Advertisement

ಎನ್‌ಡಿಎ ಮಣಿಸಲು ಮಹತ್ವದ ಸಮಾಲೋಚನೆ

06:30 AM Sep 01, 2018 | Team Udayavani |

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಒಂದೇ ವೇದಿಕೆಯಡಿ ಬಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ವಿರುದ್ಧ ಹೋರಾಟ ನಡೆಸುವ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

Advertisement

ಈ ಮೂಲಕ ಉತ್ತರ ಭಾರತದಲ್ಲಿ ತನ್ನ ಪ್ರಾಬಲ್ಯ ಸಾಧಿಸಿ ದಕ್ಷಿಣ ಭಾರತಕ್ಕೂ ಲಗ್ಗೆ ಇಡಲು ಮುಂದಾಗಿರುವ ಬಿಜೆಪಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರೇ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ನೇತೃತ್ವ ವಹಿಸುವಂತೆ ಚಂದ್ರಬಾಬು ನಾಯ್ಡು ಮನವಿ ಮಾಡಿಕೊಂಡಿದ್ದಾರೆ.

ದುರ್ಗಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲು ವಿಜಯವಾಡಕ್ಕೆ ತೆರಳಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಅಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾದ ಚಂದ್ರಬಾಬು ನಾಯ್ಡು, ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಸುಮಾರು 40 ನಿಮಿಷ ಇಬ್ಬರ ಮಧ್ಯೆ ಸಮಾಲೋಚನೆ ನಡೆದಿದೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಮಾಲೋಚನೆ ಕುರಿತು ಮಾಹಿತಿ ನೀಡಿರುವ ಆಂಧ್ರಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಭಯ ನಾಯಕರು ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಪರ್ಯಾಯ ರಾಜಕೀಯ ಶಕ್ತಿ ರೂಪಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದೆ.

ಎಚ್‌ಡಿಕೆ ನೇತೃತ್ವಕ್ಕೆ ಸಲಹೆ:
ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿದೆ. ಕೇರಳದಲ್ಲಿ ಎಡರಂಗ ನೇತೃತ್ವದ ಸರ್ಕಾರವಿದೆ. ಪ್ರಸ್ತುತ ಕರ್ನಾಟಕ ಈ ಎಲ್ಲ ರಾಜ್ಯಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿದೆ. ಹೀಗಾಗಿ, ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಯಡಿ ತರುವ ಕಾರ್ಯದ ನೇತೃತ್ವವನ್ನು ವಹಿಸಿಕೊಳ್ಳುವಂತೆ ಚಂದ್ರಬಾಬು ನಾಯ್ಡು ಅವರು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಮಾತುಕತೆ ಕುರಿತಂತೆ ಪ್ರತಿಕ್ರಿಯಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಯಡಿ ತರುವ ಕುರಿತು ಮಾತುಕತೆ ನಡೆಸಲಾಗಿದೆಯಾದರೂ ಕೆಲವೇ ನಿಮಿಷ ಮಾತ್ರ ಚರ್ಚಿಸಲಾಗಿದೆ. ಈ ಕುರಿತು ತೀರ್ಮಾನ ಕೈಗೊಳ್ಳಬೇಕಾದರೆ ಸುದೀರ್ಘ‌ ಸಮಾಲೋಚನೆಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಮತ್ತಷ್ಟು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್‌ ಮತ್ತು ತೆಲುಗುದೇಶಂ ಪಕ್ಷ ಸಹೋದರತ್ವದಿಂದ ಇರುವ ಪಕ್ಷಗಳು. ಕೇಂದ್ರದಲ್ಲಿ ಎನ್‌ಡಿಎ ಸೋಲಿಸುವುದು ಎರಡೂ ಪಕ್ಷಗಳ ಸಮಾನ ಉದ್ದೇಶವಾಗಿದೆ. ನಮ್ಮ ಗುರಿಯೂ ಇದೇ ಆಗಿದೆ. ಈಗಾಗಲೇ ನಾವು ಹಲವು ಬಾರಿ ಈ ಕುರಿತು ಚರ್ಚಿಸಿದ್ದು, ಶುಕ್ರವಾರದ ಮಾತುಕತೆ ಅದರ ಮುಂದುವರಿದ ಭಾಗವಾಗಿದೆ ಎಂದರು.

ಮುಂದಿನ ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಮುಂದಿನ ಪ್ರಧಾನಿ ಯಾರು ಎಂಬುದು ಮುಖ್ಯವಲ್ಲ. ನಂತರದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸುವುದು ಜೆಡಿಎಸ್‌ ಮತ್ತು ತೆಲುಗುದೇಶಂ ಪಕ್ಷಗಳ ಸಾಮಾನ್ಯ ಅಜೆಂಡಾ. ಆ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾದೇಶಿಕ ಪಕ್ಷಗಳು ಜತೆ ಸೇರುವ ನಿರೀಕ್ಷೆಯಿದೆ. ಆ ನಿಟ್ಟಿನಲ್ಲಿ ಮಾತುಕತೆ ಮುಂದುವರಿಸಲಾಗುವುದು.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next