Advertisement

State Govt ಬಗೆಹರಿಯದ ಗೃಹಲಕ್ಷ್ಮಿ ತಾಂತ್ರಿಕ ತೊಡಕು

01:19 AM Oct 07, 2023 | Team Udayavani |

ಉಡುಪಿ: ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ವಿಘ್ನಗಳು ಇನ್ನೂ ಬಗೆಹರಿದಿಲ್ಲ. ಮಾತ್ರವಲ್ಲದೆ, ಅಪ್‌ಡೇಟ್‌ ಆಗಿರುವ ಪಟ್ಟಿಯನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ಆಗಸ್ಟ್‌ ತಿಂಗಳಲ್ಲಿ ಎಷ್ಟು ಫ‌ಲಾನುಭವಿಗಳು 2 ಸಾವಿರ ರೂ. ಪಡೆದಿದ್ದಾರೋ ಅವರಿಗೆ ಮಾತ್ರ ಎರಡನೇ ಕಂತು ಬರಲಿದೆ.

Advertisement

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಅನೇಕರಿಗೆ ತಾಂತ್ರಿಕ ಕಾರಣದಿಂದ ಮೊದಲ ಕಂತು ಬಂದಿಲ್ಲ. ಈಗ ಸರಕಾರ ಎರಡನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡಿದ್ದು, ಅಂತಿಮ ಆದೇಶ ಅನಂತರದಲ್ಲಿ ಫ‌ಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಿದೆ.

ಉಡುಪಿ ಜಿಲ್ಲೆಯಲ್ಲಿ 2,56,850 ಹಾಗೂ ದ.ಕ.ದಲ್ಲಿ 4,03,333 ಕಾರ್ಡ್‌ದಾರರಿದ್ದಾರೆ. ಆಗಸ್ಟ್‌ 15ಕ್ಕೂ ಮೊದಲು ಉಡುಪಿಯಲ್ಲಿ 2,03,367 ಹಾಗೂ ದ.ಕ.ದಲ್ಲಿ 3,15,726 ಕಾರ್ಡ್‌ದಾರರು ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಉಡುಪಿಯಲ್ಲಿ 1,79,951 ಹಾಗೂ ದ.ಕ.ದಲ್ಲಿ 2,83,392 ಕಾರ್ಡ್‌ ದಾರರಿಗೆ ಯೋಜನೆಯ ಮೊದಲ ಕಂತು ಬಂದಿದೆ. ಉಡುಪಿಯಲ್ಲಿ 23,416 ಹಾಗೂ ದ.ಕ.ದಲ್ಲಿ 32,334 ಕಾರ್ಡ್‌ದಾರರಿಗೆ ತಾಂತ್ರಿಕ ಕಾರಣದಿಂದ ಯೋಜನೆಯ ಮೊದಲ ಕಂತು ಸಿಕ್ಕಿಲ್ಲ.

ಈಗಾಗಲೇ ಎರಡನೇ ಕಂತು ಪಾವತಿಗೆ ಉಡುಪಿ ಜಿಲ್ಲೆಗೆ ಸುಮಾರು 34.18 ಕೋ.ರೂ. ಹಾಗೂ ದ.ಕ. ಜಿಲ್ಲೆಗೆ 56.67 ಕೋ.ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಹೊಸದಾಗಿ ಯಾರಿಗೂ ಯೋಜನೆಯ ಫ‌ಲ ಸಿಗದು. ಈ ಹಿಂದೆ ಪಡೆದವರಿಗೆ ಮಾತ್ರ ಎರಡನೇ ಕಂತು ಸಿಗಲಿದೆ ಎಂದು ಹೇಳಲಾಗುತ್ತಿದೆ.

ಪಟ್ಟಿ ವಿಳಂಬ
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಜಿಲ್ಲಾ ಕೇಂದ್ರದಿಂದ ಪರಿಷ್ಕೃತ ಪಟ್ಟಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಕೇಂದ್ರ ಕಚೇರಿಯಿಂದ ಸೇವಾಸಿಂಧು ಪೋರ್ಟಲ್‌ಗೆ ಒದಗಿಸಲಾಗಿದೆ. ಹೊಸ ಅರ್ಜಿ, ತಿದ್ದುಪಡಿ ಅರ್ಜಿ, ಬ್ಯಾಂಕ್‌ ಖಾತೆ ಅಪ್‌ಡೇಟ್‌ ಸಹಿತದ ವಿವಿಧ ಅರ್ಜಿಗಳನ್ನು ಒಳಗೊಂಡಂತೆ ಎಲ್ಲವನ್ನು ಯೋಜನೆಗೆ ಅಳವಡಿಸಲು ಸಲ್ಲಿಸಲಾಗಿದೆ. ಪರಿಷ್ಕೃತ ಅರ್ಜಿಗಳನ್ನು ಒಮ್ಮೆಗೆ ಯೋಜನೆ ವ್ಯಾಪ್ತಿಗೆ ತರುವ ಹಿನ್ನೆಲೆಯಲ್ಲಿ ಸದ್ಯ ಈ ಹಿಂದೆ ಎಷ್ಟು ಫ‌ಲಾನುಭವಿಗಳು ಹಣ ಪಡೆದಿದ್ದಾರೋ ಅವರಿಗೆ ಮಾತ್ರ 2ನೇ ಕಂತು ತಲುಪಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

Advertisement

ಒಟ್ಟಿಗೆ ಹಣ ಸಿಗಲಿದೆ
ಆಗಸ್ಟ್‌ 15ರ ಮೊದಲು ಅರ್ಜಿ ಸಲ್ಲಿಸಿ, ಸಮ್ಮತಿ ಪಡೆದಿದ್ದರೂ ತಾಂತ್ರಿಕ ಕಾರಣದಿಂದ ಹಣ ಬಾರದ ಅರ್ಜಿಗಳಿಗೆ ತಾಂತ್ರಿಕ ಸಮಸ್ಯೆ ಬಗೆಹರಿದ ಅನಂತರ ಆಗಸ್ಟ್‌ ತಿಂಗಳಿಂದಲೇ ಸರಕಾರದ ಯೋಜನೆಯ ಫ‌ಲ ಸಿಗಲಿದೆ. ಆದರೆ, ಹೊಸ ಅರ್ಜಿ ಅಥವಾ ಸರಕಾರ ಸಮ್ಮತಿಸುವ 2ನೇ ಪಟ್ಟಿಗೆ ಆಗಸ್ಟ್‌ನಿಂದಲೇ ಪೂರ್ವಾನ್ವಯವಾಗುವಂತೆ ಹಣ ಬರಲಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.