ತುಮಕೂರು: ಮಿತಿ ಮೀರಿದ ಗಣಿಗಾರಿಕೆಯಿಂದ ಕಾಡು ನಾಶವಾಗುತ್ತಿರುವುದರಿಂದ ಕಾಡು ಪ್ರಾಣಿಗಳು ಆಹಾರ ಅರಸಿ ಗ್ರಾಮಗಳಿಗೆ ಬರುವುದು ಸಾಮಾನ್ಯವಾಗಿದೆ ಎಂಬುದಕ್ಕೆ ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಬನ್ನಿಕುಪ್ಪೆ ಸಮೀಪ ನಡೆದ ಘಟನೆ ಸಾಕ್ಷಿ.
ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಬನ್ನಿಕುಪ್ಪೆ ಸಮೀಪದ ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಲಕ್ಷ್ಮಮ್ಮ (60) ಜಾನುವಾರು ಮೇಯಿಸಲು ಹೋಗಿದ್ದಾಗ ದಾಳಿ ಮಾಡಿ ಕೊಂದಿದ್ದು, ಮನುಷ್ಯನ ರಕ್ತದ ರುಚಿ ನೋಡಿರುವ ಚಿರತೆ ಮತ್ತೆ ಜನರ ಮೇಲೆ ದಾಳಿ ಮಾಡುತ್ತದೆ ಎನ್ನುವ ಆತಂಕ ಜನರಲ್ಲಿ ಮೂಡಿದೆ.
ಕಾಡು ನಾಶದಿಂದ ಕಾಡಿನಲ್ಲಿರುವ ಪ್ರಾಣಿಗಳು ಆಹಾರ ಹುಡುಕಿಕೊಂಡು ಗ್ರಾಮಗಳತ್ತ ಬರುತ್ತಿದ್ದು, ಹೊಲ ತೋಟಗಳಲ್ಲಿ ಕೆಲಸ ಮಾಡಲು ರೈತರು ಭಯಭೀತರಾಗುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಚಿರತೆ, ಕುರಿ, ನಾಯಿಗಳ ಮೇಲೆ ದಾಳಿ ಮಾಡಿ ರಕ್ತ ಹೀರುತಿತ್ತು. ಘಟನೆಯಿಂದ ಈ ಭಾಗದ ರೈತರು ತೀವ್ರ ಆತಂಕಗೊಂಡಿದ್ದು, ನರಭಕ್ಷಕ ಚಿರತೆ ಹಿಡಿಯಲು ಅರಣ್ಯ ಸಿಬ್ಬಂದಿ ಟೊಂಕ ಕಟ್ಟಿ ನಿಂತಿದ್ದಾರೆ.
ದಾಳಿ ಮಾಡಿದ್ದ ಜಾಗಕ್ಕೆ ಮತ್ತೆ ಚಿರತೆ ಬರುವ ಅಂದಾಜಿನಲ್ಲಿ ಎರಡು ಬೋನು ಇಟ್ಟು ಅರಣ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ. ಚಿರತೆ ಹಿಡಿಯಲು ಅನುಮತಿಯನ್ನೂ ಪಡೆದಿದ್ದಾರೆ. ಅರಣ್ಯ ಇಲಾಖೆಯವರೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿ ಸಂಜೆ ನಂತರ ಜಮೀನುಗಳಿಗೆ ಹೋಗಬಾರದು ಎಂದು ಸೂಚನೆ ನೀಡಿದ್ದಾರೆ. ನರಭಕ್ಷಕ ಚಿರತೆ ಹಿಡಿಯಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಆಗಿಂದಾಗ್ಗೆ ಕಾಡಾನೆಗಳು ಬಂದು ಆತಂಕ ಸೃಷ್ಟಿಸುತಿತ್ತು. ಆದರೆ ಈಗ ಗ್ರಾಮೀಣ ಪ್ರದೇಶದಲ್ಲಿ ಚಿರತೆಗಳ ಕಾಟ ಹೆಚ್ಚುತ್ತಿದೆ.
ಈ ಹಿಂದೆ ತಿಪಟೂರು ತಾಲೂಕಿನಲ್ಲಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿತ್ತು. ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್, ತಿಪಟೂರು ತಾಲೂಕು ಸೇರಿ ಇತರೆ ಭಾಗಗಳಲ್ಲಿ ಚಿರತೆ ಕಾಟ ದಿಂದ ಜನರು ನೊಂದಿದ್ದರು. ಕೊರಟಗೆರೆ ತಾಲೂಕಿನಲ್ಲಿ ಇತ್ತೀಚೆಗೆ 2 ದಿನಗಳಲ್ಲಿ 3 ಚಿರತೆ ಸೆರೆ ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು ಬೇರೆಕಡೆ ಸ್ಥಳಾಂತರಿಸಿದ್ದರು.
ಆರು ವರ್ಷಗಳಲ್ಲಿ ಮೂರು ಬಾರಿ ಚಿರತೆ ನಗರಕ್ಕೆ ಬಂದು ಜನರಲ್ಲಿ ಭಯ ಉಂಟುಮಾಡಿದೆ. ನಗರದ ಸಿದ್ಧಾರ್ಥ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ನುಗ್ಗಿದ್ದ ಚಿರತೆಗಳು ಅಲ್ಲಿನ ವಿದ್ಯಾರ್ಥಿಗಳು ಮತ್ತು ನಗರದ ನಾಗರಿಕರನ್ನು ಬೆಚ್ಚಿ ಬೀಳುವಂತೆ ಮಾಡಿದ್ದವು. ಆ ನಂತರ ಹನುಮಂತಪುರದಲ್ಲಿ ಚಿರತೆ ಕಂಡು ಬಂದಿತ್ತು. 2018ರ ಜ.20ರಂದು ತುಮಕೂರಿನ ಜಯನಗರದ ಮನೆಗೆ ಚಿರತೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ರಂಗನಾಥ್ ಮನೆಗೆ ದಿಢೀರನೆ ನುಗ್ಗಿದ ಪರಿಣಾಮ ಆತಂಕಗೊಂಡ ಅತ್ತೆ, ಸೊಸೆ ಮನೆಯ ಬಾತ್ ರೂಂನಲ್ಲಿ ಸೇರಿಕೊಂಡು ಪ್ರಾಣ ಉಳಿಸಿ ಕೊಂಡಿದ್ದರು. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಾತ್ ರೂಂ ಕಿಟಕಿ ಹೊಡೆದು ಅತ್ತೆ ಸೊಸೆಯನ್ನು ರಕ್ಷಿಸಿದ್ದರು. ಸತತ ಕಾರ್ಯಚರಣೆ ನಡೆಸಿ ಚಿರತೆಗೆ ಅರಿಳಿಕೆ ಮದ್ದು ನೀಡಿ ಮನೆಯೊಳಗೆ ಅಡಗಿ ಕುಳಿತಿದ್ದ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
-ಚಿ.ನಿ. ಪುರುಷೋತ್ತಮ್