ಹೊಳೆಆಲೂರು(ಗದಗ): ನೆರೆ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ಆರಂಭಿಸದ ಹೊಳೆಆಲೂರು ಗ್ರಾ.ಪಂ. ಅಧಿಕಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ತೀವ್ರ ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ ಹೊಳೆಆಲೂರು ಗ್ರಾಮದಲ್ಲಿ ಬುಧವಾರ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ, ಅಹವಾಲು ಆಲಿಸಿದರು. ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಉಕ್ಕಿ ಹರಿದಿದ್ದರಿಂದ ಮನೆಗಳಿಗೆ ನೀರು ನುಗ್ಗಿತ್ತು.ಇದರಿಂದ ನವ ಗ್ರಾಮದಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲ. ಸತತ ಮಳೆಯಿಂದಾಗಿ ತೇವಗೊಂಡಿರುವ ಮೇಲ್ಛಾವಣಿ ಯಾವಾಗ ಬೀಳುತ್ತೋ ಎಂಬ ಭಯ ಆವರಿಸಿದೆ.
ತಲೆ ಮೇಲೆ ಸೂರಿಲ್ಲದೇ, ತಾತ್ಕಾಲಿಕವಾಗಿ ರೈಲ್ವೇ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದೇವೆ. ಅಡುಗೆ ಮಾಡಿಕೊಳ್ಳಲು ಆಹಾರ ಪದಾರ್ಥಗಳಿಲ್ಲದೇ, ಅವರಿವರು ಕೊಟ್ಟ ಊಟದಲ್ಲೇ ಹೊಟ್ಟೆ ತುಂಬಿಕೊಳ್ಳುವಂತಾಗಿದೆ. ಕಾಳಜಿ ಕೇಂದ್ರ ಆರಂಭಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದರೂ, ಸ್ಪಂದಿಸುತ್ತಿಲ್ಲ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದರು.
ನೆರೆ ಸಂತ್ರಸ್ತರ ದೂರಿನಿಂದ ಕೆರಳಿದ ಸಚಿವ ಸಿ.ಸಿ.ಪಾಟೀಲ್ , ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಹೊಳೆಆಲೂರಿನಲ್ಲಿ ಪರಿಹಾರ ಕೇಂದ್ರ ಆರಂಭಿಸದಿರುವುದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ವರದಿ ನೀಡುವಂತೆ ನನಗೆ ಸೂಚಿಸಿದ್ದಾರೆ. ಭೀಕ ರ ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಆದರೆ, ನೀವು ಮಾಡುವ ಸಣ್ಣ- ಪುಟ್ಟ ತಪ್ಪಿಗೆ ನಾವು ಉತ್ತರಿಸುವಂತಾಗುತ್ತ ದೆ ಎಂದು ಕಿಡಿ ಕಾರಿದರು.
ತಕ್ಷಣವೇ ಪರಿಹಾರ ಕೇಂದ್ರವನ್ನು ಆರಂಭಿಸಿ, ನೆರೆ ಸಂತ್ರಸ್ತರು ತಮ್ಮ ಮನೆಗೆ ಹಿಂದಿರುಗುವವರೆಗೂ ಪರಿಹಾರ ಕೇಂದ್ರ ನಿರಂತರವಾಗಿ ಮುಂದುವರಿಯಬೇಕು. ಜೊತೆಗೆ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.