ತತ್ವಶಾಸ್ತ್ರ, ಸಾಹಿತ್ಯ, ಆಡಳಿತ, ರಾಜಕೀಯ, ಶಿಕ್ಷಣ ಹೀಗೆ ಮೊದಲಾದ ಕ್ಷೇತ್ರಗಳಲ್ಲಿ ವಿದ್ವತೂ³ರ್ಣ ಕಾರ್ಯ ಮಾಡುವ ಮೂಲಕ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಹಾನ್ ಚೇತನಾರಾಗಿದ್ದಾರೆ. ತಮ್ಮ ಜನ್ಮ ದಿನವನ್ನು ಕೇವಲ ತಮ್ಮ ಹುಟ್ಟು ಹಬ್ಬವಾಗಿಸದೇ “”ನನ್ನ ಮೇಲೆ ಇಟ್ಟ ಪ್ರೀತಿ, ವಿಶ್ವಾಸ, ಅಭಿಮಾನದಿಂದ ಶಿಕ್ಷಕರ ಘನತೆ ಉತ್ತುಂಗಕ್ಕೇರಲಿ. ನಾನು ಮೊದಲು ಶಿಕ್ಷಕ ವೃತ್ತಿಯನ್ನು ಆರಂಭಿಸಿದೆ. ಸಮಾಜದಲ್ಲಿ ಜವಾಬ್ದಾರಿ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಅವರ ಸೇವೆಯನ್ನು ಸ್ಮರಿಸುವ ಮೂಲಕ ನನ್ನ ಜನ್ಮ ದಿನದ ಆಚರಣೆಯಾಗಲಿ, ಶಿಕ್ಷಕರ ಸೇವೆಯು ಅಮರವಾಗಲಿ, ವಿದ್ಯಾಚೇತಕ, ವಿದ್ಯೆಯ ಅರ್ಚಕ, ಎಂದು ಶಿಕ್ಷಕರ ದಿನಾಚರಣೆಯನ್ನು ನನ್ನ ಜನ್ಮ ದಿನದಂದು ದೇಶದ ತುಂಬಾ ಆಚರಿಸುವಂತಾಗಲಿ, ಅಂದು ಆದರ್ಶ ಮಹಾನ್ ಶಿಕ್ಷಕರನ್ನು ಸ್ಮರಿಸಿ ಸಮ್ಮಾನಿಸುವಂತಾಗಲಿ” ಎಂದು ಕರೆ ನೀಡಿದ್ದರು. ಅದರಂತೆ ನಮ್ಮ ದೇಶದಲ್ಲಿ 1962ರಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಲಾಯಿತು.
ಈ ವಿಶೇಷವಾದ ದಿನ ಕೇವಲ ರಾಧಾಕೃಷ್ಣನ್ ಅವರನ್ನು ಸ್ಮರಿಸುವ ದಿನವಾಗದೇ, ಗುರು-ಶಿಷ್ಯರ ಬಾಂಧವ್ಯ ಹಾಗೂ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಎಲ್ಲ ಶಿಕ್ಷಕರನ್ನು ನೆನೆಯುವ ವಿಶೇಷ ದಿನವಾಗಿದೆ.
ವಿಜ್ಞಾನ, ಕಲೆ, ವಾಣಿಜ್ಯ ಹೀಗೆ ಯಾವುದೇ ಕ್ಷೇತ್ರವಿರಬಹುದು, ಆಯಾ ಕ್ಷೇತ್ರಗಳಲ್ಲಿನ ಜ್ಞಾನವನ್ನು ತನ್ನ ಶಿಷ್ಯರಿಗೆ ಸಮರ್ಥವಾಗಿ ಬೋಧಿಸಬಲ್ಲವನು ಆದರ್ಶ ಶಿಕ್ಷಕ. ಆದರೆ ಆತ ಕೇವಲ ಬೋಧಿಸಿದರೆ ಸಾಲದು, ಆತನ ನಡತೆಯ ಮೂಲಕವೂ ಶಿಷ್ಯರಿಗೆ ಮಾದರಿಯಾಗಿರಬೇಕು. ಆದರೆ ಇಂದು ಹೆಚ್ಚು ಹಣ ಸಂಪಾದಿಸಲು ಅನ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಿ, ಆಸಕ್ತಿಯಿಂದ ಶಿಕ್ಷಕ ವೃತ್ತಿಯನ್ನು ಆಯ್ದುಕೊಳ್ಳುವವರ ಸಂಖ್ಯೆ ಘನನೀಯವಾಗಿ ಕಡಿಮೆಯಾಗಿದೆ. ವಿದ್ವಾಂಸರಾದರೂ ತಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಕೆಲಸ ದಕ್ಕದೇ ಹೋದರೆ ದಿಕ್ಕಿಲ್ಲದೇ ಶಿಕ್ಷಣ ಕ್ಷೇತ್ರಕ್ಕೆ ಸೇರುವವರನ್ನು ನಾವಿಂದು ನೋಡಬಹುದಾಗಿದೆ. ಇದು ಸಾರ್ವತ್ರಿಕವಾಗಿ ಅಲ್ಲದಿದ್ದರೂ ಬಹುತೇಕವಾಗಿ ನಡೆಯುತ್ತಿರುವ ಸಂಗತಿ.
ಯಾವಾಗ ಬುದ್ಧಿವಂತರು, ಪ್ರಜ್ಞರು ಶಿಕ್ಷಕರಾಗಲು ಒಲವು ತೋರುತ್ತಾರೋ ಆಗ ಉತ್ತಮ ಶಿಷ್ಯರ ಸಂಖ್ಯೆಯೂ ಬೆಳೆಯುತ್ತದೆ. ಹಿಂದೆಲ್ಲಾ ಗುರು ಅಥವಾ ಶಿಕ್ಷಕ ಅನ್ನಿಸಿಕೊಂಡವರು ತಮ್ಮ ವಿದ್ಯಾರ್ಥಿಗಳಿಗಾಗಿ ಸನ್ನಡತೆಯ ಒಂದು ಸೂತ್ರವನ್ನೇ ಸಿದ್ಧಪಡಿಸುತ್ತಿದ್ದರು. ಜ್ಞಾನಾರ್ಜನೆಯ ಜತೆಗೆ ಚಾರಿತ್ರ್ಯ ಶುದ್ಧಿಗೂ ಅಲ್ಲಿ ಪ್ರಾಮುಖ್ಯವಿರುತ್ತಿತ್ತು. ಇಂತಹ ಗುರುಪರಂಪರೆಯನ್ನು ನಮ್ಮ ಇತಿಹಾಸದುದ್ದಕ್ಕೂ ನೋಡಬಹುದು. ಪ್ರಾಚೀನ ಕಾಲದಲ್ಲಿ ವಿದ್ಯಾರ್ಜನೆಗಾಗಿ ಶಿಷ್ಯನಾದವನು ಗುರುವಿನ ಬಳಿಗೇ ಹೋಗುತ್ತಿದ್ದ. ಗುರುಗಳ ಪದತಲದಲ್ಲಿ ಕುಳಿತು ವಿದ್ಯಾರ್ಜನೆಯನ್ನು ಒಂದು ತಪಸ್ಸೆಂದು ಭಾವಿಸಿ ಕಲಿಯುತ್ತಿದ್ದ. ಆ ವಿದ್ಯಯು ಲೌಕಿಕ ಪ್ರಯೋಜನಕ್ಕಿಂತ ಮುಕ್ತಿಯ ಮಾರ್ಗ ತೋರುವಂತಹುದಾಗಿತ್ತು.
ಪ್ರಾಚೀನ ಕಾಲದಿಂದಲೂ ಗುರುಗಳಿಗೆ ಸಮಾಜದಲ್ಲಿ ಮಹತ್ತರ ಸ್ಥಾನವನ್ನು ನೀಡಲಾಗುತ್ತಿತ್ತು. ಆದರೆ ಶಿಕ್ಷಕರಿಗಿದ್ದ ಮಹತ್ವ, ಸಮಾಜದಲ್ಲಿ ಹಾಗೂ ವಿದ್ಯಾರ್ಥಿಯ ಜೀವನದಲ್ಲಿ ಅವರಿಗಿರುತ್ತಿದ್ದ ಪಾತ್ರ ಪ್ರಸ್ತುತ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ದೇಶವು ಮುಂದುವರೆದಂತೆ ಶಿಕ್ಷಣ ಕ್ಷೇತ್ರವೂ ಪ್ರಗತಿಯಲ್ಲಿದೆ. ತಂತ್ರಜ್ಞಾನದ ಬೆಳವಣಿಗೆಯಿಂದ ಮತ್ತು ಬದಲಾಗುತ್ತಿರುವ ಶಿಕ್ಷಣ ವಿಧಾನಗಳೊಂದಿಗೆ, ಶಿಕ್ಷಕರು ಸಮಯಾತೀತ ಮೌಲ್ಯಗಳನ್ನು ಎತ್ತಿಹಿಡಿಯುವಾಗ ಹೊಸ ವಿಧಾನಗಳಿಗೆ ಹೊಂದಿಕೊಳ್ಳುತ್ತಿದ್ದಾರೆ. ಜ್ಞಾನವನ್ನು ನೀಡುವ ಮತ್ತು ಪಾತ್ರವನ್ನು ರೂಪಿಸುವ ಮೂಲ ಸಾರವನ್ನು ಸಂರಕ್ಷಿಸುವಾಗ ಅವರು ಹೊಸತನವನ್ನು ಸ್ವೀಕರಿಸುತ್ತಿದ್ದಾರೆ.
ಭಾರತವು ತನ್ನ ಪ್ರಗತಿಯ ಪಯಣದಲ್ಲಿ ಮುನ್ನಡೆಯುತ್ತಿರುವಾಗ, ಇಂದು ಶಿಕ್ಷಕರಿಂದ ಬೆಳಗಿದ ಜ್ಞಾನದ ಬೆಳಕು ಮುಂದಿನ ಪೀಳಿಗೆಗೆ ದಾರಿಯನ್ನು ಬೆಳಗಿಸುತ್ತದೆ ಎಂಬುದನ್ನು ನೆನಪಿನಲ್ಲಿಡೋಣ. ಈ ದಿನ ಮತ್ತು ಪ್ರತಿದಿನ, ಉಜ್ವಲ ಭವಿಷ್ಯಕ್ಕೆ ಸೇತುವೆಗಳನ್ನು ನಿರ್ಮಿಸುವ ಮಾರ್ಗದರ್ಶಕರನ್ನು ಗೌರವಿಸೋಣ, ಪ್ರಶಂಶಿಸೋಣ ಮತ್ತು ಆಚರಿಸೋಣ.
-ಸ್ವಾಮಿ ಶಶಾಂಕ್ ಟಿ.ಎಚ್.ಎಂ
ಆಳ್ವಾಸ್ ಕಾಲೇಜು ಮೂಡುಬಿದಿರೆ