ಪಾಂಡವಪುರ: ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ರೈತರ ಬದಲಿಗೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ.
ಅಧಿಕಾರಿಗಳು ದಲ್ಲಾಳಿಗಳು ಸರಬರಾಜು ಮಾಡುವ ರಾಗಿಯನ್ನು ಹೆಚ್ಚಾಗಿ ಖರೀದಿಸುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾರೆ. ಜತೆಗೆ ದಲ್ಲಾಳಿಗಳ ನೀಡುವ ಕಮಿಷನ್ ಆಸೆಗೆ ಜೋತುಬಿದ್ದು, ಖರೀದಿ ಕೇಂದ್ರದ ಸುತ್ತಲೂ ದಲ್ಲಾಳಿಗಳನ್ನು ತುಂಬಿಕೊಂಡು ರಾಗಿ ಖರೀದಿ ಕೇಂದ್ರವನ್ನು ದಲ್ಲಾಳಿಗಳ ಪಾಲಾಗಿಸಿದ್ದಾರೆ.
ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳು ಲೋಡ್‌ಗಟ್ಟಲೇ ಸರಬರಾಜು ಮಾಡುತ್ತಿದ್ದು, ಕಲ್ಲು, ಮರಳು, ಅಕ್ಕಿ, ಗೋಧಿ ಮಿಶ್ರೀತ ರಾಗಿಯನ್ನು ರಾತ್ರೋ ರಾತ್ರಿ ಕರ್ನಾಟಕ ಸರ್ಕಾರ ಹೆಸರಿರುವ ಚೀಲಗಳಿಗೆ ಯಾವ ಅಧಿಕಾರಿಗಳಿಲ್ಲದೆ, ದಲ್ಲಾಳಿಗಳ ನೇತೃತ್ವದಲ್ಲಿ ತುಂಬುತ್ತಿರುವ ದೃಶ್ಯಗಳು ಖರೀದಿ ಕೇಂದ್ರದಲ್ಲಿ ಸರ್ವೆ ಸಾಮಾನ್ಯವಾಗಿದೆ ಎಂದು ತಿಳಿದು ಬಂದಿದೆ.
ನಿಯಮ ಗಾಳಿಗೆ ತೂರಿದ ಅಧಿಕಾರಿಗಳು: ಹಗಲು ವೇಳೆ ಮಾತ್ರ ರಾಗಿ ಖರೀದಿ ಮಾಡ ಬೇಕೆಂಬ ನಿಯಮವಿದ್ದರೂ ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿದ್ದಾರೆ. ಜತೆಗೆ ಅಧಿಕಾರಿಗಳ ಸಮ್ಮುಖದಲ್ಲಿ ರಾಗಿ ಖರೀದಿ ಮಾಡಬೇಕಿದ್ದರೂ, ಯಾವ ಅಧಿಕಾರಿಗಳು ಕೂಡ ಖರೀದಿ ಕೇಂದ್ರದಲ್ಲಿ ಇಲ್ಲವಾಗಿದ್ದಾರೆ. ಅಧಿಕಾರಿಗಳಿಲ್ಲದೇ ದಲ್ಲಾಳಿಗಳೇ ತಮಗಿಷ್ಟ ಬಂದಂತೆ ಕಳಪೆ ಗುಣಮಟ್ಟದ ರಾಗಿಯನ್ನು ಕರ್ನಾಟಕ ಸರ್ಕಾರದ ಚೀಲಗಳಿಗೆ ರಾತ್ರೋ ರಾತ್ರಿ ತುಂಬಿ ಚೀಲ ಪ್ಯಾಕ್ ಮಾಡಿ, ರಾತ್ರಿ ವೇಳೆಯಲ್ಲಿ ಸಾಗಣೆ ಮಾಡುತ್ತಿದ್ದಾರೆ.
ಜತೆಗೆ ದಲ್ಲಾಳಿಗಳಿಗೆ ಇಂತಿಷ್ಟು ಚೀಲಗಳನ್ನು ಮೊದಲೇ ನೀಡಿರುವ ಅಧಿಕಾರಿಗಳು, ಪರೋಕ್ಷವಾಗಿ ದಲ್ಲಾಳಿಗಳ ಪರವಾಗಿ ನಿಂತಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹ: ಖರೀದಿ ಕೇಂದ್ರದ ಮಾರಾಟ ಅಧಿಕಾರಿ ಲಿಂಗರಾಜು ಹಾಗೂ ಸಹಾಯಕ ಕಾರ್ತಿಕ್ ಸೇರಿದಂತೆ ಇತರೆ ಅಧಿಕಾರಿ ವರ್ಗ ದಲ್ಲಾಳಿಗಳ ಜತೆ ಶಾಮೀಲಾಗಿ, ರೈತರನ್ನು ವಂಚಿಸುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಹಾರೋಹಳ್ಳಿ ಪ್ರದೀಪ್, ಡೈಮಂಡ್ ರವಿ ಆಗ್ರಹಿಸಿದ್ದಾರೆ.