ನರಗುಂದ: ನರಗುಂದ ಮತಕ್ಷೇತ್ರದ ಸಾಕಷ್ಟು ಪ್ರಮುಖ ಅಭಿವೃದ್ಧಿ ಕಾರ್ಯಗಳು ತನ್ನ ಅವಧಿಯಲ್ಲಿ ಮಂಜೂರಾತಿ ನೀಡಲಾಗಿದೆ. ಇವರ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದರ ಬಗ್ಗೆ ಪಟ್ಟಿ ಕೊಡಲಿ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಅವರು ಸಚಿವ ಸಿ.ಸಿ. ಪಾಟೀಲಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಅವಧಿಯಲ್ಲಿ ಆಗಿರುವ ಮತ್ತು ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಬಹಿರಂಗ ಚರ್ಚೆಗೆ ತಾನು ಸಿದ್ಧನಿದ್ದೇನೆ ಎಂದು ಬಿ.ಆರ್. ಯಾವಗಲ್ಲ ಸವಾಲು ಹಾಕಿದರು.
2003ರಲ್ಲಿ 35 ಕೋಟಿ ವೆಚ್ಚದಲ್ಲಿ ಏಳು ಮತ್ತು 2017ರಲ್ಲಿ 27 ಕೋಟಿ ವೆಚ್ಚದ ಮೂರು ಏತ ನೀರಾವರಿ ಯೋಜನೆಗಳು, ತಾಲೂಕಿನ ವಿವಿಧ ದೇವಸ್ಥಾನಗಳ ಯಾತ್ರಿ ನಿವಾಸಗಳು ಮಂಜೂರಾಗಿದ್ದು ನನ್ನ ಅವಧಿಯಲ್ಲಿ. ಬಹುದೊಡ್ಡ ಮೊತ್ತದ ಇಂಜಿನಿಯರಿಂಗ್ ಕಾಲೇಜು ಎರಡು ವರ್ಷಗಳಿಂದ ಪ್ರಾರಂಭವಾಗುತ್ತಿಲ್ಲ. ಜಿಟಿಟಿಸಿ ಕಾಲೇಜು ಇನ್ನೂ ಪೂರ್ಣಗೊಳ್ಳುತ್ತಿಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮಗಳು ಸಾಧನೆಗಳೇ?, ಇವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ
ಲಿಸ್ಟ್ ಕೊಡಲಿ ಎಂದು ಯಾವಗಲ್ಲ ಸಚಿವರಿಗೆ ಪ್ರಶ್ನೆ ಮಾಡಿದರು.
110 ಕೋಟಿ ವೆಚ್ಚದಲ್ಲಿ 2000 ಮನೆಗಳಿಗೆ ಮಂಜೂರಾತಿ ಪಡೆದು ಟೆಂಡರ್ ಅನುಮೋದನೆ ಆಗಿತ್ತು. ಅದಕ್ಕೆ ಅಡ್ಡಗಾಲು ಹಾಕಿದವರು ಯಾರು. ಇತ್ತೀಚೆಗೆ ಕೆಲವು ರಸ್ತೆಗಳ ಅಭಿವೃದ್ಧಿ ಬಿಟ್ಟರೆ ನರಗುಂದ ಮತಕ್ಷೇತ್ರಕ್ಕೆ ಇವರ ಕೊಡುಗೆ ಏನು ತಿಳಿಸಲಿ ಎಂದರು.
2013ರ ಐದು ವರ್ಷಗಳ ಅವಧಿಯಲ್ಲಿ 2,300 ಕೋಟಿಗೂ ಹೆಚ್ಚು ಅನುದಾನ ತಂದು ನರಗುಂದ ಮತಕ್ಷೇತ್ರವನ್ನು ಜಿಲ್ಲೆಯಲ್ಲಿ ಮಾದರಿ ಕ್ಷೇತ್ರವಾಗಿ ಪರಿವರ್ತಿಸಿದ್ದೇನೆ. ಪುರಸಭೆ ನೂತನ ಕಟ್ಟಡ, ಪಟ್ಟಣಕ್ಕೆ 24×7 ಕುಡಿಯುವ ನೀರು, ಕೊಳಚೆ ಕಾಲುವೆ ಹಾಗೂ 1120 ಕೋಟಿ ವೆಚ್ಚದಲ್ಲಿ ಮಲಪ್ರಭಾ ಯೋಜನೆ ನವೀಕರಣ, ದೇವರಾಜ ಅರಸು ಭವನ, ಪಪೂ ಕಾಲೇಜು ಅಭಿವೃದ್ಧಿ ಯೋಜನೆ, ಕೆರೆಗಳ ಪುನಶ್ಚೇತನ, ಪಶು ಆಸ್ಪತ್ರೆ ನಿರ್ಮಾಣ, ಲಕ್ಕುಂಡಿ ಪ್ರಾಧಿಕಾರ ರಚನೆ, ಗ್ರಾಮ ವಿಕಾಸ ಯೋಜನೆ, ಐಟಿಐ ಕಾಲೇಜು, ಸರಕಾರಿ ಪಾಲಿಟೆಕ್ನಿಕ್, ತೋಟಗಾರಿಕೆ ಕಾಲೇಜು, ಕೊಳಚೆ ಕಾಲುವೆ ನವೀಕರಣ ಬ್ಯಾರೇಜ್ ಬ್ರಿಡ್ಜ್, ಜೆಟಿಟಿಸಿ ಕಾಲೇಜು ಮುಂತಾದ ಯೋಜನೆಗಳಿಗೆ ತನ್ನ ಅವಧಿಯಲ್ಲಿ ಮಂಜೂರಾತಿ ದೊರಕಿಸಲಾಗಿದೆ ಎಂದು ಬಿ.ಆರ್. ಯಾವಗಲ್ಲ ಹೇಳಿದರು.
ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ, ಭಾರತೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿವೇಕ ಯಾವಗಲ್ಲ, ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ರಾಜು ಕಲಾಲ, ಗುರುಪಾದಪ್ಪ ಕುರಹಟ್ಟಿ, ಪುರಸಭೆ ವಿಪಕ್ಷ ನಾಯಕ ಅಪ್ಪನಗೌಡ ನಾಯ್ಕರ, ಪ್ರಕಾಶ ಹಡಗಲಿ, ಮೌಲಾಸಾಬ ಅರಬಜಮಾದಾರ, ಮಹೀಮ ಚಂದೂನವರ, ಕೆ.ಬಿ. ಖಲೀಫ ಸುದ್ದಿಗೋಷ್ಠಿಯಲ್ಲಿದ್ದರು.