Advertisement

ಹಣವಿದ್ದರೂ ಅಭಿವೃದ್ಧಿ ಕಾಣದ ಉದ್ಯಾನ

05:07 PM Nov 05, 2019 | Suhan S |

ಹುಮನಾಬಾದ: ಪಟ್ಟಣ ಪ್ರಮುಖ ಭಾಗದಲ್ಲಿ 6 ದಶಕಗಳ ಹಿಂದೆ ನಿರ್ಮಿಸಲಾಗಿದ್ದ ಪುರಸಭೆ ಉದ್ಯಾನ ನಿರ್ವಹಣೆ ಇಲ್ಲದೇ ಹಾಳಾಗುತ್ತಿದ್ದು,ಅಭಿವೃದ್ಧಿಗಾಗಿ ಕೆಆರ್‌ಡಿಬಿಯಿಂದ 28ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈವರೆಗೂ ಅಭಿವೃದ್ಧಿ ಕಂಡಿಲ್ಲ.

Advertisement

ಪಟ್ಟಣದ ಹಿತಚಿಂತಕರ ವಿಶೇಷ ಆಸಕ್ತಿಯಿಂದ 70ರ ದಶಕದಲ್ಲಿ ಪುರಸಭೆ ಉದ್ಯಾನಕ್ಕಾಗಿ 7ಎಕರೆ ಜಮೀನು ನಿಗದಿಪಡಿಸಲಾಗಿತ್ತು. 6 ದಶಕಗಳು ಕಳೆದ ಬಳಿಕ ಈಗ ಅಲ್ಲಿ ಕೇವಲ 4.5 ಎಕರೆ ಜಮೀನು ಮಾತ್ರ ಇದೆ. ಮಧ್ಯದಲ್ಲಿ ದಿ. ಮೆರಾಜುದ್ದಿನ್‌ ಪಟೇಲ ಸಚಿವರು, ವೀರಣ್ಣ ಪಾಟೀಲ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪುರಸಭೆ ಉದ್ಯಾನಕ್ಕೆ ವಿಶೇಷ ಕಳೆ ಬಂದಿತ್ತು. ಆ ಸಂದರ್ಭದಲ್ಲಿ ದಿ. ಮೆರಾಜುದ್ದಿನ್‌ ಪಟೇಲ ಹಾಗೂ ಪುರಸಭೆ ಅಧ್ಯಕ್ಷ ವೀರಣ್ಣ ಪಾಟೀಲ ಅವರ ಬಾಂಧವ್ಯ ಉಮವಾಗಿದ್ದ ಹಿನ್ನೆಲೆಯಲ್ಲಿ ಅದಕ್ಕಾಗಿ ಸಾಕಷ್ಟು ಅನುದಾನ ತಂದಿದ್ದಲ್ಲದೇ ಅಷ್ಟೇ ವೇಗದಲ್ಲಿ ಅಭಿವೃದ್ಧಿ ಪಡಿಸಿದ್ದರು.

ಉದ್ಯಾನದಲ್ಲಿ ಹಚ್ಚ ಹಸಿರು ಹುಲ್ಲು, ಅತ್ಯಾಕತರ್ಷಕ ವಿದ್ಯುತ್‌ ದೀಪಗಳ ವ್ಯವಸ್ಥೆ, ಮಕ್ಕಳ ಆಟಿಕೆ ಸಾಮಗ್ರಿ, ಆಕರ್ಷಕ ಆಸನಗಳು ಒಳಗೊಂಡಂತೆ ಜನಾಕರ್ಷಕ ಎಲ್ಲ ಸೌಲಭ್ಯ ಕಲ್ಪಿಸಿ, ಅಭಿವೃದ್ಧಿಪಡಿಸಿದ್ದರಿಂದ ಪ್ರತಿನಿತ್ಯ ಸಂಜೆ ಪಟ್ಟಣದ ವಿವಿಧ ಬಡಾವಣೆಯ ನೂರಾರು ಮಂದಿ ಪರಿವಾರ ಸಮೇತ ಆಗಮಿಸಿ, ಆನಂದಿಸುತ್ತಿದ್ದರು. ಮಧ್ಯಾಹ್ನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಂದು ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ಉದ್ಯಾನ ಸದ್ಬಳಕೆ ಮಾಡಿಕೊಳ್ಳುತ್ತಿದ್ದರು.

ಆದರೆ ಕೆಲವು ವರ್ಷಗಳ ನಂತರ ಪುರಸಭೆ ಉದ್ಯಾನ ಇದ್ದೂ ಇಲ್ಲದಂತಾಗಿದೆ. ಮೇಲಿಂದ ಮೇಲೆ ಕುಸಿದ ಸುತ್ತುಗೋಡೆ ನಿರ್ಮಾಣ ಇತ್ಯಾದಿ ಕೆಲಸಕ್ಕೆ ಪುರಸಭೆಯಿಂದ ಅನುದಾನವೇನೋ ಬಿಡುಗಡೆಯಾಯಿತು. ಆದರೆ ಆ ಹಣ ಉದ್ದೇಶಿತ ಕೆಲಸಕ್ಕೆ ಬಳಕೆ ಆಗಿದ್ದು ಕಡಿಮೆ. ಆ ಪೈಕಿ ವ್ಯರ್ಥ ಪೋಲಾಗಿದ್ದೇ ಹೆಚ್ಚು. ಹೇಳುವವರು ಕೇಳುವವರಿಲ್ಲದೇ ಪುರಸಭೆ ಉದ್ಯಾನವೀಗ ಉಂಡಾಡಿಗಳ ತಾಣವಾಗಿದೆ. ಬೆಳಗಿನ ಜಾವ ಆಸುಪಾಸಿನ ಜನ ಶೌಚಕ್ಕೆ ಬರುತ್ತಾರೆ ಎಂಬುದು ಸಾರ್ವಜನಿಕರ ಮಾತು.

ಮೆರಾಜುದ್ದಿನ್‌ ಪಟೇಲರ ಅವಧಿಯಲ್ಲಿ ಅಳವಡಿಸಲಾಗಿದ್ದ ಮಕ್ಕಳ ಆಟಿಕೆ ಉಪಕರಣ ಸೂಕ್ತ ನಿರ್ವಹಣೆಯಿಂದ ಸಂಪೂರ್ಣ ತುಕ್ಕುಹಿಡಿದು ಹಾಳಾಗಿವೆ. ಸಾರ್ವಜನಿಕರು ಕುಳಿತುಕೊಳ್ಳಲು ಅಳವಡಿಸಿದ್ದ ಆಸನಗಳೂ ಹಾಳಾಗಿವೆ. ಕೆಲ ಗುತ್ತಿಗೆದಾರರು ನಿರ್ಭಯವಾಗಿ ಮರಳು ಸಂಗ್ರಹಿಸಿಕೊಂಡಿದ್ದಾರೆ. ಈ ವಿಷಯ ಗಮನದಲ್ಲಿದ್ದರೂ ಸಂಬಂಧಪಟ್ಟವರು ಮೌನಕ್ಕೆ ಶರಣಾಗಿದ್ದಾರೆ ಎನ್ನುವುದು ಸಾರ್ವಜನಿಕರ ಗಂಭೀರ ಆರೋಪ.

Advertisement

ಉದ್ಯಾನ ಅಭಿವೃದ್ಧಿ ವಿಶೇಷ ಆಸಕ್ತಿ ಹೊಂದಿರುವ ಶಾಸಕ ರಾಜಶೇಖರ ಬಿ.ಪಾಟೀಲ ಅವರು 2017ನೇ ಸಾಲಿನಲ್ಲಿ ಉದ್ಯಾನ ಅಭಿವೃದ್ಧಿಗಾಗಿ ಎಚ್‌ಕೆಆರ್‌ಡಿಬಿಯಿಂದ 28ಲಕ್ಷ ರೂ. ಬಿಡುಗಡೆಗೊಳಿಸಿದ್ದರು. ಅಲ್ಲದೇ ಸಂಬಂಧಪಟ್ಟ

ಅಧಿಕಾರಿಗಳಿಗೆ ಆದೇಶ ನೀಡಿ, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ನೋಡಿಕೊಂಡಿದ್ದಾರೆ. ಆದರೆ ಸಂಬಂಧಪಟ್ಟ ಗುತ್ತಿಗೆದಾರರು ಈವರೆಗೆ ಹುಮನಾಬಾದನತ್ತ ಹಾಯದ ಕಾರಣ ಎಂದೋ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಹಿಂದೆ ಹೋದ ದಿನಗಳ ಬಗ್ಗೆ ಈಗ ಚಿಂತಿಸುವುದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿ ವಿಷಯದಲ್ಲಿಸಂಬಂಧಪಟ್ಟವರು ಕುಂಟುನೆಪವೊಡ್ಡಿ ಅನಗತ್ಯ ವಿಳಂಬಿಸದೇ ಬಂದ ಅನುದಾನವನ್ನು ಸಾಧ್ಯವಾದಷ್ಟು ಶೀಘ್ರ ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಸೌಲಭ್ಯ ಒದಗಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆ.

ಪುರಸಭೆ ಉದ್ಯಾನದಲ್ಲಿ ಗುತ್ತಿಗೆದಾರರು ಅನಧಿಕೃತವಾಗಿ ಮರಳು ಸಂಗ್ರಹಿಸಿದ್ದು ಗಮನಕ್ಕೆ ಬಂದಿಲ್ಲ ಅದನ್ನು ಶೀಘ್ರ ತೆರವುಗೊಳಿಸುತ್ತೇವೆ. ಉದ್ಯಾನ ಅಭಿವೃದ್ಧಿಗೆ ಪುರಸಭೆ ಹಿರಿಯ ಸದಸ್ಯರು ಹೇಳಿದಂತೆ 28ಲಕ್ಷ ರೂ. ಬಂದಿದೆ. ಶಾಸಕರ ಜೊತೆಗೆ ಚರ್ಚಿಸಿ, ಮುಂದೆ ಕೈಗೊಳ್ಳಬೇಕಾದ ಕ್ರಮ ಕುರಿತು ಚರ್ಚಿಸಿ, ಕಾಮಗಾರಿ ಶೀಘ್ರ ಆರಂಭಗೊಳ್ಳುವಂತೆ ನೋಡಿಕೊಳ್ಳಲು ಯತ್ನಿಸಲಾಗುವುದು.-ಶಂಭುಲಿಂಗ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ

 

-ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next