Advertisement
ಆಶ್ಚರ್ಯವೆಂದರೆ, ಹಾಗೆ ಒಂದು ಜೀವನ್ಮರಣ ಪ್ರಶ್ನೆಯುಂಟಾಗದೆ ನಮ್ಮ ಶಕ್ತಿಯೇ ನಮಗೆ ತಿಳಿದುಬರದು. ಒಂದು crisis ಸಂಭವಿಸಿದಾಗ- ಪ್ರಾಣಾಪಾಯದಂಥ ಸಂದರ್ಭವೊಂದರಲ್ಲಿ ನಾವೋ ನಮ್ಮ ತೀರ ಆಪ್ತರೋ ಸಿಕ್ಕಿದಾಗ- ನಮ್ಮೊಳಗಿನಿಂದ ಅದೆಲ್ಲಿಂದಲೋ ಶಕ್ತಿಯೊಂದು ಸ್ಫೋಟಗೊಂಡಂತೆ ಚಿಮ್ಮಿ ಬರುವ ಅನುಭವ ಯಾರಿಗೆ ಆಗಿಲ್ಲ? ಸಾಮಾನ್ಯ ಸಂದರ್ಭಗಳಲ್ಲಿ ಇದು ಪ್ರಕಟವಾಗುವುದಿಲ್ಲ. ಅಸಾಮಾನ್ಯ-ಅನಿರೀಕ್ಷಿತ ಸಂದರ್ಭಗಳಲ್ಲಿ ಮಾತ್ರ ಪ್ರಕಟವಾಗುವುದು. crisis ಅನ್ನು ನಿರೀಕ್ಷೆ ಮಾಡಲಾಗುವುದಿಲ್ಲ. ಆದುದರಿಂದ ಅದಕ್ಕೆ ಪೂರ್ವಭಾವಿಯಾಗಿ ಸಿದ್ಧರಾಗಿರಲಾಗುವುದಿಲ್ಲ. ನಿರೀಕ್ಷಿಸಿಕೊಂಡಿದ್ದರೆ ಅದೇ ಕಾರಣದಿಂದ ಸಂಭವಿಸುವುದೇ ಇಲ್ಲ. ಏಕೆಂದರೆ, ಇವೆಲ್ಲ ತಿಳಿದು-ಪ್ರಜ್ಞಾಪೂರ್ವಕವಾಗಿ- ನಡೆಯುವುದಲ್ಲ. ಇದೇ ಆಶ್ಚರ್ಯ! ಪ್ರಜ್ಞಾಪೂರ್ವಕತೆಯು ದುರ್ಬಲವಾಗಿ ಕಂಡುಬಂದು ಅಪ್ರಜ್ಞಾಪೂರ್ವಕವಾಗಿ ನಡೆಯುವುದು ಪ್ರಬಲ ಎನ್ನುವ ಸತ್ಯ. ಜೀವನ್ಮರಣ ಪ್ರಶ್ನೆಯೊಂದು ಎದುರಾದಾಗ ಇಂಥ ಶಕ್ತಿಯೊಂದು- ಅದನ್ನು ಪ್ರಾಣಶಕ್ತಿ ಎನ್ನುವೆವು- ಬಿಡುಗಡೆಯಾಗುವುದು. ಉಪನಿಷತ್ತಿಗೆ ಇವೆಲ್ಲ ಗೊತ್ತು. ಜೊತೆಗೆ ಇನ್ನಷ್ಟು ಕೂಡಾ ಗೊತ್ತು!
ಗೀತೆಯಲ್ಲಿ ಕೃಷ್ಣನ ಒಂದು ಮಾತು- ಬಹು ಪ್ರಸಿದ್ಧವಾದದ್ದು. ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ… ತದಾ ಆತ್ಮಾನಂ ಸೃಜಾಮ್ಯಹಂ ಎಂಬ ಮಾತು. ಧರ್ಮವು ಗ್ಲಾನಿಗೊಳಗಾದಾಗ, ಅಧರ್ಮವು ಆವೇಶದಿಂದ ವಿಜೃಂಭಿಸುವಾಗ, ಈ ವಿಜೃಂಭಣೆಯೇ ಧರ್ಮವಿರಬಹುದೆಂದು ಜನ ವಿವಂಚನೆಗೆ ಒಳಗಾದಾಗ, ಇವೆಲ್ಲದರಿಂದ ಧರ್ಮವು ಮತ್ತಷ್ಟು ಖನ್ನವಾದಾಗ- ನಾನು ನನ್ನನ್ನೇ ಪ್ರಕಟಿಸಿಕೊಳ್ಳುತ್ತೇನೆ. ಯುಗಯುಗಗಳಲ್ಲೂ ಈ ಮಾತು ನಿಜ ಎಂಬ ಕೃಷ್ಣನ ಮಾತು. ಈ ಮಾತು ನಮ್ಮೊಳಗಿನ ಅಪ್ರಜ್ಞೆಯ ಮಾತು! ಸ್ವ-ಇಚ್ಛೆಯಿಂದಲೆಂಬಂತೆ ನಮ್ಮೊಳಗೆ ಅಡಗಿರುವ “ಸತ್ಯ’ವು ಸ್ವಇಚ್ಛೆಯಿಂದಲೇ ತನ್ನ ಇರವನ್ನು ಹೊರಗೆಡಹಿದ ಮಾತು! ಜೀವನ್ಮರಣ ಪ್ರಶ್ನೆಯೊಂದು ನಿಮಗೆ ಎದುರಾಗುವುದನ್ನು ನಾನು ಕಾಯುತ್ತಿದ್ದೇನೆ ಎಂಬ ಸೂಚನೆಯ ಮಾತು. ಕೇವಲ ವೈಯಕ್ತಿಕ ಬದುಕಿನ ಪ್ರಶ್ನೆಗಳಿಗೆ- ಸಂದರ್ಭಗಳಿಗೆ ಅನ್ವಯಿಸಿ ಜೀವನ್ಮರಣ ಪ್ರಶ್ನೆಗಳೆಂದು ನೋಡಬೇಡಿ- ವಿಶಾಲವಾದ ಮಾನವ ಸಮುದಾಯದ ಬದುಕಿಗೆ ಅನ್ವಯಿಸಿ ನೋಡಿ- ಇದನ್ನೇ “ಧರ್ಮ’ ಎನ್ನುವುದು- ಹಾಗೆ ನೋಡಿದಾಗಲೆಲ್ಲ ಅಧರ್ಮದ ಮೆರೆದಾಟ, ಧರ್ಮಗ್ಲಾನಿ ಕಂಡುಬರುತ್ತಲೇ ಇದೆಯಾಗಿ- ನೀವು ಈ ಎಲ್ಲ ಕಾರಣಗಳಿಂದ ಚಿತ್ತಗ್ಲಾನಿಗೆ ಒಳಗಾದರೆ- ನಿಜಕ್ಕೂ ಒಳಗಾದರೆ- ಆ ಗ್ಲಾನಿಯ ಮೂಲಕ ನಾನೇ ಪ್ರಕಟಗೊಳ್ಳುವೆನೆನ್ನುವ ಮಾತು! ಲೋಕದ ಕಾರಣದಿಂದ ಮನುಷ್ಯ ಜೀವ ನಿಜವಾಗಿ ಖನ್ನತೆಗೆ ಒಳಗಾಗುವುದನ್ನು ಆ ಮೂಲಕ ಸಂವೇದನೆಯ ಸೂಕ್ಷ್ಮತೆಯನ್ನು ಪಡೆಯುವುದನ್ನು ನಮ್ಮೊಳಗಿನ ದೊಡ್ಡ ಜೀವವೊಂದು ಕಾಯುತ್ತಿದೆ! ನಾವು ಖನ್ನರಾದಂತೆ ಅದಕ್ಕೆ ಹೊರಹೊಮ್ಮುವ ಹುಮ್ಮಸ್ಸು. ನಾವು ಬಳಲಿದರೆ ಅದಕ್ಕೆ ಶಕ್ತಿ. ನಾವು ಕಂಗೆಟ್ಟರೆ ಅದಕ್ಕೆ ಜ್ಞಾನೋದಯ! ಎಂಥ ವಿಚಿತ್ರವಿದು. ನಮ್ಮೊಳಗೇ ನಡೆವ ವಿಚಿತ್ರವಿದು. ಈ ಲೋಕಕ್ಕೆ ನಮ್ಮ ನಡುವೆ ದೇವರು ಕೆಳಗಿಳಿದು ಬರುತ್ತಾನೆ ಎನ್ನುತ್ತದೆ ಹಲವು ಭಾರತೀಯ ವಾಗ್ಮಿಯ. ಇದಕ್ಕೆ “ಅವತರಣ’ ಎಂದು ಹೆಸರು. ಅಂದರೆ ಕೆಳಗಿಳಿದು ಬರುವುದು. ಹಾಗೆ ಬಂದವನು ಅವತಾರ ಅಥವಾ ಅವತಾರಿ. ಇಳಿದು ಬರುವುದು ಏಕೆ? ನಮ್ಮನ್ನು ಉದ್ಧರಿಸಲಿಕ್ಕೆ. ಅಂದರೆ ನಾವು ಮೇಲೇರುವುದಕ್ಕೆ. ನಾವು ಏರುವುದಕ್ಕೆ ಅದು ಇಳಿಯುವುದು. ಒಂದು ಬದಿಯಲ್ಲಿ ಏರಿಕೆ. ಇನ್ನೊಂದು ಬದಿಯಲ್ಲಿ ಇಳಿಕೆ! The way up is the way down ಎಂದವನು ಕವಿ ಎಲಿಯಟ್! ಪತನ- ಉತ್ಥಾನೇರ್ ಬಂಧುರ ಪಂಥಾ ಎಂದವರು ರವೀಂದ್ರರು. ಪ್ರಜ್ಞೆ-ಅಪ್ರಜ್ಞೆಗಳ ಸಂಬಂಧ ಹೀಗೆ ಇದೆ. ಇದು ಉಪನಿಷತ್ತಿಗೆ ಗೊತ್ತು.
Related Articles
Advertisement
ಸೃಷ್ಟಿಯಲ್ಲಿ “ಶ್ರದ್ಧೆ’ಯ ಜಾಗ ಎಲ್ಲಿದೆ? “ಶ್ರದ್ಧೆ’ಯ ಮೊದಲು ಏನಿತ್ತು? ಶ್ರದ್ಧೆಗೆ ಮೊದಲು “ಪ್ರಾಣ’ವಿತ್ತು. ಪ್ರಾಣ ತರಂಗಗಳಿದ್ದುವು. ಪ್ರಾಣದಿಂದಲೇ “ಶ್ರದ್ಧೆ’ ಒಡಮೂಡಿತು. “ಪ್ರಾಣಾತ್ ಶ್ರದ್ಧಾಂ’ ಎಂದು ಪ್ರಶ್ನೋಪನಿಷತ್ತಿನ ಮಾತು. ಆದುದರಿಂದಲೇ ಶ್ರದ್ಧೆಯು ಎಚ್ಚರಗೊಂಡಾಗ ಅಜ್ಞಾತ ಶಕ್ತಿಪ್ರವಾಹವೊಂದು ಹೊಮ್ಮುವುದು! ಶ್ರದ್ಧೆಯ ಮೂಲಕವೇ ಪ್ರಾಣ ತರಂಗಗಳು ಕ್ರಿಯಾಪರವಾಗುವುವು. ಈ ಅನುಭವದ ಮೇಲಿನಿಂದಲೇ ಪ್ರಾಣಶಕ್ತಿ ಮತ್ತು ಶ್ರದ್ಧೆ- ಒತ್ತೂತ್ತಿಗೆ ಇವೆ ಎಂಬ ಕಾಣ್ಕೆ ಉಂಟಾಯಿತು. ಶ್ರದ್ಧೆಗೆ ಮೊದಲು ಪ್ರಾಣವಿದ್ದರೆ ಶ್ರದ್ಧೆಯ ಅನಂತರ “ಆಕಾಶ’ ಇದೆ. ಪಂಚಭೂತಗಳಲ್ಲಿ ಮೊದಲನೆಯದು ಮತ್ತು ಅತಿಸೂಕ್ಷ್ಮವಾದದ್ದು. ಆಕಾಶವೆಂದರೆ ಎಡೆ-ಬಯಲು- ಎಲ್ಲ ಮೂರ್ತಾಮೂರ್ತ ವಸ್ತುಗಳಿಗೆ ಆಸ್ಪದವಾಗಿರುವುದು. ನಿಜ. ಆದರೆ ಶ್ರದ್ಧೆಯು ಆಕಾಶಕ್ಕಿಂತ ಸೂಕ್ಷ್ಮವಾದ ಸಂವೇದನೆಯಾಗಿದೆ! ಆದುದರಿಂದಲೇ ಶ್ರದ್ಧೆಯು ಜಾಗ್ರತವಾದಾಗ ಅದು ಎಲ್ಲವನ್ನೂ ಒಳಗೊಳ್ಳುವ ಕಾಣೆRಯಾಗಿ ಅರಳಿಕೊಳ್ಳುತ್ತದೆ. “ನನ್ನನ್ನು ಯಾರಿಗೆ ಕೊಡುತ್ತೀಯೆ?’ ಎಂದು ಕೇಳುವಾಗ ತನಗೆ ತಿಳಿದಿರದ-ಯಾರಿಗೂ ತಿಳಿದಿರದ ಭವಿಷ್ಯವನ್ನು ಒಳಗೊಳ್ಳುವುದಕ್ಕೆ ಅದು ಸಜ್ಜಾಗಿದೆ ! ಆಕಾಶದಂಥ ಆಕಾಶವು ಶ್ರದ್ಧೆಯಲ್ಲಿಯೇ ಸೇರಿಕೊಳ್ಳಬೇಕು !
ನಿಜ. ಎಲ್ಲವನ್ನೂ ಒಪ್ಪೋಣ. ಆದರೆ ನನ್ನನ್ನು ಯಾರಿಗೆ ಕೊಡುತ್ತೀಯೆ? ಎಂಬ ಎದೆ ಕರಗಿಸುವ ಮಾತಿಗೆ ತಂದೆ ವಾಜಶ್ರವಸ ಉರಿದೆದ್ದು “”ನಿನ್ನನ್ನು ಮೃತ್ಯುವಿಗೆ ಕೊಟ್ಟಿದ್ದೇನೆ” ಎಂದನಲ್ಲ- ಈ ಮೂಲಕ ಶ್ರದ್ಧೆಯ ಪರೀಕ್ಷೆ- ಅಗ್ನಿ ಪರೀಕ್ಷೆಯೇ ನಡೆಯಬೇಕೆನ್ನುವುದು ಉಪನಿಷತ್ತಿನ ಕೆಚ್ಚು. ಶ್ರದ್ಧೆಯ ಪರೀಕ್ಷೆ ನಡೆಯುವಾಗ ಅಹಂಕಾರದ ಪರೀಕ್ಷೆಯೂ ನಡೆದುಹೋಗುತ್ತದೆ. ಯಾವ ಬಗೆಯಲ್ಲೂ ಸರಳೀಕರಣ ಉಪನಿಷತ್ತಿಗೆ ಇಷ್ಟವಲ್ಲ. ಅದು ಉಪನಿಷತ್ತಿನ ಶ್ರದ್ಧೆ !
ರೇಖಾಚಿತ್ರ : ಎಂ. ಎಸ್. ಮೂರ್ತಿ
ಲಕ್ಷ್ಮೀಶ ತೋಳ್ಪಾಡಿ