aug 12, 2024 | Team Udayavani |

ಮಹಾನಗರ: ಅಪಘಾತ, ಸುಟ್ಟ ಗಾಯ ಸಹಿತ ಜೀವನ್ಮರಣ ಕಾಯಿಲೆಗೆ ಒಳಗಾಗಿ ತುರ್ತು ಚಿಕಿತ್ಸೆ ಅಗತ್ಯ ಇದ್ದವರಿಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ “ಕ್ರಿಟಿಕಲ್‌ ಕೇರ್‌ ವಿಭಾಗ’ ತೆರೆಯಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರಿಂದ ಜಿಲ್ಲೆ ಮಾತ್ರವಲ್ಲ, ಹೊರ ಜಿಲ್ಲೆಯವರಿಗೂ ಭಾರಿ ಅನುಕೂಲವಾಗಲಿದೆ.

Advertisement

“ಕ್ರಿಟಿಕಲ್‌ ಕೇರ್‌ ವಿಭಾಗ’ ಆರಂಭಿಸಬೇಕೆಂದು ಸಾರ್ವಜನಿಕರಿಂದ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ವೆನ್ಲಾಕ್ನಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಅದರಂತೆ ಕೆಲವು ತಿಂಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಗ್ಗೆ ಚರ್ಚಿಸಿ ಅತ್ಯಾಧುನಿಕ ವಿಭಾಗ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಕ್ಕೆ ನಿರ್ಧರಿಸಲಾಗಿದ್ದು, ರೋಗಿಗಳಿಗೆ ಶೀಘ್ರ ಅನುಕೂಲ ಒದಗಿಸುವ ಸಾಧ್ಯತೆ ಇದೆ.

ಈವರೆಗೆ ವೆನ್ಲಾಕ್ನ ಹಳೆಯ ಕಟ್ಟಡದ ಕ್ಯಾಶುವಾಲ್ಟಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ಆಸ್ಪತ್ರೆಯ ಹಳೆಯ ಲ್ಯಾಂಡ್ರಿ ಪ್ರದೇಶದಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭಿಸಲು ಚಿಂತನೆ ನಡೆಸಲಾಗಿದೆ. ಒಟ್ಟು ಮೂರು ಅಂತಸ್ತಿನ 50 ಹಾಸಿಗೆಯ ವ್ಯವಸ್ಥೆ ಇರಲಿದೆ. ತಳ ಅಂತಸ್ತಿನಲ್ಲಿ ಬಯೋಮೆಡಿಕಲ್‌ ತ್ಯಾಜ್ಯ ವಿಂಗಡಣೆ-ನಿರ್ವಹಣೆ ಕೊಠಡಿ, ಔಷಧ ಜೋಡಿಸಲು ಘಟಕ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ.

ಹೊಸ ವಿಭಾಗದಲ್ಲಿ ಏನೇನಿರಲಿದೆ?

ಕ್ರಿಟಿಕಲ್‌ ಕೇರ್‌ ವಿಭಾಗದಲ್ಲಿ ಮುಖ್ಯವಾಗಿ ಅಪಘಾತ ಮತ್ತು ತುರ್ತು ಚಿಕಿತ್ಸೆ, ಮೆಡಿಕಲ್‌ ಐಸಿಯು, ಸರ್ಜಿಕಲ್‌ ಐಸಿಯು, ಸುಟ್ಟಗಾಯಗಳಿಗೆ ಚಿಕಿತ್ಸೆ, ತುರ್ತು ಚಿಕಿತ್ಸಾ ಕೊಠಡಿ, ಒಬ್ಸರ್ವೇಶನ್ ಬೆಡ್‌, ಸಾಮಾನ್ಯ ಶಸ್ತ್ರಚಿಕಿತ್ಸಾ ಕೊಠಡಿ, ರಕ್ತ ಸಂಗ್ರಹ ಕೊಠಡಿ, ಪ್ರಯೋಗಾಲಯ, ಎಕ್ಸ್‌ರೇ, ಅಲ್ಟ್ರಾಸೌಂಡ್‌, ಹೈ ಡಿಪೆಂಡೆನ್ಸಿ ಘಟಕ, ವೈದ್ಯರ ಕೊಠಡಿ, ಎರಡು ಶಸ್ತ್ರಚಿಕಿತ್ಸಾ ಕೊಠಡಿ, ಐಸೋಲೇಶನ್‌ ಐಸಿಯು, ನೋಂದಣಿ ವ್ಯವಸ್ಥೆ ಸಹಿತ ವಿವಿಧ ಮೂಲಭೂತ ವ್ಯವಸ್ಥೆ ಇರಲಿದೆ.

Advertisement

ಸುತ್ತಲಿನ ಜಿಲ್ಲೆಯವರಿಗೂ ಅನುಕೂಲ

ವೆನ್ಲಾಕ್ ಆಸ್ಪತ್ರೆಗೆ ಹತ್ತಿರದ ಸುಮಾರು ಎಂಟು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆಂದು ಬರುತ್ತದೆ. ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಾರವಾರ, ಕಾಸರಗೋಡು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಯ ಮಂದಿಯೂ ಚಿಕಿತ್ಸೆಗೆ ಇದೇ ಆಸ್ಪತ್ರೆಗೆ ಬರುತ್ತಾರೆ. ಕ್ಲಿಷ್ಪ ಕಾಯಿಲೆ ಕಾರಣಕ್ಕೆ ತಾಲೂಕು ಆಸ್ಪತ್ರೆಗಳಿಂದ ಬಹುತೇಕ ಪ್ರಕರಣಗಳು ಇಲ್ಲಿಗೆ ಶಿಫಾರಸ್‌ಮಾಡಲಾಗುತ್ತದೆ. ದಿನದ 24 ಗಂಟೆಯೂ ಆಸ್ಪತ್ರೆಯನ್ನು ಚಿಕಿತ್ಸೆ ನೀಡಲಾಗುತ್ತಿದೆ.

ವೆನ್ಲಾಕ್ನಲ್ಲಿ ಇನ್ನಷ್ಟು ಸೌಲಭ್ಯ

ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ರಿಟಿಕಲ್‌ಕೇರ್‌ ವಿಭಾಗ ತೆರೆಯಲು ಆರಂಭಕ್ಕೆ ಸಿದ್ಧತೆ

ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ 55 ಕೋ.ರೂ. ವೆಚ್ಚದಲ್ಲಿ ಸರ್ಜಿಕಲ್‌ ಬ್ಲಾಕ್‌ ಕಟ್ಟಡ ನಿರ್ಮಾಣ ಪೂರ್ಣ

ಹೃದಯ ಸಂಬಂಧಿಸಿದ ರೋಗಗಳ ಅತ್ಯಾಧುನಿಕ ತಪಾಸಣೆ ಮತ್ತು ಚಿಕಿತ್ಸೆಗೆ ಕ್ಯಾಥ್‌ ಲ್ಯಾಬ್‌ ನಿರ್ಮಾಣ

ಶೀಘ್ರ ಶಂಕುಸ್ಥಾಪನೆ

ವೆನ್ಲಾಕ್ ಆಸ್ಪತ್ರೆಯಲ್ಲಿ “ಕ್ರಿಟಿಕಲ್‌ ಕೇರ್‌ ವಿಭಾಗ’ ತೆರೆಯಲು ರಾಜ್ಯ ಸರಕಾರ ನಿರ್ಧರಿಸಿದೆ. ಅದರಂತೆ ಕೆಲವೇ ದಿನಗಳಲ್ಲಿ ಶಂಕುಸ್ಥಾಪನೆ ನಡೆಸಿ, ಕಾಮಗಾರಿ ಆರಂಭವಾಗಲಿದೆ. ತುರ್ತು ಚಿಕಿತ್ಸೆ ಅಗತ್ಯವುಳ್ಳವರಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಈ ವಿಭಾಗ ನೆರವಾಗಲಿದೆ. ಈ ಮೂಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಮತ್ತಷ್ಟು ಸೇವೆಗಳು ಸಿಗುವಂತಾಗಲಿದೆ.
– ಡಾ| ಜೆಸಿಂತ ಡಿ’ಸೋಜಾ, ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ವೆನ್ಲಾಕ್ ಜಿಲ್ಲಾಸ್ಪತ್ರೆ ಮಂಗಳೂರು

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next