ಎಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್‌ಪೋಸ್ಟ್‌ನ ಆರ್.ಪಿ.ಸರ್ಕಲ್ ಬಳಿ ಜನನಿಬಿಡ ಸ್ಥಳದಲ್ಲಿ ಸಿಲ್-7 ಮದ್ಯದಂಗಡಿ ತೆರೆಯಲು ತೆರೆಮರೆಯಲ್ಲಿ ಮುಂದಾಗಿರುವುದಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಹ್ಯಾಂಡ್‌ಪೋಸ್ಟ್ ಸುತ್ತಮುತ್ತಲ ಗ್ರಾಮಸ್ಥರು ಬಾರ್ ತೆರೆಯಲು ಪರವಾನಗಿ ನೀಡದಂತೆ ಪಟ್ಟು ಹಿಡಿದಿದ್ದು, ಒಂದು ವೇಳೆ ಪರವಾನಗಿ ನೀಡಿದರೆ ಅನಿರ್ದಿಷ್ಟಾವಾಧಿ ಮುಷ್ಕರ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಮದ್ಯ ಮಾರಾಟಗಾರ ಈಗಾಗಲೇ ಬಾರ್ ತೆರೆಯುವ ಸಂಬಂಧ ಪರವಾನಗಿಗೆ ಅರ್ಜಿ ಸಲ್ಲಿಸಿದ್ದು, ಅಬಕಾರಿ ಇಲಾಖೆಯ ಉಪ ಆಯುಕ್ತರು ಸ್ಥಳ ಪರಿಶೀಲಿಸಿದ್ದಾರೆ. ಬಾರ್ ತೆರೆಯಲು ಬೇಕಾದ ಎಲ್ಲಾ ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ತಾತ್ಕಾಲಿಕ ಮಳಿಗೆಯನ್ನೂ ನಿರ್ಮಿಸಲಾಗಿದೆ.
ಬಾರ್ ತೆರಯಲು ಉದ್ದೇಶಿಸಿರುವ ಸ್ಥಳವು ಕೆಲವೇ ಮೀಟರ್‌ಗಳ ಅಂತರದಲ್ಲಿ ಮಾಜಿ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ವೃತ್ತವಿದ್ದು, ಈ ಪ್ರದೇಶ ಯಾವಾಗಲೂ ಜನದಟ್ಟಣೆಯಿಂದ ಕೂಡಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು, ವ್ಯಾಪಾರಸ್ಥರು, ತಾಲೂಕಿನ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಈ ಪ್ರದೇಶದಲ್ಲೇ ಬಸ್‌ಗಾಗಿ ಕಾಯುತ್ತಾರೆ.
ಇಂತಹ ಜನನಿಬಿಡ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬಾರ್ ಆರಂಭಿಸಲು ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹ್ಯಾಂಡ್‌ಪೋಸ್ಟ್ ಮಧ್ಯೆಯೇ ಮೈಸೂರು ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿ ಹಾದಿ ಹೋಗಿದೆ.
ಪ್ರಮುಖ ರಸ್ತೆಗಳನ್ನು ಬೆಸೆಯುವ ಸ್ಥಳ ಇದಾಗಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಬಾರ್‌ಗೆ ಅನುಮತಿ ನೀಡಬಾರದು ಎಂದು ಎಚ್.ಡಿ.ಕೋಟೆ ನಿವಾಸಿ ರಾಕೇಶ್ ಒತ್ತಾಯಿಸಿದ್ದಾರೆ. ಅಲ್ಲದೇ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಬಕಾರಿ ಆರಕ್ಷಕ ಉಪನಿರೀಕ್ಷಕ ನಟರಾಜ್, ಅಬಕಾರಿ ಇಲಾಖೆಯ ನಿಯಮಗಳನ್ನು ಪಾಲಿಸದರೆ ಮಾತ್ರ ಬಾರ್ ತೆರೆಯುಲು ಅವಕಾಶ ನೀಡಲಾಗುವುದು. ಸ್ಥಳಪರಿಶೀಲನೆ ನಡೆಸಿ, ವಿರೋಧವಿದ್ದರೆ ಜನಾಭಿಪ್ರಾಯ ಸಂಗ್ರಹಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.