Advertisement
ಸರಕಾರ ತುಂಬ ಆಸಕ್ತಿಯಿಂದ ಕಟ್ಟಿದ ಮತ್ತು ನೇರವಾಗಿ ಸರಕಾರದ ಆಡಳಿತಕ್ಕೆ ಒಳಪಟ್ಟ ಮಂಡ್ಯದ ಮೈಶುಗರ್ ಕಂಪನಿ ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಂ.ಪಿ.ಎಂ ಎರಡು ಸಕ್ಕರೆ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳು ಕಳೆದ 10 ವರ್ಷಗಳಿದ ನಿರಂತರವಾಗಿ ಹಾನಿ ಅನುಭವಿಸುತ್ತಿರುವುದರಿಂದ ಎರಡೂ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಿ ಕೈತೊಳೆೆದುಕೊಳ್ಳುವುದಕ್ಕೆ ಸರ ಕಾರ ಯೋಚಿ ಸು ತ್ತಿ ದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿಸ್ಪರ್ಧಿ ಯಾಗಿ ಕಾರ್ಯನಿರ್ವಹಿಸಬೇಕಾದ ಸರಕಾರಿ ಕಾರ್ಖಾನೆಗಳು ಖಾಸಗಿಯವರ ಪಾಲಾದರೆ ಹೇಗೆ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
Related Articles
Advertisement
ಮಂಡ್ಯದ ಈ ಕಾರ್ಖಾನೆ ಮುಂದಿನ ದಿನಗಳಲ್ಲಿ ಕರ್ನಾಟಕದ ಸಕ್ಕರೆ ಉದ್ದಿಮೆಯ ಹೆಬ್ಟಾಗಿಲನ್ನೇ ತೆರೆಯಿತು. ಕರ್ನಾಟಕ ಸಕ್ಕರೆ ಉದ್ದಿಮೆಯ ಹಬ್ ಆಗಿ ಬೆಳೆಯಲು ನಾಂದಿ ಹಾಡಿತು. ರೈತರ ಬಾಳಿಗೂ ಬೆಳಕಾಯಿತು. ಮಂಡ್ಯ ಸಕ್ಕರೆಯ ನಾಡು ಎಂಬ ಹೆಮ್ಮೆಯ ಹೆಸರು ಪಡೆಯಿತು.
ಸ್ವಾತಂತ್ರ್ಯಾ ನಂತರ ಈ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿ ದುಡಿದರು. ಕಬ್ಬು ಅರೆಯುವ ಸಾಮರ್ಥ್ಯವನ್ನು 5000 ಟನ್ನಿಗೆ ಹೆಚ್ಚಿಸಲಾಯಿತು. ಕಬ್ಬು ಕೃಷಿ ಸಂಶೋಧನೆ ಕೇಂದ್ರ ಆರಂಭ ವಾಯಿತು. ರೈತರಿಗೆ ಸುಧಾರಿಸಿದ ಬೀಜ, ಗೊಬ್ಬರ ನೀಡಿ ಹೆಚ್ಚು ಕಬ್ಬು ಬೆಳೆಯಲು ಪ್ರೋತ್ಸಾಹ ನೀಡಲಾಯಿತು. ಇದರಿಂದಾಗಿ ಮಂಡ್ಯ ಜಿಲ್ಲೆ ಯಲ್ಲಿ ಹೊಸ ಸಕ್ಕರೆ ಕಾರ್ಖಾನೆಗಳನ್ನು ಕಟ್ಟುವ ಹುಮ್ಮಸ್ಸು ಬೆಳೆಯಿತು.
ಹಿನ್ನಡೆ ಆರಂಭಮನುಷ್ಯ ಬದುಕಿಗೆ ಒಂದು ಗತಿ ಇರುವಂತೆ ಕೈಗಾರಿಕೆಗಳ ಬದುಕಿಗೂ ಒಂದು ಗತಿ ಇರುವಂತೆ ಕಾಣುತ್ತದೆ. ರಾಜಕೀಯ ಮೇಲಾಟ, ಅಪ್ರಾಮಾಣಿಕತೆ, ಭ್ರಷ್ಟಾಚಾರ, ರೈತ ಸಂಘಟನೆಗಳಲ್ಲಿ ಬಿರುಕು ಈ ಎಲ್ಲ ಕಾರಣಗಳಿಂದ 2000 ಇಸ್ವಿಯಿಂದ ಮಂಡ್ಯ ಕಾರ್ಖಾನೆ ದಿನ ದಿನಕ್ಕೆ ಸೊರಗ ತೊಡಗಿತು. ಅದು ಇಲ್ಲಿಯವರೆಗೆ ಉಸಿರು ಹಿಡಿದದ್ದು ಸರಕಾರದ ಅನುದಾನದ ಮೇಲೆ. ಈ ಕಾರ್ಖಾನೆ 2015-16 ಮತ್ತು 2016-17ನೆಯ ಹಂಗಾಮಿನಲ್ಲಿ ಪೂರ್ಣ ಸ್ಥಗಿತಗೊಂಡಿತ್ತು. ರಾಜ್ಯ ಸರಕಾರ 100 ಕೋಟಿ ಅನುದಾನ ಬಿಡುಗಡೆ ಮಾಡಿದ ಮೇಲೆ 2018-19ನೆಯ ಹಂಗಾಮಿನಲ್ಲಿ ಕೇವಲ 1.32 ಲಕ್ಷ ಟನ್ ಕಬ್ಬು ಅರಿಯಿತು. (ಈ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಸಾಮರ್ಥ್ಯ ವರ್ಷಕ್ಕೆ 6 ರಿಂದ 7 ಲಕ್ಷ ಟನ್) ಮಂಡ್ಯ ಸಕ್ಕರೆ ಕಾರ್ಖಾನೆಗೆ ಸರಕಾರ ಕಳೆದ 12 ವರ್ಷಗಳ ಅವಧಿಯಲ್ಲಿ ಒಟ್ಟು 480 ಕೋಟಿ ರೂ ಸಹಾಯಧನ ನೀಡಿದೆ. ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 100 ಕೋಟಿ ರೂ ಸಹಾಯಧನ ಬಿಡುಗಡೆ ಮಾಡಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾದ ಹಣದಲ್ಲಿ 2 ಸುಸಜ್ಜಿತ ಸಕ್ಕರೆ ಕಾರ್ಖಾನೆಗಳನ್ನು ಕಟ್ಟಬಹುದಾಗಿತ್ತು. ಕಳೆದ 20 ವರ್ಷಗಳ ಅವಧಿಯಲ್ಲಿ ಈ ಕಾರ್ಖಾನೆ ಒಂದು ಪೈಸೆ ಲಾಭ ಮಾಡಿಲ್ಲ. ಅಲ್ಲಿ ಉದ್ಯೋಗಿಗಳ ಸಂಬಳಕ್ಕೆ ಸರಕಾರವೇ ದುಡ್ಡು ಕೊಡುತ್ತಿದೆ. ಗುಣಮಟ್ಟವಿಲ್ಲದ ಸಕ್ಕರೆ ಉತ್ಪಾದನೆ
ರಾಜ್ಯದ ಸಕ್ಕರೆ ಕಾರ್ಖಾನೆಗಳ ಸಕ್ಕರೆಯ ಸರಾಸರಿ ಇಳುವರಿ ಪ್ರಮಾಣ 10% ಇದೆ. ಆದರೆ ಮೈಶುಗರ್ ಕಾರ್ಖಾನೆಯ ಇಳುವರಿ ಕೇವಲ 7% ಇದೆ. ಅಂದರೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಪ್ರತಿಟನ್ ಕಬ್ಬಿಗೆ 100 ಕಿ.ಲೋ ಸಕ್ಕರೆ ಉತ್ಪಾದಿಸಿದರೆ, ಮೈಶುಗರ್ ಕೇವಲ 70 ಕಿ.ಲೋ ಸಕ್ಕರೆ ಉತ್ಪಾದಿಸುತ್ತದೆ. ಇದು ದೊಡ್ಡ ಹಾನಿಗೆ ಮೊದಲ ಕಾರಣವಾಗಿದೆ. ಕಳೆದ ವರ್ಷ 1.32 ಲಕ್ಷ ಕಬ್ಬು ಅರೆದು 91 ಕ್ವಿಂಟಲ್ ಸಕ್ಕರೆ ಉತ್ಪಾದಿಸಲಾಗಿದೆ. ಅತ್ಯಂತ ನೋವಿನ ಸಂಗತಿ ಎಂದರೆ ಉತ್ಪಾದನೆಯಾದ ಎಲ್ಲ ಸಕ್ಕರೆ ಆಹಾರ ಎಂದು ಬಳಸಲು ಯೋಗ್ಯವಾಗಿಲ್ಲವೆಂದು ಆರೋಗ್ಯ ಇಲಾಖೆ ನೋಟಿಸು ನೀಡಿದೆ. ಮಾರಾಟಕ್ಕೆ ಅವಕಾಶವಿಲ್ಲದೆ ಸಕ್ಕರೆಯ ಮೂಟೆಗಳು ಗೋದಾಮುಗಳಲ್ಲಿ ಕೊಳೆಯತೊಡಗಿವೆ. ಇದರಿಂದಾಗಿ ಕಳೆದ ವರ್ಷದ ಒಟ್ಟು ಶ್ರಮ “”ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ” ಆಗಿದೆ. ಕಾರ್ಖಾನೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಈ ಸಕ್ಕರೆ ಸಾಕ್ಷಿಯಾಗಿ ನಿಂತಿದೆ. ಭದ್ರಾವತಿ ಎಂ.ಪಿ.ಎಂ ಕಾರ್ಖಾನೆ ಕಥೆ
ಭದ್ರಾವತಿಯಲ್ಲಿ ಮೈಸೂರು ಪೇಪರ್ ಮಿಲ್ಲಿಗೆ ಒಳಪಟ್ಟ ಎಂ.ಪಿ.ಎಂ ಸಕ್ಕರೆ ಕಾರ್ಖಾನೆ ಸರಕಾರಿ ಸ್ವಾಮ್ಯದ ಎರಡನೆಯ ಸಕ್ಕರೆ ಕಾರ್ಖಾನೆಯಾಗಿದೆ. ಇಲ್ಲಿಯ ಪೇಪರ್ ಮಿಲ್‌ಗೆ ಕಬ್ಬಿನ ಸಿಪ್ಪೆಯನ್ನು ಕಚ್ಚಾ ವಸ್ತು ಎಂದು ಒದಗಿಸಲು ಸರಕಾರ ಸಕ್ಕರೆ ಕಾರ್ಖಾನೆಯನ್ನು ಕಟ್ಟಲಾಗಿದೆ. 1983-84ರಲ್ಲಿ ಆರಂಭವಾದ ಈ ಕಾರ್ಖಾನೆ ಸರಕಾರದ ಅನುದಾನ ತಿಂದು ಉಸಿರಾಡುತ್ತ 2014ರವರೆಗೆ ಕಾರ್ಯನಿರ್ವಹಿಸಿತು. ಕಳೆದ 5 ವರ್ಷಗಳಿಂದ ಕಾರ್ಖಾನೆ ಪೂರ್ಣ ಸ್ಥಗಿತಗೊಂಡಿದೆ. ಇಲ್ಲಿಯ ಅರ್ಧಕ್ಕೂ ಹೆಚ್ಚು ಸಿಬ್ಬಂದಿಯನ್ನು ವ್ಹಿ.ಆರ್.ಎಸ್ ನೀಡಿ ಮನೆಗೆ ಕಳುಹಿಸಲಾಗಿದೆ. ರೈತರ ಬಾಕಿ ಹಣ ಹಾಗೆಯೇ ಉಳಿದಿದೆ. ಸರಕಾರಿ ಸ್ವಾಮ್ಯದ ಈ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ರೈತರು ಚೆನ್ನಾಗಿ ಕಬ್ಬು ಬೆಳೆಯುತ್ತಿದ್ದಾರೆ. ಈ ಕಬ್ಬು ದೂರದ ಸಕ್ಕರೆಯ ಕಾರ್ಖಾನೆಗಳಿಗೆ ಸಾಗಿಸುವುದು ರೈತರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ದೂರದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಸರಕಾರ ರೈತರಿಗೆ ಅನುದಾನ ಕೊಡಬೇಕು ಎಂಬ ಚಿಂತನೆ ನಡೆಸಿದೆ. ಇದು ಸರಿಯಾದ ಪರಿಹಾರವಾಗಲಾರದು. ಹೀಗೆ ಎಷ್ಟು ವರ್ಷ ಸಾರಿಗೆ ವೆಚ್ಚ ರೈತರಿಗೆ ನೀಡುತ್ತೀರಿ? ಹೊಸ ತಂತ್ರಜ್ಞಾನ ಬೇಕು
ಸಕ್ಕರೆ ಉದ್ದಿಮೆಯಲ್ಲಿ ಹೊಸ ತಂತ್ರಜ್ಞಾನ ಬಹಳ ಬೆಳೆದಿದೆ. ಸಲ್ಪರ್ ಬಳಸದೇ ಉತ್ತಮ ಗುಣಮಟ್ಟದ ಸಕ್ಕರೆ ಉತ್ಪಾದಿಸುವ ಸರಳ ತಂತ್ರಜ್ಞಾನ ಈಗ ಬಹಳ ಜನಪ್ರಿಯವಾಗತೊಡಗಿದೆ. ಕಾರ್ಖಾನೆಗಳನ್ನು ನಡೆಸಲು ಸರಕಾರ ಅನನುಭವಿ ಅಧಿಕಾರಿಗಳನ್ನು ನೇಮಿಸುವುದು ಸರಿ ಅಲ್ಲ. ಸಕ್ಕರೆ ತಂತ್ರಜ್ಞಾನದ ಪರಿಣತ ವ್ಯಕ್ತಿಗಳನ್ನು ಜವಾಬ್ದಾರಿಯುತ ಸ್ಥಾನಕ್ಕೆ ನೇಮಕ ಮಾಡಬೇಕು. ಈ ಉತ್ತಮ ವಿಧಾನವನ್ನು ಮಹಾರಾಷ್ಟ್ರ, ಆಂಧ್ರ, ಗುಜರಾತ್ ರಾಜ್ಯಗಳು ಅನುಸರಿಸುತ್ತಿವೆ. ಸಕ್ಕರೆಯೊಂದಿಗೆ ಉಪ ಉತ್ಪನ್ನಗಳನ್ನು ಮೌಲ್ಯಾಧಾರಿತ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಲಾಭ ಮಾಡಿಕೊಳ್ಳಬೇಕು. ಕಬ್ಬಿನಲ್ಲಿಯ ಪೂರ್ಣ ರಸ ಹೀರಿಕೊಳ್ಳುವ ಹೊಸ ಯಂತ್ರಗಳು ಬಂದಿವೆ. ಇವುಗಳನ್ನು ಕಡ್ಡಾಯವಾಗಿ ಬಳಸಿಕೊಳ್ಳಬೇಕು. ಸಕ್ಕರೆ ಉತ್ಪಾದನೆಗೆ ಮಾಡುವ ಖರ್ಚನ್ನು ಕಡಿಮೆ ಮಾಡುವ ಹೊಸ ಯಂತ್ರೋಪಕರಣಗಳು ಬಂದಿವೆ. ಅವುಗಳನ್ನು ಅಳವಡಿಸಿಕೊಳ್ಳಬೇಕು. ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮನಸ್ಥಿತಿ ಕೂಡ ಬದಲಾಗಬೇಕು. ಕೆಲಸ ಮಾಡುವ ಸಂಸ್ಕೃತಿ ಬೆಳೆಯಬೇಕು. ಕೆಲಸದ ಕುಶಲತೆ ಹೆಚ್ಚಿಸಿಕೊಳ್ಳಬೇಕು. ಕೈಗಾರಿಕೆ ಗಳ ಮುಖ್ಯ ಉದ್ದೇಶ ಉತ್ಪಾದನೆ, ಉದ್ಯೋಗ ನೀಡಿಕೆ ಮತ್ತು ಲಾಭ. ಈ ತತ್ವಕ್ಕೆ ಅಂಟಿಕೊಂಡು ಈ ಎರಡೂ ಕಾರ್ಖಾನೆಗಳು ಕಾರ್ಯ ನಿರ್ವಹಿಸಬೇಕು. ಎಲ್ಲ ವ್ಯವಹಾರಗಳನ್ನು ಪಾರದರ್ಶಕತೆಗೆ ಹಾಗೂ ಶಿಸ್ತಿಗೆ ಒಳಪಡಿಸಬೇಕು. ಈ ಬದಲಾವಣೆ ತರುವುದು ಕಷ್ಟದ ಕೆಲಸವೇ ನಲ್ಲ. ಗಟ್ಟಿ ಮನಸ್ಸು ಮಾಡಿ ಮುನ್ನಡೆಸುವವರು ಬೇಕಾಗಿದ್ದಾರೆ. ಈ ಎರಡೂ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸಿಕೊಟ್ಟು ಕೈ ತೊಳೆದುಕೊಳ್ಳುವ ಸುಲಭದ ಕೆಲಸವನ್ನು ಸರಕಾರ ಮಾಡಬಾರದು. ಎರಡೂ ಸರಕಾರಿ ಸ್ವಾಮ್ಯದ ಕಾರ್ಖಾನೆಗಳು ಉತ್ತಮ ರೀತಿಯ ಕಾರ್ಯನಿರ್ವಹಿಸಿ ಮಾದರಿಯಾಗಿ ನಿಲ್ಲಬೇಕು. ಈಗಾಗಲೇ ರಾಜ್ಯದ 10 ಸಕ್ಕರೆ ಕಾರ್ಖಾನೆಗಳು ಖಾಸಗಿ ಉದ್ದಿಮೆಗಳ ಪಾಲಾಗಿವೆ. ಇನ್ನೂ 5-6 ಸಹಕಾರಿ ಕಾರ್ಖಾನೆಗಳ ಆಡಳಿತ ಮಂಡಳಿಯವರು ತಮ್ಮ ಕಾರ್ಖಾನೆಗಳನ್ನೂ ನಡೆಸುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸುವ ಅಪಾಯ ಕಾಣುತ್ತಿದೆ. ಈಗ ಸರಕಾರ ತನ್ನ ಕಾರ್ಖಾನೆಗಳನ್ನು ಖಾಸಗಿಯವರಿಗೆ ಕೊಡಲು ಚಿಂತನೆ ನಡೆಸಿರುವುದು ನಿಜಕ್ಕೂ ಕಳವಳದ ಸಂಗತಿಯಾಗಿದೆ. ಗುಜರಾತ್ ರಾಜ್ಯದಲ್ಲಿ ಒಟ್ಟು 18 ಸಕ್ಕರೆ ಕಾರ್ಖಾನೆಗಳಿವೆ. ಈ ಎಲ್ಲ ಕಾರ್ಖಾನೆಗಳು ಸಹಕಾರಿ ರಂಗಕ್ಕೆ ಒಳಪಟ್ಟಿವೆ ಎಂಬುದು ಮಹತ್ವದ ಸಂಗತಿ. ಗುಜರಾತ್‌ನಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆ ಕಟ್ಟುವುದಕ್ಕೆ ಅವಕಾಶವೇ ಇಲ್ಲ. ಇಲ್ಲಿಯ ಎಲ್ಲ ಸಹಕಾರಿ ಸಕ್ಕರೆ ಕಾರ್ಖಾನೆಗಳೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ರೈತರ ಕಬ್ಬಿಗೆ ಲಾಭದಾಯಕ ಬೆಲೆ ನೀಡುತ್ತಿವೆ. ಕರ್ನಾಟಕ ಸರಕಾರ ಗುಜರಾತ್ ಮಾದರಿಯ ಅಧ್ಯಯನ ಮಾಡಿ ಕಾರ್ಯರೂಪಕ್ಕೆ ತರಬೇಕು. ಸಕ್ಕರೆ ಉದ್ದಿಮೆ ಕೃಷಿ ಆಧರಿತ ಗ್ರಾಮೀಣ ಭಾಗದ ಪ್ರಮುಖ ಕೈಗಾರಿಕೆಯಾಗಿದೆ. ಪ್ರತಿ ಕಾರ್ಖಾನೆಯ ವ್ಯಾಪ್ತಿಯಲ್ಲಿ 35-40 ಸಾವಿರ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಅವರ ಹಿತ ಕಾಪಾಡುವ ದೃಷ್ಟಿಯಿಂದ ಸಹಕಾರಿ ಮತ್ತು ಸರಕಾರಿ ರಂಗದ ಕಾರ್ಖಾನೆಗಳು ಸಶಕ್ತವಾಗಿ ಕೆಲಸಮಾಡಬೇಕು. ಖಾಸಗಿ ಕಾರ್ಖಾನೆಗಳಿಗೆ ಪ್ರತಿ ಸ್ಪರ್ಧಿಯಾಗಿ ತಲೆಎತ್ತಿ ನಿಲ್ಲಬೇಕು. ಮಾನ್ಯ ಸಕ್ಕರೆ ಸಚಿವ ಸಿ.ಟಿ. ರವಿಯವರೇ, ನೀವು ಮನಸ್ಸು ಮಾಡಿದರೆ ಈ ಎರಡು ಕಾರ್ಖಾನೆಗಳು ಖಂಡಿತವಾಗಿಯೂ ಎದ್ದು ನಿಲ್ಲುತ್ತವೆ ಎಂಬ ಆಶಾಭಾವ ನಮಗಿದೆ. (ಲೇಖಕರು, ರಾಜ್ಯ ಸಕ್ಕರೆ ಕಾರ್ಖಾನೆಗಳ ಕಾರ್ಮಿಕರ ಮಹಾಮಂಡಳದ ಮಾಜಿ ಕಾರ್ಯದರ್ಶಿ) ಮಂಡ್ಯದ ಕಾರ್ಖಾನೆ ಕರ್ನಾಟಕದ ಸಕ್ಕರೆ ಉದ್ದಿಮೆಯ ಹೆಬ್ಟಾಗಿಲನ್ನೇ ತೆರೆಯಿತು. ಕರ್ನಾಟಕವು ಸಕ್ಕರೆ ಉದ್ದಿಮೆಯ ಹಬ್ ಆಗಿ ಬೆಳೆಯಲು ನಾಂದಿ ಹಾಡಿತು. ಸಕ್ಕರೆ ಉದ್ದಿಮೆಯಲ್ಲಿ ಹೊಸ ತಂತ್ರಜ್ಞಾನ ಬೆಳೆದಿದೆ. ಸಲ್ಪರ್ ಬಳಸದೇ ಗುಣಮಟ್ಟದ ಸಕ್ಕರೆ ಉತ್ಪಾದಿಸುವ ಸರಳ ತಂತ್ರಜ್ಞಾನ ಈಗ ಜನಪ್ರಿಯವಾಗತೊಡಗಿದೆ. ಮೈಶುಗರ್ ಮತ್ತು ಎಂಪಿಎಂಗಳನ್ನು ಖಾಸಗಿಯವರಿಗೆ ಕೊಟ್ಟು ಕೈ ತೊಳೆದುಕೊಳ್ಳುವ ಸುಲಭದ ಕೆಲಸವನ್ನು ಸರಕಾರ ಮಾಡಬಾರದು. – ಮಲ್ಲಿಕಾರ್ಜುನ ಹೆಗ್ಗಳಗಿ