Advertisement
ಮುಳ್ಳಿಕಟ್ಟೆ – ತ್ರಾಸಿ ನಡುವಿನ ಮೊವಾಡಿ ಕ್ರಾಸ್ ಬಳಿಯಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆಯವರು ಘನ ವಾಹನ ಸವಾರರು, ಸರಕು ಸಾಗಾಟದ ಲಾರಿ ಹಾಗೂ ಇನ್ನಿತರ ವಾಹನಗಳ ಚಾಲಕರು, ನಿರ್ವಾಹಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಟ್ರಕ್ ಬೇ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿದ್ದಾರೆ. ಇಲ್ಲಿಯೇ ಒಂದು ಬದಿ ವಿಶ್ರಾಂತಿ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ.
Related Articles
Advertisement
ದೂರ-ದೂರದ ಊರುಗಳಿಂದ ಸರಕು ಸಾಗಾಟ ಮಾಡುವ ಲಾರಿ ಚಾಲಕ, ನಿರ್ವಾಹಕರ ಅನುಕೂಲಕ್ಕಾಗಿ ಮಾಡಲಾದ ಈ ವ್ಯವಸ್ಥೆಯು ಈವರೆಗೆ ಪ್ರಯೋಜನವಾಗದೇ ನಿಷ್ಪ್ರಯೋಜಕವಾಗಿದೆ. ಇನ್ನಾದರೂ ಅದನ್ನು ಕೂಡಲೇ ಸರಿಪಡಿಸಿ, ಲಾರಿ ಚಾಲಕ, ನಿರ್ವಾಹಕರು, ಇತರ ವಾಹನ ಚಾಲಕರಿಗೆ ಪ್ರಯೋಜನವಾಗುವಂತಾಗಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಬೀಚ್ ಬಳಿಯೇ ನಿಲುಗಡೆ
ತ್ರಾಸಿ, ಮರವಂತೆ ಕಡಲ ತೀರದಲ್ಲಿ ಲಾರಿ, ಟ್ರಕ್‌ಗಳನ್ನು ನಿಲ್ಲಿಸಿ, ಇಲ್ಲಿಗೆ ಬರುವ ಪ್ರವಾಸಿಗರಿಗೆ ತೊಂದರೆ ಕೊಡಬಾರದು ಎನ್ನುವ ನಿಟ್ಟಿನಲ್ಲಿ ಲಾರಿ, ಟ್ರಕ್ ಚಾಲಕರು, ನಿರ್ವಾಹಕರಿಗೆ ಅನುಕೂಲವಾಗುವಂತೆ ಮುಳ್ಳಿಕಟ್ಟೆಯಲ್ಲಿ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆಗೆ ಇಲ್ಲಿ ವಿಶ್ರಾಂತಿ ಕೊಠಡಿ, ಶೌಚಾಲಯ, ಸ್ನಾನಗೃಹದ ಕೊಠಡಿಯನ್ನು ನಿರ್ಮಿಸುವಂತೆ ಸೂಚಿಸಲಾಗಿತ್ತು. ಅದರಂತೆ ಕಳೆದ ವರ್ಷದ ಜೂನ್‌ನಲ್ಲಿ ಇದರ ಕಾಮಗಾರಿ ಪೂರ್ಣಗೊಂಡು, ಒಂದಷ್ಟು ದಿನ ತೆರೆದುಕೊಂಡಿತ್ತು. ಆದರೆ ಅದಕ್ಕೆ ಶೌಚಾಲಯ, ಸ್ನಾನಗೃಹಕ್ಕೆ ಬಳಸಲು ನೀರಿನ ಸಂಪರ್ಕವನ್ನೇ ಇನ್ನೂ ಕಲ್ಪಿಸದ ಕಾರಣ, ಗಬ್ಬೆದ್ದು, ದುರ್ನಾತ ಬೀರುವಂತಾಗಿತ್ತು. ಇದಾದ 15 ದಿನಗಳಲ್ಲೇ ಮುಚ್ಚಲಾಗಿತ್ತು. ಅಲ್ಲಿಂದ ಈವರೆಗೆ ಬಾಗಿಲು ತೆರೆದೇ ಇಲ್ಲ. ಇದರಿಂದಾಗಿ ಸರಕು ಲಾರಿಗಳನ್ನು ಚಾಲಕರು ಮರವಂತೆ ಬೀಚ್ ಬಳಿಯೇ ಸಾಲುಗಟ್ಟಿ ನಿಲ್ಲಿಸುತ್ತಿದ್ದಾರೆ. ಇದರಿಂದ ಪ್ರವಾಸಿಗರಿಗೂ ಬೀಚ್ ವೀಕ್ಷಣೆಗೆ ಅಡ್ಡಿಯಾಗುತ್ತಿದೆ.
ತಿಳಿದು, ಕ್ರಮಕೈಗೊಳ್ಳುವೆ
ಮುಳ್ಳಿಕಟ್ಟೆಯ ಟ್ರಕ್ ಬೇ ಶೌಚಾಲಯ, ಸ್ನಾನಗೃಹ ತೆರೆಯದ ಬಗ್ಗೆ ನನಗೆ ತಿಳಿದಿರಲಿಲ್ಲ. ಈ ಬಗ್ಗೆ ಆದಷ್ಟು ಬೇಗ ತಿಳಿದುಕೊಂಡು, ಅಗತ್ಯ ಕ್ರಮಕೈಗೊಳ್ಳಲಾಗುವುದು. – ನಿಂಗೇಗೌಡ, ಪಿಡಿ, ಹೆದ್ದಾರಿ ಪ್ರಾಧಿಕಾರ ಮಂಗಳೂರು
ಪ್ರಶಾಂತ್ ಪಾದೆ