Advertisement

ಮಿಶ್ರ ಕೃಷಿಯಲ್ಲಿ ಖುಷಿ ಕಂಡ ಹಳಗೇರಿಯ ರೈತ ಮಹಿಳೆ

11:05 AM Jan 05, 2020 | mahesh |

ಹೆಸರು: ರಶ್ಮಿ ವಿಶ್ವನಾಥ ಶೆಟ್ಟಿ
ಏನೇನು ಕೃಷಿ: ಅಡಿಕೆ, ತೆಂಗು, ಕಾಳು ಮೆಣಸು, ಎಲೆಬಾಳೆ, ಅರಣ್ಯ ಕೃಷಿ,
ಎಷ್ಟು ವರ್ಷ ಕೃಷಿ: 20
ಪ್ರದೇಶ :6 ಎಕರೆ
ಸಂಪರ್ಕ: 9980307375

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಉಪ್ಪುಂದ: ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಹಳಗೇರಿ ದೊಡ್ಮನೆ ರಶ್ಮಿ ವಿಶ್ವನಾಥ ಶೆಟ್ಟಿ ಅವರು ಕೃಷಿಯಲ್ಲಿ ಮಿಶ್ರ ಬೆಳೆಯ ಚಿಂತನೆಯೊಂದಿಗೆ ಯಶಸ್ಸು ಕಂಡ ರೈತ ಮಹಿಳೆ. ಅಡಿಕೆ, ಕರಿಮೆಣಸು, ತೆಂಗು, ಅರಣ್ಯ ಕೃಷಿ, ಎಲೆಬಾಳೆ, ಹಣ್ಣಿನ ಗಿಡ ಹತ್ತು ಹಲವಾರು ಮಿಶ್ರ ಬೆಳೆಯನ್ನು ಅನುಸರಿಸುವ ಮೂಲಕ ಈ ಭಾಗದಲ್ಲಿ ಕೃಷಿಯಲ್ಲಿ ಪ್ರಯೋಗಾತ್ಮಕವಾಗಿ ಸಾಗುತ್ತಿರುವ ಕೃಷಿ ಮಹಿಳೆ ಎನಿಸಿಕೊಂಡಿದ್ದಾರೆ. ಪಿಯುಸಿ ಶಿಕ್ಷಣ ಪಡೆದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ 2011-12ರಲ್ಲಿ ರೈತರಿಗಾಗಿ ಏರ್ಪಡಿಸಿದ ಸಾವಯವ ಕೃಷಿ ಕುರಿತು ಅಂಚೆ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. 20ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಇವರಿಗೆ ಪತಿ ಶಿಕ್ಷಕ ವಿಶ್ವನಾಥ ಶೆಟ್ಟಿ ಸಾಥ್‌ ನೀಡುತ್ತಾರೆ. ಸುಮಾರು 6ಎಕ್ರೆ ತೋಟದಲ್ಲಿ ವಿವಿಧ ತಳಿಯ ಒಂದು ಸಾವಿರ ಅಡಿಕೆ ಮರಗಳಿವೆ. ಸುಮಾರು ಒಂದುವರೆ ಸಾವಿರ ಕಾಳುಮೆಣಸು ಬಳ್ಳಿಯಿದ್ದು, ಇದರಲ್ಲಿ ಪಣಿಯೂರು-1ರ ತಳಿಯಿಂದ ಹಿಡಿದು 8ರ ವರೆಗಿನ ಎಲ್ಲ ರೀತಿಯ ವಿಧಗಳನ್ನು ಇವರ ತೋಟದಲ್ಲಿ ಕಾಣಬಹುದು. ಅಲ್ಲದೆ ಇವನ್ನು ಸಿಮೆಂಟ್‌ ಪೈಪ್‌ಗ್ಳಿಗೆ ಹಬ್ಬಿಸಿ ಬೆಳೆಯಲಾಗುತ್ತಿರುವುದು ಪ್ರಯೋಗಾತ್ಮಕ ಚಿಂತನೆಗೆ ಸಾಕ್ಷಿಯಾಗಿದೆ. 200ಕ್ಕೂ ಹೆಚ್ಚು ತೆಂಗಿನ ಮರಗಳಿದ್ದು ವಾರ್ಷಿಕ 10ಸಾವಿರ ತೆಂಗಿನಕಾಯಿ ಇಳುವರಿ ಪಡೆಯುತ್ತಾರೆ.

ಅರಣ್ಯ ಕೃಷಿ
ಇವರ ತೋಟದಲ್ಲಿ ಅರ್ಧ ಎಕ್ರೆ ಜಾಗವನ್ನು ಅರಣ್ಯ ಕೃಷಿಗಾಗಿ ಮೀಸಲಿಡಲಾಗಿದೆ. ಇಲ್ಲಿ 200ಕ್ಕೂ ಹೆಚ್ಚು ವಿವಿಧ ಜಾತಿಯ ಮರ, 3 ಬೇರೆ ಬೇರೆ ರೀತಿಯಾದ ಬಿದಿರು, ಜಾಯಿಕಾಯಿ, ಗಜಲಿಂಬೆ, ವಿವಿಧ ಜಾತಿಯ ಹಣ್ಣಿನ ಮರ ಗಳನ್ನು ಬೆಳೆಸಿದ್ದಾರೆ. ಅಷ್ಟೂ ಕೃಷಿಗೆ ಇದೇ ಅರಣ್ಯ ಕೃಷಿಯಿಂದ ದೊರೆಯುವ ಸೊಪ್ಪನ್ನು ಉಪಯೋಗಿಸುತ್ತಾರೆ.

ಇಡೀ ತೋಟಕ್ಕೆ ಹನಿ ನೀರಾವರಿ ಮತ್ತು ತುಂತುರು ನೀರಿನಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ನೀರಿಗಾಗಿ ಬಾವಿ ನಿರ್ಮಿಸುವಾಗ ಅಡಿಯಲ್ಲಿ ಶಿಲೆ ಬಂದು ಅದರಲ್ಲಿ ಕೈಸುಟ್ಟುಕೊಂಡರೂ ಸಹ ಛಲಬಿಡದ ಇವರು ಮತ್ತೆ ಸುಮಾರು 6ಲಕ್ಷ ರೂ. ಖರ್ಚು ಮಾಡಿ ತೋಟದ ಮತ್ತೂಂದು ಬದಿಯಲ್ಲಿ 40 ಫೀಟ್‌ ಆಳ ಹಾಗೂ 25 ಫೀಟ್‌ ಅಗಲದ ಬಾವಿ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಯಥೇಚ್ಚ ನೀರು ಇದ್ದರೂ ಸಹ ಮಿತ್ಯ ವ್ಯಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.

Advertisement

ಎಲೆ ಬಾಳೆ
ಬೈಂದೂರು ಭಾಗದಲ್ಲಿ ಪ್ರಥಮ ಬಾರಿಗೆ ಎಲೆ ಬಾಳೆ ಗಿಡಗಳ ಬೆಳೆಸಿ ಯಶಸ್ಸು ಕಂಡ ವರು. 1,500 ಬಾಳೆ ಬುಡಗಳನ್ನು ನೆಟ್ಟು ತಿಂಗಳಿಗೆ
ಸುಮಾರು 20 ಸಾವಿರಕ್ಕೂ ಹೆಚ್ಚು ಬಾಳೆ ಎಲೆಗಳನ್ನು ಸ್ಥಳೀಯ ಎಲ್ಲ ಮದುವೆ ಮಂಟಪ ಗಳಿಗೆ ನೀಡುವ ಮೂಲಕ ಇದರಲ್ಲಿಯೇ ವಾರ್ಷಿಕ ಸುಮಾರು 5ಲಕ್ಷ ರೂ.ಗೂ ಹೆಚ್ಚು ವ್ಯವಹಾರ ನಡೆಸುತ್ತಾರೆ.

ಸಾವಯವ ಕೃಷಿ
ತೋಟದ ಅಲ್ಲಲ್ಲಿ ಗ್ಲಿಷಡೆರಿಯನ್‌ (ಗೊಬ್ಬರ ಗಿಡ) ಬೆಳೆಯುವ ಇವರು ಇದರ ಸೊಪ್ಪನ್ನು ಬಳಕೆ ಮಾಡುತ್ತಾರೆ. ಇದರ ಸೊಪ್ಪು ಉತ್ತಮ ಗೊಬ್ಬರವಾಗಿರುವುದರಿಂದ ಮರಗಳಿಗೆ ಗೊಬ್ಬರವಾಗಿ ಪರಿಗಣಿಸುತ್ತಾರೆ. ಜಾನುವಾರುಗಳ ಗಂಜಲ, ಹಟ್ಟಿಗೊಬ್ಬರ, ಬಯಾಡೈಜಿಸ್ಟ್‌, ಕೃಷಿ ಇಲಾಖೆಯಲ್ಲಿ ಸಿಗುವ ಗೊಬ್ಬರದ ಬಳಕೆ ಹಾಗೂ ಪ್ರಸ್ತುತ ಪಾಳೇಕರ ಜೀವಾಮೃತ ಪದ್ಧತಿ ಅನುಸರಣೆ ಮಾಡುತ್ತಿದ್ದಾರೆ.

ಕೃಷಿ ಪ್ರಶಸ್ತಿ
2018-19ನೇ ಸಾಲಿನಲ್ಲಿ ಇವರ ಕೃಷಿ ಕಾಯಕವನ್ನು ಗುರುತಿಸಿ ಆತ್ಮ ಯೋಜನೆಯಡಿ ತಾಲೂಕು ಮಟ್ಟದ ಕೃಷಿ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪತಿಯ ಸಹಕಾರ
ಅರಣ್ಯ ಕೃಷಿ, ಸಾವಯವ ಗೊಬ್ಬರ, ಬಯೋಡೈಜೆಸ್ಟರ್‌, ಜೀವಾಮೃತ ಬಳಸಿ ಭೂಮಿಯ ಫಲವತ್ತತೆ ಮತ್ತು ರಸಸಾರ ಕಾಯ್ದುಕೊಂಡು ಮಿಶ್ರ ಬೇಸಾಯ ಪದ್ಧತಿ ಅನುಸರಿಸಿದ್ದರಿಂದ ಯಶಸ್ಸು ಸಾಧ್ಯವಾಗಿದೆ. ಈ ಯಶಸ್ಸಿನ ಹಿಂದೆ ಪತಿ ವಿಶ್ವನಾಥ ಶೆಟ್ಟಿ ಇವರ ಕೃಷಿಪ್ರೇಮ, ಬದ್ಧತೆ ಹಾಗೂ ನಿರಂತರ ಮಾರ್ಗದರ್ಶನ ಇದೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಕೃಷಿ ವೆಚ್ಚದ ಮಿತವ್ಯಯ, ಮಣ್ಣಿನ ಸಂರಕ್ಷಣೆ, ಹಾಗೂ ಮಿಶ್ರ ಬೇಸಾಯಕ್ಕೆ ಪಾಳೇಕರ ನೈಸರ್ಗಿಕ ಕೃಷಿ ಹಾಗೂ ಸಾವಯವ ಪದ್ಧತಿ ಅಳವಡಿಕೊಳ್ಳಲು ಇವರ ಚಿಂತನೆಯೇ ಕಾರಣವಾಗಿದೆ.
-ರಶ್ಮಿ ವಿಶ್ವನಾಥ ಶೆಟ್ಟಿ

ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next