ಬೀದರ: ನವೀಕರಿಸಬಹುದಾದ ಇಂಧನ ಬಳಕೆ, ಉತ್ಪಾದನೆಗೆ ಭಾರತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹೂಡಿಕೆಗೂ ಉತ್ತಮ ಅವಕಾಶ ಕಲ್ಪಿಸಿದೆ. ಜಗತ್ತಿಗೆ ನೀಡುತ್ತಿರುವ ಅವಕಾಶ ಬಳಸಿಕೊಳ್ಳಲು ಅಭಿವೃದ್ಧಿಶೀಲ ರಾಷ್ಟ್ರಗಳ ನವೀಕರಿಸಬಹುದಾದ ಇಂಧನ ಕಂಪನಿಗಳು ಹೂಡಿಕೆಗಾಗಿ ಭಾರತಕ್ಕೆ ಬರುವಂತೆ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಆಹ್ವಾನಿಸಿದ್ದಾರೆ.
ಜರ್ಮನಿ ಪ್ರವಾಸದಲ್ಲಿರುವ ಖೂಬಾ ಶುಕ್ರವಾರ ಮ್ಯೂನಿಕ್‌ನಲ್ಲಿ ಇಂಟರ್ ಸೋಲಾರ್ ಯುರೋಪ್- 2022 ಕಾರ್ಯಕ್ರಮದಲ್ಲಿ “ಭಾರತದ ಸೌರಶಕ್ತಿ ಮಾರುಕಟ್ಟೆ’ ಕುರಿತು ಪ್ರಮುಖ ಭಾಷಣ ಮಾಡಿರುವ ಅವರು, ಭಾರತದಲ್ಲಿ ಸದ್ಯ 196.98 ಬಿಲಿಯನ್ ಡಾಲರ್ ಮೌಲ್ಯದ ಯೋಜನೆಗಳು ನಡೆಯುತ್ತಿವೆ. ಹೆಚ್ಚಿನ ದಕ್ಷತೆಯ ಸೋಲಾರ್ ಪಿವಿ ಮಾಡ್ನೂಲ್ಗಳ ದೇಶಿಯ ಉತ್ಪಾದನೆ ಹೆಚ್ಚಿಸಲು ಭಾರತ ಬದ್ಧವಿದೆ. ಇದಕ್ಕೆ ಬಜೆಟ್‌ನಲ್ಲಿ 24 ಸಾವಿರ ಕೋಟಿ ರೂ. ವೆಚ್ಚ ಇಡಲಾಗಿದೆ. ಹಸಿರು ಹೈಡ್ರೋಜನ್ ಆರ್ಥಿಕತೆ ಉತ್ತೇಜಿಸಲು 25,425 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಹತÒಕಾಂಕ್ಷಿಯ ಸಿಒಪಿ-26ರ ಪಂಚಾಮೃತ ಗುರಿಗಳ ಪ್ರಕಾರ ಭಾರತ 2070ರ ವೇಳೆಗೆ ನಿವ್ವಳ ಶೂನ್ಯ ಸಾ ಧಿಸಲು ಮತ್ತು 2030ರ ವೇಳೆ 500 ಗಿಗಾವ್ಯಾಟ್ ಪಳೆಯುಳಿಕೆ ರಹಿತ ಸ್ಥಾಪಿಸಲು ಸಿದ್ಧವಾಗಿದೆ. ಕಳೆದ 7 ವರ್ಷಗಳಲ್ಲಿ ಭಾರತದ ನವೀಕರಿಸಬಹುದಾದ ಇಂಧನ ವಲಯ ಗಮನಾರ್ಹ ಬೆಳವಣಿಗೆ ಕಂಡಿದೆ ಎಂದು ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಗಮನ ಸೆಳೆದರು.
ಗ್ಲೋಬಲ್ ಸೋಲಾರ್ ಕೌನ್ಸಿಲ್, ಯುರೋಪಿಯನ್ ಸೋಲಾರ್ ಅಸೋಸಿಯೇಶನ್, ಜರ್ಮನ್ ಸೋಲಾರ್ ಅಸೋಸಿಯೇಶನ್ ಮತ್ತು ಯುರೋಪಿಯನ್ ಸೋಲಾರ್ ಮ್ಯಾನುಫ್ಯಾಕ್ಚರರ್ ಅಸೋಸಿಯೇಷನ್ ಜತೆ ಸಚಿವ ಖೂಬಾ ಅವರು ಸಭೆ ನಡೆಸಿ ತಂತ್ರಜ್ಞಾನ ವರ್ಗಾವಣೆ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಸಚಿವರು ಆರ್ಥಿಕ ವ್ಯವಹಾರ ಮತ್ತು ಹವಾಮಾನ ಕ್ರಿಯೆಗಾಗಿ ದ್ವಿಪಕ್ಷೀಯ ಇಂಧನ ಸಹಕಾರ ಸಚಿವಾಲಯದ ಮುಖ್ಯಸ್ಥರೊಂದಿಗೆ ಇಂಡೋ-ಜರ್ಮನ್ ಗ್ರೀನ್ ಹೈಡ್ರೋಜನ್ ಟಾಸ್ಕ್ ಫೋರ್ಸ್ ಮತ್ತು ಭಾರತದಲ್ಲಿ ಹೂಡಿಕೆ ಕುರಿತು ಚರ್ಚಿಸಿದರು. ಶನಿವಾರ ಅಗ್ರಿ-ಪಿವಿ ಸೈಟ್ ಮತ್ತು ಸೌರಚಾಲಿತ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಭೇಟಿ ಕೊಟ್ಟು ವರ್ಚುವಲ್ ಬ್ಯಾಟರಿ ಪವರ್ ಪ್ಲಾಂಟ್‌ನ ಪ್ರಸಂಟೇಷನ್‌ನಲ್ಲಿ ಭಾಗವಹಿಸಿದ್ದಾರೆ.