ಮೈಸೂರು: ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಧೀಮಂತ, ಪ್ರಾಮಾಣಿಕ ವ್ಯಕ್ತಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅಗಲಿಕೆ ಕೇವಲ ಬಿಜೆಪಿಗೆ ಮಾತ್ರವಲ್ಲದೆ ದೇಶಕ್ಕೆ ದೊಡ್ಡ ನಷ್ಟ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಸಂತಾಪ ವ್ಯಕ್ತಪಡಿಸಿದರು.
ವಾಜಪೇಯಿ ದೇಶ ಕಂಡ ಅಪ್ರತಿಮ ರಾಜಕಾರಣಿ, ಕವಿ, ಲೇಖಕ, ಪತ್ರಕರ್ತ ಹಾಗೂ ಪ್ರಚಂಡ ಭಾಷಣಕಾರರಾಗಿದ್ದರು. ಐದು ದಶಕಗಳ ತಮ್ಮ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.
ಪ್ರಧಾನಿಯಾಗಿ 13 ತಿಂಗಳ ಅಧಿಕಾರದಿಂದ ಕೆಳಗಿಳಿಯುವ ಸಂದರ್ಭ ಲೋಕಸಭೆಯಲ್ಲಿ ಮಾಡಿದ ಭಾಷಣದ ವೇಳೆ “ಇಲ್ಲಿ ತಮ್ಮ ವೋಟು ಮಾರಿಕೊಳ್ಳಲು ತುಂಬಾ ಜನ ತಯಾರಿದ್ದರೂ, ಖರೀದಿ ಮಾಡಲು ನಾನು ತಯಾರಿರಲಿಲ್ಲ’ ಎಂಬ ಮಾತುಗಳನ್ನಾಡಿದ್ದರು. ಅವರ ಆ ಮಾತು ಪ್ರಜಾಪ್ರಭುತ್ವದ ಜೀವಾಳ.
ವಾಜಪೇಯಿ ಮೈಸೂರಿನ ಜೆಎಸ್‌ಎಸ್ ಕಾರ್ಯಕ್ರಮಕ್ಕೆ ಬಂದಾಗ ನಾನು ಶಾಸಕನಾಗಿದ್ದೆ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅವರು ಸಕ್ರಿಯ ರಾಜಕಾರಣದಿಂದ ದೂರವಾದ ನಂತರವೂ ಅನೇಕ ಬಾರಿ ಅವರನ್ನು ಭೇಟಿಯಾಗಲು ಯತ್ನಿಸಿ, ಅವರ ನಿವಾಸಕ್ಕೂ ಹೋಗಿದ್ದೆ.
ಆದರೆ ಅವರ ಅನಾರೋಗ್ಯದ ಕಾರಣ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತೇನೆ. ಚಾಮುಂಡೇಶ್ವರಿ ದೇವಿ ಆತ್ಮಕ್ಕೆ ಮುಕ್ತಿ ದೊರಕಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದರು.