Advertisement

ಹಾರ್ದಿಕ್‌ನಿಂದ ಹೊಸತನದ ಆಟ: ಕೃಣಾಲ್‌

02:55 AM Apr 20, 2019 | Team Udayavani |

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್‌ ತಂಡದ ಅಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ತನ್ನ ಕಿರಿಯ ಸಹೋದರ ಹಾರ್ದಿಕ್‌ ಪಾಂಡ್ಯ ಕ್ರಿಕೆಟ್‌ನಿಂದ ದೂರವಿದ್ದ ಸಮಯ ಉತ್ತಮ ಕ್ರಿಕೆಟಗನಾಗಿಸಲು ನೆರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

“ಬೆನ್ನು ನೋವು ಮತ್ತು ಬೇರೆ ಕಾರಣಗಳಿಂದ ಕ್ರಿಕೆಟಿನಿಂದ ದೂರ ಉಳಿದಿದ್ದ ಹಾರ್ದಿಕ್‌ ಪಾಂಡ್ಯ ಫಿಟ್‌ನೆಸ್‌ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಕ್ರಿಕೆಟ್‌ ಅವರ ಮೊದಲ ಅದ್ಯತೆ. ಕ್ರೀಡೆಯಲ್ಲಿ ಸುಧಾರಿಸಿಕೊಳ್ಳುವುದು ಅವರ ಗುರಿ. ಬಲವಂತದ ವಿರಾಮ ಅವರನ್ನು ಉತ್ತಮ ಕ್ರಿಕೆಟಿಗನಾಗಿ ಬದಲಾಯಿಸಿದೆ. ಪ್ರತಿ ವರ್ಷ ಹಾರ್ದಿಕ್‌ ಆಟ ಹೊಸತನದಿಂದ ಕೂಡಿರುತ್ತದೆ. ಅವರಿಂದ ನಾನು ಅನೇಕ ವಿಷಯಗಳನ್ನು ಕಲಿಯುತ್ತಿದ್ದೇನೆ’ ಎಂದು ಕೃಣಾಲ್‌ ಪಾಂಡ್ಯ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯದ ಅನಂತರ ಹೇಳಿದ್ದಾರೆ.

ಗುರುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 40 ರನ್‌ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮಿಂಚಿನ ಆಟವಾಡಿದ ಪಾಂಡ್ಯ ಸಹೋದರರು ತಂಡಕ್ಕೆ ಆಸರೆಯಾಗಿ ನಿಂತಿದ್ದರು.

ಮುಂಬೈಗೆ ನೆರವಾದ ಪಾಂಡ್ಯ ಸಹೋದರರು
ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ನಡೆಸಿದ ಮುಂಬೈ 5 ವಿಕೆಟಿಗೆ 168 ರನ್‌ ಗಳಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 9 ವಿಕೆಟಿಗೆ 128 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕರಾದ ರೋಹಿತ್‌ ಶರ್ಮ (30), ಡಿ ಕಾಕ್‌ (35) ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಅವರ ನಿರ್ಗಮಿಸಿದ ಅನಂತರ ಮುಂಬೈ ರನ್‌ ಗಳಿಕೆ ನಿಧಾನಗತಿಯಿಂದ ಸಾಗಿತ್ತು. ಅನಂತರ ಬಂದ ಬೆನ್‌ ಕಟ್ಟಿಂಗ್‌ ಹಾಗೂ ಸೂರ್ಯ ಕುಮಾರ್‌ ಯಾದವ್‌ ಗಳಿಕೆ ಕ್ರಮವಾಗಿ 2, 26. ಪಾಂಡ್ಯ ಸಹೋದರರು ಮಿಂಚಿನ ಆಟವಾಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಹಾರ್ದಿಕ್‌ ಪಾಂಡ್ಯ 15 ಎಸೆತಗಳಲ್ಲಿ 32, ಕೃಣಾಲ್‌ ಪಾಂಡ್ಯ 37 ರನ್‌ ಬಾರಿಸಿದರು. ಕೃಣಾಲ್‌ ಪಾಂಡ್ಯ ಅವರದೇ ಈ ಪಂದ್ಯದಲ್ಲಿ ಅತ್ಯಧಿಕ ರನ್‌ ಗಳಿಕೆಯಾಗಿದೆ.

Advertisement

ಡೆಲ್ಲಿ ಇನ್ನಿಂಗ್ಸ್‌ ವೇಳೆ ಘಾತುಕ ಬೌಲಿಂಗ್‌ ನಡೆಸಿದ ಮುಂಬೈ ಪಡೆ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಬೌಲಿಂಗ್‌ನಲ್ಲೂ ಪಾಂಡ್ಯ ಸಹೋದರರು ತಲಾ ಒಂದು ವಿಕೆಟ್‌ ಉರುಳಿಸಿದರು. ಮುಂಬೈ ಬೌಲಿಂಗ್‌ ದಾಳಿಗೆ ತತ್ತರಿಸಿದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 128 ರನ್‌ ಮಾಡಿತು. ಈ ಮೂಲಕ ಮುಂಬೈ ತಂಡ ಡೆಲ್ಲಿ ವಿರುದ್ಧ 40 ರನ್‌ಗಳ ಗೆಲುವು ದಾಖಲಿಸಿ ಮೆರೆದಾಡಿತು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌ 5 ವಿಕೆಟಿಗೆ 168. ಡೆಲ್ಲಿ ಕ್ಯಾಪಿಟಲ್ಸ್‌-20 ಓವರ್‌ಗಳಲ್ಲಿ 9 ವಿಕೆಟಿಗೆ 128 (ಶಿಖರ್‌ ಧವನ್‌ 35, ಅಕ್ಷರ್‌ ಪಟೇಲ್‌ 26, ರಾಹುಲ್‌ ಚಹರ್‌ 19ಕ್ಕೆ 3, ಬುಮ್ರಾ 18ಕ್ಕೆ 2). ಪಂದ್ಯಶ್ರೇಷ್ಠ: ಹಾರ್ದಿಕ್‌ ಪಾಂಡ್ಯ

ಡೆತ್‌ ಓವರ್‌ಗಳ ಮೇಲೆ ಇನ್ನಷ್ಟು ಕಾಳಜಿ ಅಗತ್ಯ
ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಡೆತ್‌ ಓವರ್‌ಗಳ ಮೇಲೆ ಇನ್ನಷ್ಟು ಕಾಳಜಿ ವಹಿಸಬೇಕಾದ ಅಗತ್ಯವಿದೆ ಎಂದು ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

“ತವರಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವುದು ಅತೀ ಮುಖ್ಯ. ನಾವು ಟಾಸ್‌ ಸೋತೆವು ಅನಂತರ ಮುಂಬೈ 3 ವಿಭಾಗಗಳಲ್ಲೂ ನಮ್ಮ ಮೇಲೆ ಸವಾರಿ ಮಾಡಿತು. ಡೆತ್‌ ಓವರ್‌ಗಳಿಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಡುವುದು ಅಷ್ಟು ಸುಲಭವಲ್ಲ. ಹೊಸ ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್‌ ಮಾಡುವುದು ಕಷ್ಟಕರವಾಗುತ್ತಿತ್ತು. ಕೊನೆಯ 3 ಓವರ್‌ಗಳು ಪಂದ್ಯದ ಗತಿಯನ್ನೇ ಬದಲಾಯಿಸಿತು’ ಎಂದು ಹೇಳಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಫಿರೋಜ್‌ ಶಾ ಕೋಟ್ಲಾ ಅಂಗಳದಲ್ಲಿ ಇದು ಮುಂಬೈ ಇಂಡಿಯನ್ಸ್‌ಗೆ ಒಲಿದ 2ನೇ ಜಯ. ಈ ಸ್ಟೇಡಿಯಂನಲ್ಲಿ 2012ರಿಂದ 7 ಪಂದ್ಯಗಳನ್ನಾಡಿರುವ ಮುಂಬೈ ಐದು ಪಂದ್ಯಗಳಲ್ಲಿ ಸೋಲನುಭವಿಸಿದೆ. 2017ರ ಆವೃತ್ತಿಯಲ್ಲಿ ತವರಿನ ತಂಡವನ್ನು ದಾಖಲೆಯ 146 ರನ್‌ಗಳ ಅಂತರದಲ್ಲಿ ಸೋಲಿಸಿತ್ತು.

ಅಮಿತ್‌ ಮಿಶ್ರಾ ಐಪಿಎಲ್‌ನಲ್ಲಿ 150 ವಿಕೆಟ್‌ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ 2ನೇ ಆಟಗಾರ. ಲಸಿತ ಮಾಲಿಂಗ ಮೊದಲ ಸ್ಥಾನದಲ್ಲಿದ್ದಾರೆ (162).

ಟಿ20 ಕ್ರಿಕೆಟಿನಲ್ಲಿ ರೋಹಿತ್‌ ಶರ್ಮ 8,000 ರನ್‌ ಪೂರೈಸಿದರು. ರೋಹಿತ್‌ ಈಗ ಈ ಸಾಧನೆ ಮಾಡಿದ 8ನೇ ಆಟಗಾರ ಮತ್ತು ಸುರೇಶ್‌ ರೈನಾ, ವಿರಾಟ್‌ ಕೊಹ್ಲಿ ಅನಂತರ ಭಾರತದ 3ನೇ ಆಟಗಾರ.

ಶಿಖರ್‌ ಧವನ್‌ ಐಪಿಎಲ್‌ನಲ್ಲಿ 495 ಬೌಂಡರಿ ಬಾರಿಸಿ ಗೌತಮ್‌ ಗಂಭೀರ್‌ ಅವರ ದಾಖಲೆಯನ್ನು ಮುರಿದಿದ್ದಾರೆ (492). ಈ ಪಂದ್ಯದಲ್ಲಿ ಅವರು 5 ಬೌಂಡರಿ ಬಾರಿಸಿ ಐಪಿಎಲ್‌ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರ ಎನಿಸಿಕೊಂಡರು.

ಈ ಪಂದ್ಯದಲ್ಲಿ ಒಟ್ಟು 282 ರನ್‌ಗಳು ದಾಖಲಾಗಿದೆ. ಇದು ಐಪಿಎಲ್‌ ಇತಿಹಾಸದಲ್ಲಿ ವೈಯಕ್ತಿಕ 40 ಪ್ಲಸ್‌ ರನ್‌ ಇಲ್ಲದೆ ದಾಖಲಾದ ಅತ್ಯಧಿಕ ಮೊತ್ತ. ಕೃಣಾಲ್‌ ಪಾಂಡ್ಯ ಅವರದು ಈ ಪಂದ್ಯದಲ್ಲಿ ಅತ್ಯಧಿಕ ರನ್‌ ಗಳಿಕೆ (ಅಜೇಯ 37). 2017ರ ಆವೃತ್ತಿಯಲ್ಲಿ ಆರ್‌ಸಿಬಿ-ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ನಡುವಿನ ಪಂದ್ಯದಲ್ಲಿ ದಾಖಲಾದ ಒಟ್ಟು 274 ರನ್‌ ಹಿಂದಿನ ದಾಖಲೆ. ಅಂದು ರಾಹುಲ್‌ ತ್ರಿಪಾಠಿ ಅವರದೇ ಅತ್ಯಧಿಕ ಗಳಿಕೆಯಾಗಿತ್ತು (31).

ಐಪಿಎಲ್‌ನಲ್ಲಿ ರೋಹಿತ್‌ ಶರ್ಮ 6ನೇ ಬಾರಿಗೆ ಅಮಿತ್‌ ಮಿಶ್ರಾ ಅವರ ಎಸೆತದಲ್ಲಿ ಔಟಾದರು. ರೋಹಿತ್‌ ಶರ್ಮ 85 ಎಸೆತಗಳಲ್ಲಿ 80 ರನ್‌ ಬಾರಿಸಿದ್ದಾರೆ.

ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗ್‌ನಲ್ಲಿ ರಿಷಬ್‌ ಪಂತ್‌ ಅವರ ಬ್ಯಾಟಿಂಗ್‌ ಸರಾಸರಿ 6.5. ಪಂತ್‌ ಅವರು ಬುಮ್ರಾ ಅವರ 25 ಎಸೆತಗಳಲ್ಲಿ 26 ರನ್‌ ಹೊಡದಿದ್ದಾರೆ. ಈ ಲೀಗ್‌ನಲ್ಲಿ 4 ಬಾರಿ ಬುಮ್ರಾಗೆ ವಿಕೆಟ್‌ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next