ಮಾಗಡಿ: ಪ್ರತಿ ಸೋಮವಾರ ತಾಲೂಕು ಕಚೇರಿಯಲ್ಲಿ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅರ್ಜಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಿದಂತೆ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನಸಂಪರ್ಕ ಸಭೆ ಕರೆಯಲು ತೀರ್ಮಾನ ಮಾಡಿದ್ದೇವೆ. ಈ ಮೂಲಕ ಗ್ರಾಮೀಣ ಜನರ ಸಮಸ್ಯೆಗಳನ್ನು ತಗ್ಗಿಸಬೇಕೆಂದಿದ್ದೇನೆ ಎಂದರು.
ಜಮೀನು ಮಂಜೂರಾತಿ: ಬಗರ್ ಹುಕ್ಕಂ ಸಾಗುವಳಿ ಸಭೆ ನಡೆಸುತ್ತಿದ್ದೇವೆ. ಎಷ್ಟು ಗೋಮಾಳ ಭೂಮಿಯಿದೆ.ಹಿಂದೆ ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮಂಜೂರಾದ ರೈತರಿಗೆ ಖಾತೆ ಆಗಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸುತ್ತೇವೆ. ಹೊಸದಾಗಿ ಅರ್ಜಿ ಸಲ್ಲಿಸಿರುವವರಿಗೆ ಜಮೀನು ಆಧಾರದ ಮೇಲೆ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಸ್ಮಶಾನ ಜಾಗ ಗುರುತಿಸಲು ಸೂಚನೆ: ಜಿಲ್ಲಾ ಕೆಡಿಪಿ ಸಭೆಯಲ್ಲಿ ಡೀಸಿ ಮುಖೇನಾ ತಹಶೀಲ್ದಾರ್ ಮೂಲಕ ಅಧಿಕಾರಿಗಳ ಹಾಗೂ ಸರ್ವೇಯರ್ ಸಭೆಯನ್ನು ಕರೆದು ಅವರಿಗೆ ಜವಾಬ್ದಾರಿ ನೀಡಿ ಆದಷ್ಟು ಬೇಗ ಸ್ಮಶಾನ ಜಾಗ ಗುರುತಿಸಿ ಸರ್ವೇ ಮಾಡಿಸಿ, ಆಯಾ ಗ್ರಾಪಂಗೆ ವಶಕ್ಕೆ ನೀಡುವಂತೆ ತಾಕೀತು ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ನೂರಾರು ಮಂದಿ ರೈತರು ತಮ್ಮ ಸಮಸ್ಯೆಗಳ ಸರಮಾಲೆಯನ್ನೇ ಹೊತ್ತು ಶಾಸಕರ ಮುಂದೆಯೇ ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಖಾತೆ, ರಸ್ತೆ, ಸ್ಮಶಾನ ಸಮಸ್ಯೆಗಳ ಕುರಿತು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಜಿಪಂ ಸದಸ್ಯ ದಿವ್ಯಾ ಗಂಗಾಧರ್, ತಾಪಂ ಸದಸ್ಯ ನರಸಿಂಹಮೂರ್ತಿ, ಗ್ರಾಪಂ ಸದಸ್ಯರಾದ ಮಂಜುನಾಥ್, ಮುದ್ದಹನುಮೇ ಗೌಡ, ಕಲ್ಲೂರು ಶಿವಣ್ಣ, ಚಿಕ್ಕಕಲ್ಯಾ ರಮೇಶ್, ರಂಗಣ್ಣಿ, ನಾಗರಾಜು, ರೇವಣ್ಣ, ಕಲ್ಕರೆ ಶಿವಣ್ಣ, ಮೂರ್ತಿ, ಗವಿನಾಗಮಂಗಲ ಶಿವಣ್ಣ, ಪುರಸಭಾ ಮಾಜಿ ಸದಸ್ಯ ಎಂ.ಎನ್.ಮಂಜುನಾಥ್, ಶಿವಕುಮಾರ್, ತಹಶೀಲ್ದಾರ್ ಎನ್.ರಮೇಶ್, ರೆವಿನ್ಯೂ ಇನ್ಸ್‌ಫೆಕ್ಟರ್ ಶಿವರುದ್ರಯ್ಯ, ರಮೇಶ್, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.