Advertisement

ವಿನೂತನ ನೃತ್ಯನೂತನ

06:18 PM Sep 26, 2019 | mahesh |

ನೃತ್ಯ ನೂತನ ಎನ್ನುವ ಹೊಸ ಆವಿಷ್ಕಾರದೊಂದಿಗೆ 73ನೇಯ ಸ್ವಾತಂತ್ರ್ಯೋತ್ಸವವನ್ನು ನೃತ್ಯ ನಿಕೇತನ ಕೊಡವೂರು ಉಡುಪಿಯ “ಸಖಿಗೀತ’ದಲ್ಲಿ ಆಚರಿಸಿತು. ಬದಲಾಗುತ್ತಿರುವ ಸನ್ನಿವೇಶದಲ್ಲಿ ನವನವೀನ ಯೋಚನೆ- ಆಲೋಚನೆಗಳನ್ನು ಆಳವಡಿಸಿಕೊಂಡು ಕಾಲಕಾಲಕ್ಕೆ ಬದಲಾಗುತ್ತಿರುವ ಮನೋಧರ್ಮಕ್ಕನುಗುಣವಾಗಿ ಸ್ಪಂದಿಸಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಇನ್ನಿತರ ಕ್ಷೇತ್ರಗಳಂತೆ ನೃತ್ಯಕ್ಷೇತ್ರಕ್ಕೂ ಅನ್ವಯಿಸುತ್ತದೆ. ಯಾಕೆಂದರೆ ಪರಿವರ್ತನೆ ಜಗದ ನಿಯಮ. ಈ ನಿಟ್ಟಿನಲ್ಲಿ ನೃತ್ಯ ನಿಕೇತನ ಕೊಡವೂರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನೀಡಿದ “ನೃತ್ಯ ನೂತನ’ ನೃತ್ಯ ಕಾರ್ಯಕ್ರಮ ಒಂದು ಹೊಸ ರಸಾನುಭವ ನೀಡಿತು. ದೇಶಭಕ್ತಿ, ಈಶಭಕ್ತಿ, ರಾಷ್ಟ್ರಪ್ರೇಮ-ಅಮರಪ್ರೇಮ, ಲೌಕಿಕ-ಅಲೌಕಿಕ ಹೀಗೆ ವೈವಿಧ್ಯಮಯ ವಿಷಯಗಳನ್ನೊಳಗೊಂಡ ಕಾರ್ಯಕ್ರಮ ಇದಾಗಿತ್ತು.

Advertisement

ಪರಿಸರ ಕಾಳಜಿಯ ಸಂದೇಶ ಹೊತ್ತುತಂದ ಪ್ರಥಮ ನೃತ್ಯದಲ್ಲಿ ಕಲಾವಿದೆಯರು ನಗರೀಕರಣಕ್ಕಾಗಿ ಹಾಗೂ ಇನ್ನಿತರ ದುರುದ್ದೇಶಗಳಿಗಾಗಿ ಅರಣ್ಯನಾಶ, ತತ್ಪರಿಣಾಮವಾಗಿ ಆತಿವೃಷ್ಟಿ-ಆನಾವೃಷ್ಟಿ, ಮಣ್ಣಿನ ಸವಕಳಿ, ಗುಡ್ಡಕುಸಿತ, ಅನಿರೀಕ್ಷಿತ ಪ್ರವಾಹಗಳಿಂದ, ಮನುಕುಲ ಸ್ವಯಂಕೃತಾಪರಾಧಕ್ಕಾಗಿ ಅನುಭವಿಸುವ ಕಷ್ಟನಷ್ಟಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಲಾಯಿತು. ಮುಂದಿನ ನೃತ್ಯ ಭಾಗದಲ್ಲಿ ಮಹಾತ್ಮ ಗಾಂಧೀಜಿಗೆ ಪ್ರಿಯವಾದ “ವೈಷ್ಣವ ಜನತೋ’ ಹಾಡಿನ ಅಂತರಾರ್ಥವನ್ನು ಅತ್ಯಂತ ಸೂಕ್ಷ್ಮವಾಗಿ ಅಷ್ಟೇ ನವಿರಾಗಿ ಪ್ರದರ್ಶಿಸಲಾಯಿತು. ಬಾಲ್ಯದಲ್ಲಿ ಅಸ್ಪೃಶ್ಯ ಬಾಲಕನನ್ನು ಸುರಿವ ಮಳೆಯಿಂದ ರಕ್ಷಿಸಿ ಬಿಗಿದಪ್ಪಿಕೊಳ್ಳುವುದು ಹಾಗೆಯೇ ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯನ್ನು ಕರಿಯನೆಂದು ಜರಿದು ರೈಲಿನಿಂದ ಹೊರತಳ್ಳಿದ ಸನ್ನಿವೇಶ ಮತ್ತು ಅಂದಿನಿಂದಲೇ ವರ್ಣ ದ್ವೇಷದ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದ ಗಾಂಧಿಯ ಆತ್ಮಸ್ಥೈರ್ಯವನ್ನು ಹೃದಯಸ್ಪರ್ಶಿಯಾಗಿ ರಂಗಕ್ಕೆ ಭಟ್ಟಿ ಇಳಿಸಿದ ಕಲಾವಿದೆಯರ ಪ್ರಯತ್ನ ಪ್ರಶಂಸನೀಯ.

ಡಿ.ವಿ.ಜಿ.ಯವರ ಆಂತಪುರ ಗೀತೆಗಳು ಅರ್ಥಪೂರ್ಣ ಶೃಂಗಾರಮಯ ಗೀತೆಗಳ ಸಂಗ್ರಹವಾಗಿದ್ದು, “ಏನೇ ಶುಕಭಾಷಿಣಿ…’ ಎಂದು ಕಲ್ಲನ್ನು ಮಾತನಾಡಿಸಿ ಆಕೆಯ ಅಂತರಂಗವನ್ನು ತಿಳಿಯುವ ವರ್ಣನೆ, ಈ ಹಾಡಿನ ಮೂಲಕ ಶಿಲ್ಪಕಾರನ ಸಾಮರ್ಥ್ಯ ಹಾಗೂ ಶಿಲಾಬಾಲಿಕೆಯ ಅಂತರಾಳವನ್ನು ಸೊಗಸಾಗಿ ರಂಗದ ಮೇಲೆ ಸಾಕ್ಷಾತ್ಕಾರಗೊಳಿಸಿದ ನೃತ್ಯಕಲಾವಿದೆಯರು ಮೆಚ್ಚುಗೆ ಗಳಿಸಿದರು. ತಮ್ಮ ಮುಖಭಾವ, ವೈವಿಧ್ಯಮಯ ನೃತ್ಯಭಂಗಿ, ಹಾವಭಾವಗಳಿಂದ ಬೇಲೂರಿನ ಶಿಲಾಬಾಲಿಕೆಯರು ಸ್ವತಃ ರಂಗಕ್ಕಿಳಿರಬಹುದೇನೋ ಎನ್ನುವಷ್ಟು ನೈಜವಾಗಿ ನರ್ತಿಸಿದರು. ಈ ಮೂರು ನೃತ್ಯಗಳನ್ನು ಸಮರ್ಥವಾಗಿ ಸಂಯೋಜಿಸಿದ ಮಾನಸಿ ಸುಧೀರ್‌ ರಾವ್‌ ಅಭಿನಂದನಾರ್ಹರು.

ಕೆಲವು ವರ್ಷಗಳಿಂದೀಚೆಗೆ ಭಾರತದ ಪ್ರಜೆಗಳಲ್ಲಿ ರಾಷ್ಟ್ರ ಪ್ರೇಮ ಹಾಗೂ ಭಾರತೀಯತೆ ಹೆಚ್ಚಾಗುತ್ತಿರುವುದು ಒಳ್ಳೆಯ ಲಕ್ಷಣ. ದೇಶವನ್ನು ಹಗಲಿರುಳೆನ್ನದೆ, ಚಳಿಗಾಳಿ ಲೆಕ್ಕಿಸದೆ ರಕ್ಷಿಸುತ್ತಿರುವ ವೀರಯೋಧರನ್ನು ಗೌರವಿಸುವ ಒಳ್ಳೆಯ ಪರಂಪರೆ ಬೆಳೆಯುತ್ತಿದೆ. ಯೋಧನೊಬ್ಬ ತಾನು ಹುತಾತ್ಮನಾದ ವಿಷಯವನ್ನು ತನ್ನ ಮನೆಯವರಿಗೆ ಹೇಗೆ ಹೇಳಬೇಕೆನ್ನುವುದನ್ನು ತನ್ನ ಮಿತ್ರನಿಗೆ ಪತ್ರ ಮುಖೇನ ತಿಳಿಸುವ “ನನ್ನ ಸಾವಿನ ಸುದ್ದಿ’ ಹಾಡಿನ ಸಾಹಿತ್ಯ ಮನಮಿಡಿಯುವಂತಿದ್ದು ಅಷ್ಟೇ ಭಾವಪೂರ್ಣವಾಗಿ ನೃತ್ಯವನ್ನು ಪ್ರಸ್ತುತಪಡಿಸಿದ ನೃತ್ಯಾಂಗನೆಯರು ಪ್ರೇಕ್ಷಕರನ್ನು ಭಾವುಕರನ್ನಾಗಿಸಿದರು. ತನ್ನ ಮನೆಯವರನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಯೋಧ ತನ್ನ ಸಾವನ್ನು ಅವರಿಗೆ ಅದರಲ್ಲೂ ಪ್ರಥಮತಃ ತಾಯಿಗೆ ದೀಪವನ್ನಾರಿಸುವ ಮೂಲಕ, ತಂದೆಯ ಊರುಗೋಲನ್ನು ಕಸಿದು, ಹೆಂಡತಿಯ ಕಾಲುಂಗರ ತೆಗೆದು, ತಂಗಿಯ ಕೈಯ ರಾಖೀಯನ್ನು ಹರಿದು, ಮಗುವಿನ ಹೆಜ್ಜೆಯನ್ನು ತಪ್ಪಿಸಿ ಸಾಂಕೇತಿಕವಾಗಿ ತಿಳಿಸಬೇಕೆಂದೂ ಅಷ್ಟರಲ್ಲೇ ಅವರು ತಿಳಿದುಕೊಳ್ಳುವರು ಎನ್ನುವ ಭಾವಾರ್ಥವನ್ನು ರಂಗದಲ್ಲಿ ಅದ್ಭುತವಾಗಿ ಪ್ರದರ್ಶಿಸಿ ಪ್ರಚಂಡ ಕರತಾಡನ ಗಿಟ್ಟಿಸುವುದರ ಮೂಲಕ ವೀರಯೋಧರಿಗೆ ನಮನ ಸಲ್ಲಿಸಿದರು. ಈ ನೃತ್ಯವನ್ನು ಪರಿಣಾಮಕಾರಿಯಾಗಿ ರಂಗಕ್ಕಿಳಿಸಿದ ಪ್ರಶಾಂತ್‌ ಉದ್ಯಾವರ್‌ ಇವರ ಪ್ರಯತ್ನ ಸಫ‌ಲವಾಯಿತು.

ಜನನಿ ಭಾಸ್ಕರ ಕೊಡವೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next