ಆಗ ನನಗೆ ಆರೋಗ್ಯ ಸರಿ ಇರಲಿಲ್ಲ. ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಲಿಲ್ಲ. ಒಳ್ಳೆ ವೈದ್ಯರಿಗೆ ತೋರಿಸುವ ಸಲುವಾಗಿ, ದೂರದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ನನ್ನ ಅಕ್ಕ ತನ್ನ ಮನೆಗೆ ಬರಲು ಹೇಳಿದಳು. ಹಳ್ಳಿಯನ್ನು ಬಿಟ್ಟು ದೂರದ ಊರಿಗೆ ನಾನೆಂದೂ ಪ್ರಯಾಣ ಮಾಡದವನಲ್ಲ. ಆದರೂ ಮನೆಯವರ ಒತ್ತಾಯದಿಂದಾಗಿ ನೇರವಾಗಿ ಹುಬ್ಬಳ್ಳಿಯ ಬಸ್ ಹತ್ತಿದೆ.
ಅಪ್ಪ, ಖರ್ಚಿಗೆಂದು ಸ್ವಲ್ಪಹಣ ನೀಡಿದ್ದರು. ಅಕ್ಕನಿಗಾಗಿ ಅಮ್ಮ ಸಂಡಿಗೆ ಮಾಡಿ ಕಳುಹಿಸಿದ್ದಳು. ಮನೆಯಲ್ಲಿ ನನ್ನೊಡನೆ ಬರಲು ಯಾರಿಗೂ ಕಾಲಾವಕಾಶವಿರದಿದ್ದರಿಂದ ನಾನೊಬ್ಬನೇ ಹುಬ್ಬಳ್ಳಿಗೆ ಹೊರಡಬೇಕಾಯಿತು.ಅಕ್ಕ ಆಗಾಗ ಕರೆ ಮಾಡಿ ನಾನಿರುವ ಸ್ಥಳವನ್ನು ತಿಳಿದುಕೊಳ್ಳುತ್ತಿದ್ದಳು. ಹುಬ್ಬಳ್ಳಿಗೆ ಬಂದ ತಕ್ಷಣ ಕರೆ ಮಾಡು, ಕರೆದುಕೊಂಡು ಬರಲು ನಿನ್ನ ಭಾವ ಬರ್ತಾರೆ ಎಂದೂ ತಿಳಿಸಿದ್ದಳು.
ಕೊನೆಗೂ ಹುಬ್ಬಳ್ಳಿ ಬಂದೇ ಬಿಟ್ಟಿತು. ಬಸ್ಸಿನಿಂದ ಇಳಿದ ನಂತರ ಅಕ್ಕನ ಮನೆಗೆ ಕರೆ ಮಾಡಿದರಾಯಿತು ಎಂದುಕೊಂಡು ಜನರ ಗದ್ದಲದ ಮಧ್ಯೆ ಇಳಿದು ಕೊಂಡೆ. ನೋಡ ನೋಡುತ್ತಿದ್ದಂತೆಯೇ ಯಾರೋ ಒಬ್ಬ ನನ್ನ ಕಿಸೆಯಲ್ಲಿದ್ದ ಮೊಬೈಲ್ ಎಗರಿಸಿಕೊಂಡು ಓಡತೊಡಗಿದ. ನಾನು ಊರಿಗೆ ಹೊಸಬ. ಅಪರೂಪಕ್ಕೆ ಬಸ್ ಹತ್ತಿದ್ದೆ. ಹಿಡಿಯೋಣ ಅಂದರೆ, ಎರಡೂ ಕೈಗಳಲ್ಲಿ ಚೀಲಗಳಿವೆ. ಅದನ್ನು ಹೊತ್ತು ಕೊಂಡು ಓಡುವುದಾದರೂ ಹೇಗೆ? ನಾನು ಮೊಬೈಲ್ ಮೊಬೈಲ್ ಎಂದು ಕಿರುಚಿದೆ. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಕೊನೆಗೆ ತಲೆಯ ಮೇಲೆ ಕೈ ಹೊತ್ತು ಕೂರಬೇಕಾಯಿತು. ಮೊಬೈಲ್ ಏನೋ ಹೋಯಿತು. ಈಗ ಅಕ್ಕನ ಮನೆಗೆ ಹೋಗುವುದು ಹೇಗೆ ಎಂಬುದೇ ಚಿಂತೆಯಾಯಿತು. ಆದರೆ, ಅನತಿ ದೂರದಲ್ಲಿ ನಿಂತಿದ್ದ ಒಬ್ಬ ಹಳ್ಳಿಯವ ನನ್ನ ಪಡಿಪಾಟಲನ್ನೆಲ್ಲಾ ಗಮನಿಸಿ ಆ ಕಳ್ಳನನ್ನು ಬೆನ್ನಟ್ಟಿದ. ಒಂದಷ್ಟು ದೂರ ಇಬ್ಬರೂ ಓಡಿದರು. ಕೊನೆಗೆ ಕಳ್ಳ ಮೊಬೈಲ್ ಅನ್ನು ಬಿಸಾಕಿ ಓಡಿ ಹೋದ. ಹಳ್ಳಿಯವ ಮೊಬೈಲ್ ತಂದು ನನ್ನ ಕೈಯಲ್ಲಿಟ್ಟ. ಜೀವ ಬಂದಂಗೆ ಆಯಿತು.
ಅವನಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂಬುದು ನನಗೆ ಗೊತ್ತಾಗಲಿಲ್ಲ. ನನ್ನ ಕಣ್ಣುಗಳಲ್ಲಿ ಆಗಲೇ ನೀರು ಆರಿಸಿತ್ತು. “ತುಂಬಾ ಧನ್ಯವಾದಗಳು’ ಅಂದೆ. ನನ್ನ ಕಣ್ಣಲ್ಲಿದ್ದ ಆತಂಕವನ್ನು ಗಮನಿಸಿದ ಆ ವ್ಯಕ್ತಿ, ಹುಶಾರು ತಮ್ಮಾ, ಮೊಬೈಲ್ ಜೋಪಾನ ಅಂತ ಹೇಳಿ ಹೊರಟೇ ಹೋದ.
-ವೆಂಕಟೇಶ ಚಾಗಿ