12ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ತೆರೆಮರೆಯ ಕೆಲಸಗಳು ಆರಂಭವಾಗಿದೆ. ಇದೇ ಫೆಬ್ರವರಿ ಯಲ್ಲಿ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದ್ದು, ಸಿನಿಮೋತ್ಸವದಲ್ಲಿ ಸ್ಪರ್ಧಿಸಲಿರುವ ಅರ್ಹ ಚಲನಚಿತ್ರಗಳನ್ನು ಆಹ್ವಾನಿಸಲಾಗಿದೆ.
ಎಂದಿನಂತೆ ಈ ಬಾರಿಯೂ ಬೆಂಗಳೂರು ಅಂತರ ರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡ ಸಿನಿಮಾ ಸ್ಪರ್ಧೆ ಮತ್ತು ಭಾರತೀಯ ಸಿನಿಮಾಗಳನ್ನು ಪ್ರತಿನಿಧಿಸುವ “ಚಿತ್ರ ಭಾರತಿ’ ಎಂಬ ಎರಡು ವಿಭಾಗಗಳಲ್ಲಿ ಅರ್ಹ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಕನ್ನಡ ಸಿನಿಮಾ ವಿಭಾಗಕ್ಕೆ ಸ್ಪರ್ಧಿಸಬೇಕಾದ ಚಿತ್ರಗಳು ಕನಿಷ್ಟ 70 ನಿಮಿಷದ ಅವಧಿಯಾಗಿದ್ದು, ಜನವರಿ 1, 2019ರಿಂದ ಡಿಸೆಂಬರ್ 31, 2019ರ ಅವಧಿಯಲ್ಲಿ ನಿರ್ಮಾಣ ವಾಗಿರಬೇಕು. ಕನ್ನಡದ ಜೊತೆಗೆ ತುಳು, ಕೊಂಕಣಿ, ಕೊಡವ, ಲಂಬಾಣಿ ಸೇರಿದಂತೆ ಕರ್ನಾಟಕದ ಯಾವುದೇ ಉಪ ಭಾಷೆಯಲ್ಲಿ ನಿರ್ಮಾಣವಾಗಿರುವ ಚಿತ್ರಗಳು ಕೂಡ ಸ್ಪರ್ಧಾ ವಿಭಾಗಕ್ಕೆ ಪ್ರವೇಶಿಸಲು ಅರ್ಹವಾಗಿರುತ್ತವೆ.
ಇನ್ನು “ಚಿತ್ರ ಭಾರತಿ’ ವಿಭಾಗದಲ್ಲಿ ಭಾರತೀಯ ಚಿತ್ರಗಳು ಸ್ಪರ್ಧಿಸಲಿದ್ದು, ಈ ಚಿತ್ರಗಳು ಜನವರಿ 1, 2019ರಿಂದ ಡಿಸೆಂಬರ್ 31, 2019ರ ಅವಧಿಯಲ್ಲಿ ನಿರ್ಮಾಣ ವಾಗಿ ರಬೇಕು. ಭಾರತದ ಯಾವುದೇ ಭಾಷೆಯ ಕಥಾ ಚಿತ್ರವಾಗಿದ್ದು, ಕನಿಷ್ಠ 70 ನಿಮಿಷಗಳ ಅವಧಿಯ ಚಿತ್ರಗಳು ಈ ವಿಭಾಗದಲ್ಲಿ ಪ್ರವೇಶ ಪಡೆಯಲು ಅರ್ಹವಾಗಿರುತ್ತವೆ. ಸೆನ್ಸಾರ್ ಪ್ರಮಾಣ ಪತ್ರದಲ್ಲಿ ನಮೂದಿಯಾಗಿರುವ ದಿನಾಂಕವೇ ನಿರ್ಮಾಣದ ಅವಧಿಯ ಮಾನದಂಡವಾಗಿರುತ್ತದೆ.
ಇದೇ ಜನವರಿ 10 ಸಿನಿಮೋತ್ಸವದಲ್ಲಿ ಸ್ಪರ್ಧಿಸಲಿರುವ ಅರ್ಹ ಚಲನಚಿತ್ರಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಸಿನಿಮೋತ್ಸವದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ವೆಬ್‌ಸೈಟ್ www.biffes.in ಗೆ ಭೇಟಿ ನೀಡಬಹುದು.