ಬೆಂಗಳೂರು: ಯಾವುದೇ ಅಪರಾಧ ಸಂಭವಿಸಬಹುದು ಎನ್ನುವ ಬಗ್ಗೆ ಮಾಹಿತಿ ಇದ್ದ ಮಾತ್ರಕ್ಕೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಅದರ ಎಫ್ಐಆರ್ ದಾಖಲಿಸುವುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಹೇಳಿದೆ.
ಮಾನವ ಕಳ್ಳಸಾಗಣೆಗಾಗಿ ನಕಲಿ ಪಾಸ್‌ಪೋರ್ಟ್ ಸಿದ್ಧಪಡಿಸಿದ ಆರೋಪದಲ್ಲಿ ತಮಗೆ ಅಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸುವಂತೆ ಕೋರಿ ಇಕ್ಬಾಲ್ ಅಹ್ಮದ್ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ಸಂಭಾವ್ಯ ಅಪರಾಧ ಕೃತ್ಯದ ಬಗ್ಗೆ ದೂರವಾಣಿ ಮೂಲಕ ಮಾಹಿತಿ ಪಡೆದ ಸಂದರ್ಭದಲ್ಲಿ ಆ ಕುರಿತು ಪೊಲೀಸ್ ಅಧಿಕಾರಿ ಎಫ್ಐಆರ್ ದಾಖಲಿಸುವುದು ಕಡ್ಡಾಯವೇನಲ್ಲ. ಮಾಹಿತಿ ಪಡೆದ ಕೂಡಲೇ ಅಪರಾಧ ಕೃತ್ಯ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಪೊಲೀಸ್ ಅಧಿಕಾರಿಯ ಕರ್ತವ್ಯವಾಗಿರುತ್ತದೆ. ಒಂದೊಮ್ಮೆ ಅವರ ಸಮ್ಮುಖದಲ್ಲಿ ಅಪರಾಧ ಕೃತ್ಯ ನಡೆದರೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 41 ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಅನಂತರ ಕಾಗ್ನಿಜಬಲ್ ಅಪರಾಧ ಕೃತ್ಯ ನಡೆದಿರುವ ಸನ್ನಿವೇಶದಲ್ಲಿ (ಸಿಆರ್‌ಪಿಸಿ) ಸೆಕ್ಷನ್ 154ರ ಪ್ರಕಾರ ಎಫ್ಐಆರ್ ದಾಖಲಿಸಬೇಕಾಗುತ್ತದೆ ಎಂದು ಆದೇಶದಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಸೆಲ್ಟೋಸ್, ಸಾನೆಟ್ ಫೇಸ್‌ಲಿಫ್ಟ್ ; 2022ರ ಹೊಸ ವರ್ಷನ್; ಸಾನೆಟ್ ಎರಡು ಬಣ್ಣಗಳಲ್ಲಿ ಲಭ್ಯ
ಶಿಕ್ಷೆ ರದ್ದು-ನಿರಾಕರಣೆ
ಆರೋಪಿ ಪರ ವಕೀಲರು ಆರೋಪ ಮತ್ತು ಅಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸುವಂತೆ ಕೋರಿದ್ದರು. ಈ ವಾದ ತಿರಸ್ಕರಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.