Advertisement

ಕಾಲುವೆಗೆ ನೀರು ಹರಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ 

05:14 PM Mar 13, 2018 | Team Udayavani |

ಬಳ್ಳಾರಿ: ತುಂಗಭದ್ರಾ ಜಲಾಶಯದ ಬಲದಂಡೆಯ ಕೆಳಮಟ್ಟದ (ಎಲ್‌ಎಲ್‌ಸಿ) ಕಾಲುವೆಗೆ ಐಸಿಸಿ ನಿರ್ಣಯದಂತೆ ಮಾ.30ರ ವರೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಜಲಾಶಯದ ಮುನಿರಾಬಾದ್‌ ಕಚೇರಿ ಎದುರು ಮಾ.21ರಿಂದ ಅನಿರ್ದಿಷ್ಟಾವಧಿ  ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ತುಂಗಭದ್ರಾ ಮತ್ತು ಅಖಂಡ ರೈತಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆ ಈಡೇರಿಸದಿದ್ದರೆ ಧರಣಿಯೊಂದಿಗೆ ಜಿಲ್ಲೆಯ ಕಾಲುವೆ ವ್ಯಾಪ್ತಿಯ ತಾಲೂಕು, ಪಟ್ಟಣಗಳಲ್ಲಿ ರಸ್ತೆತಡೆ ನಡೆಸಲಾಗುವುದು ಎಂದು ಹೇಳಿದರು.  2017 ನವೆಂಬರ್‌ 13 ರಂದು ಬೆಳಗಾವಿಯ
ಸುವರ್ಣಸೌಧದಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಾಲುವೆಗಳಿಗೆ ನೀರು ಹರಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಇದರಲ್ಲಿ ಜಲಾಶಯದ ಬಲದಂಡೆಯ ಕೆಳಮಟ್ಟದ (ಎಲ್‌ಎಲ್‌ಸಿ) ಕಾಲುವೆಗೆ ಆನ್‌ ಆ್ಯಂಡ್‌ ಆಫ್‌ ಪದ್ಧತಿಯಡಿ 2017 ನ.30 ರಿಂದ ಡಿ.10ರ ವರೆಗೆ ಪ್ರತಿದಿನ 700 ಕ್ಯುಸೆಕ್‌ ನೀರು ಹರಿಸಬೇಕು. ಡಿ.11 ರಿಂದ ಡಿ. 31ರವರೆಗೆ ಕಡಿತಗೊಳಿಸಿ, ಪುನಃ 2018 ಜ.1 ರಿಂದ ಜ.22ರ ವರೆಗೆ ಪ್ರತಿದಿನ 600 ಕ್ಯುಸೆಕ್‌ ನೀರು ಹರಿಸಿ, ಜ.23 ರಿಂದ ಫೆ.2ರ ವರೆಗೆ ಕಡಿತಗೊಳಿಸಬೇಕು. ಫೆ.3 ರಿಂದ 25ರ ವರೆಗೆ ಪುನಃ 600 ಕ್ಯುಸೆಕ್‌ ಹರಿಸಿ, ಫೆ.26ರಿಂದ ಮಾ.7ರ ವರೆಗೆ ಕಡಿತಗೊಳಿಸಬೇಕು. ಮಾ.8 ರಿಂದ ಮಾ.30ರ ವರೆಗೆ ಪುನಃ ನೀರು ಹರಿಸಬೇಕಿದೆ. ಆದರೆ, ಮಾ.21 ರಿಂದ ಕಾಲುವೆಗೆ ನೀರು ಕಡಿತಗೊಳಿಸುವುದಾಗಿ ಜಲಾಶಯದ ಅಧಿಕಾರಿಗಳು ತಿಳಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ವೇಳೆ ಕಾಲುವೆಯಲ್ಲಿ ನೀರು ಹರಿಸದಿದ್ದರೆ, 2 ಲಕ್ಷ ಎಕರೆ ಪ್ರದೇಶದಲ್ಲಿ ನಾಟಿ ಮಾಡಲಾಗಿರುವ 700 ಕೋಟಿ ರೂ. ಮೌಲ್ಯದ ಭತ್ತ ನಾಶವಾಗಲಿದೆ. ಇದರಿಂದ ಭಾರಿ ನಷ್ಟವಾಗಲಿದ್ದು, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಲ್ಲದೇ, ಜಲಾಶಯದಲ್ಲಿ ಇನ್ನು 7.5 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಮಾ.21 ರಿಂದ ಪ್ರತಿದಿನ 600 ಕ್ಯೂಸೆಕ್‌ ನೀರು ಕಾಲುವೆಗೆ ಹರಿಸಿದರೂ, 10 ದಿನಗಳಿಗೆ ಕೇವಲ ಅರ್ಧ ಟಿಎಂಸಿ ಅಡಿ ನೀರು ಸಾಕಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಎಲ್‌ಎಲ್‌ಸಿ ಕಾಲುವೆಗೆ ಮಾ.21 ರಿಂದ ನೀರು ಕಡಿತಗೊಳಿಸದೆ, ಐಸಿಸಿ ಸಭೆಯ ನಿರ್ಣಯದಂತೆ ಬೇಸಿಗೆ ಬೆಳೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಮಾ.21 ರಿಂದಲೇ ಮುನಿರಾಬಾದ್‌ನಲ್ಲಿನಲ್ಲಿನ ಜಲಾಶಯದ ಮುಖ್ಯ ಅಭಿಯಂತರರ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಜತೆಗೆ ಜಿಲ್ಲೆಯ ಸಿರುಗುಪ್ಪ, ಕಂಪ್ಲಿ, ಕುರುಗೋಡು, ಸಿರಿಗೇರಿ ಕ್ರಾಸ್‌, ತೆಕ್ಕಲಕೋಟೆಯಲ್ಲಿ ರಸ್ತೆತಡೆ ನಡೆಸಲಾಗುವುದು ಎಂದರು.

ಕಾಲುವೆಗೆ ನೀರು ಹರಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಕಾಲುವೆ ವ್ಯಾಪ್ತಿಯ ಕ್ಷೇತ್ರಗಳಿಂದ ಯಾವೊಬ್ಬ ಜನಪ್ರತಿನಿಧಿ ಗಳು ಸಹ ನಾಮಪತ್ರ ಸಲ್ಲಿಸಬಾರದು ಎಂದು ಪುರುಷೋತ್ತಮಗೌಡ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ  .ರಂಜಾನ್‌ಸಾಬ್‌,
ಬಸವನಗೌಡ, ಶಾನವಾಸಪುರ ಶರಣಪ್ಪ, ಜಾಲಿಹಾಳ್‌ ಶ್ರೀಧರಗೌಡ, ಬಸವನಗೌಡ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.

ಐಸಿಸಿ ಸಭೆಯ ನಿರ್ಣಯದಂತೆ ಬೇಸಿಗೆ ಬೆಳೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಮಾ.21 ರಿಂದಲೇ ಮುನಿರಾಬಾದ್‌ನಲ್ಲಿನಲ್ಲಿನ
ಜಲಾಶಯದ ಮುಖ್ಯ ಅಭಿಯಂತರರ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಜತೆಗೆ ಜಿಲ್ಲೆಯ ಸಿರುಗುಪ್ಪ, ಕಂಪ್ಲಿ, ಕುರುಗೋಡು, ಸಿರಿಗೇರಿ ಕ್ರಾಸ್‌, ತೆಕ್ಕಲಕೋಟೆಯಲ್ಲಿ ರಸ್ತೆತಡೆ ನಡೆಸಲಾಗುವುದು. 
ದರೂರು ಪುರುಷೋತ್ತಮಗೌಡ, ಅಖಂಡ ರೈತಸಂಘದ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next