Advertisement

Udupi: ಇಂಗ್ಲಿಷ್‌ ಕಲಿಕೆ ಗುಣಮಟ್ಟ ಅರಿಯಲು ಶಾಲೆಗೆ ತಜ್ಞರ ಭೇಟಿ

01:33 PM Jul 29, 2024 | Team Udayavani |

ಉಡುಪಿ: ಸರಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಕಲಿಕೆಗೆ ಪೂರಕವಾಗಿ ಆಂಗ್ಲ ಮಾಧ್ಯಮ ತೆರೆಯಲು ಅನುಮತಿಸಿರುವ
ಬೆನ್ನಲ್ಲೇ ಆಂಗ್ಲ ಮಾಧ್ಯಮ ಭೋಧನೆಯ ಪರಿಶೀಲನೆ, ಕಲಿಕೆಯ ಗುಣಮಟ್ಟ ಅರಿಯಲು ವಿಷಯ ತಜ್ಞರ ತಂಡ ಶಾಲೆಗಳಿಗೆ ಭೇಟಿ ನೀಡಲಿವೆ.

Advertisement

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಆಂಗ್ಲ ಭಾಷೆಗೆ ಸಂಬಂಧಿಸಿ ಅನುಪಾಲನೆ, ಮಾರ್ಗದರ್ಶನ ಹಾಗೂ ಸಹಕಾರದ (ಅಕಾಡೆಮಿಕ್‌ ಸಪೋರ್ಟ್‌) ಪರಿಕಲ್ಪನೆಯಡಿ ಜಿಲ್ಲಾಮಟ್ಟದ ವಿಷಯ ತಜ್ಞರನ್ನು ಒಳಗೊಂಡ ಸಂಪನ್ಮೂಲ ತಂಡ(ಡಿಆರ್‌ಟಿ)ರಚನೆ ಮಾಡಿದೆ.ಅದರ ಅಡಿಯಲ್ಲಿ ಬ್ಲಾಕ್‌ ಸಂಪನ್ಮೂಲ ತಂಡ ತಮ್ಮ ವ್ಯಾಪ್ತಿಯ ಶಾಲೆಗೆ ಭೇಟಿ ನೀಡಿ, ಅಲ್ಲಿನ
ಆಂಗ್ಲ ಭಾಷೆಯ ಬೋಧನೆ, ವಿದ್ಯಾರ್ಥಿಗಳ ಕಲಿಕೆ ಇತ್ಯಾದಿಗಳನ್ನು ಪರಿಶೀಲಿಸಿ ರಾಜ್ಯಕ್ಕೆ ವರದಿ ಸಲ್ಲಿಸಲಿದೆ.

ತಂಡ ರಚನೆ
ಡಿಆರ್‌ಟಿ ಮೇಲುಸ್ತುವಾರಿಯಲ್ಲಿ ಪ್ರತಿ ತಾಲೂಕಿನಲ್ಲೂ 5 ಸದಸ್ಯರನ್ನು ಒಳಗೊಂಡಿರುವ ಬ್ಲಾಕ್‌ ಸಂಪನ್ಮೂಲ ತಂಡ(ಬಿಆರ್‌ಟಿ) ರಚಿಸಲಾಗುತ್ತದೆ. ಬ್ಲಾಕ್‌ ಮಟ್ಟದ ಇಂಗ್ಲಿಷ್‌ ನೋಡಲ್‌ ಅಧಿಕಾರಿ, ಪ್ರೌಢಶಾಲಾ ಶಿಕ್ಷಕ, ಬಿಆರ್‌ಪಿ(ಬ್ಲಾಕ್‌ ರಿಸೋರ್ಸ್‌ ಪರ್ಸನ್‌), ಸಿಆರ್‌ಪಿ(ಕ್ಲಸ್ಟರ್‌ ರಿಸೋರ್ಸ್‌ ಪರ್ಸನ್‌) ಹಾಗೂ ಆಂಗ್ಲ ಮಾಧ್ಯಮ ವಿಷಯದಲ್ಲಿ ತರಬೇತಿ ಪಡೆದ ಶಿಕ್ಷಕ ಸಹಿತ 5 ಮಂದಿಯನ್ನು ಈ ತಂಡ ಒಳಗೊಂಡಿರುತ್ತದೆ. ತಂಡವು ಶಾಲೆಗೆ ಭೇಟಿ ನೀಡಲು ಡಯಟ್‌ ಪ್ರಾಂಶುಪಾಲರು ಹಾಗೂ ಜಿಲ್ಲಾ ಉಪನಿರ್ದೇಶಕರು ವೇಳಾಪಟ್ಟಿ ಸಿದ್ಧಪಡಿಸಲಿದ್ದಾರೆ.

ನಿರಂತರ ಭೇಟಿ
ಈ ತಂಡವು ಮೊದಲ ಹಂತದಲ್ಲಿ ತಮ್ಮ ವ್ಯಾಪ್ತಿಯ 5 ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಇಂಗ್ಲಿಷ್‌ ಕಲಿಕೆ ಮತ್ತು ಗುಣಮಟ್ಟವನ್ನು ಪರಿಶೀಲಿಸಲಿದೆ. ಅನಂತರ ಅದರಲ್ಲಿಯೇ 3 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪುನಃ ಭೇಟಿ ನೀಡಿ ಶೈಕ್ಷಣಿಕ ಪ್ರಗತಿಯನ್ನು ದಾಖಲಿಸಲಿದೆ. ಇಂಗ್ಲಿಷ್‌ ಭಾಷೆ ಕಲಿಕೆಯಲ್ಲಿ ಹಿಂದುಳಿದ ಶಾಲೆಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಂಡು, ಸುಧಾರಣೆಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.

ಭೇಟಿಯ ಸಂದರ್ಭದಲ್ಲಿ ಏನೇನು ಮಾಡಲಿದ್ದಾರೆ?
ವಿಷಯ ತಜ್ಞರು ತಮ್ಮ ಅಧ್ಯಯನಗಳ ಆವಿಷ್ಕಾರದ ಆಧಾರದಲ್ಲಿ ಶಾಲೆಗಳಲ್ಲಿ ಇಂಗ್ಲಿಷ್‌ಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಡಯಟ್‌ ಮೂಲಕ ಆಂಗ್ಲ ಭಾಷ ಬೋಧನೆಗೆ ತರಬೇತಿ ಪಡೆದವರೇ ಬೋಧಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆ ಹಾಗೂ ಬರವಣಿಗೆ ಕೌಶಲ್ಯ ವೃದ್ಧಿಗೆ ಶಿಕ್ಷಕರ ಮೂಲಕ ವಿನೂನತ ಪ್ರಯೋಗ ಸಹಿತ ವಿವಿಧ ಸಲಹೆ ನೀಡಲಿದ್ದಾರೆ.

Advertisement

ತಂಡದ ಜವಾಬ್ದಾರಿಗಳೇನು?
ಶಾಲಾ ಹಂತದ ತರಗತಿ ಬೋಧನೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಸಣ್ಣಸಣ್ಣ ಕ್ರಿಯಾ ಸಂಶೋಧನೆ(ಆ್ಯಕ್ಷನ್‌ ರಿಸರ್ಚ್‌)ಕೈಗೊಳ್ಳುವಂತೆ ಪ್ರೇರೇಪಿಸುವುದು, ಆಂಗ್ಲ ಭಾಷಾ ಬೋಧನೆ ಸುಧಾರಣೆಗೆ ವರ್ಷಕ್ಕೆ 40ರಿಂದ 50 ಶಿಕ್ಷಕರ ಸಣ್ಣ ಗುಂಪು ರಚಿಸಿ ಆನ್‌ಲೈನ್‌ ಮೂಲಕ ವೃತ್ತಿಪರ ಅಭಿವೃದ್ಧಿ ಚಟುವಟಿಕೆ ನಡೆಸುವುದು. ಶಾಲೆಯ ಇತರ ಶಿಕ್ಷಕರು ಹಾಗೂ ಮಕ್ಕಳ ಪೋಷಕರನ್ನು ಇದರಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನ ನಡೆಸುವುದಾಗಿದೆ.

ಆಂಗ್ಲ ಭಾಷಾ ತರಬೇತಿ ಪಡೆದ ಶಿಕ್ಷಕರು ವಿದ್ಯಾರ್ಥಿಗಳಿಗೆ ಎಷ್ಟು ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿಯಲು ಹಾಗೂ ಇನ್ನಷ್ಟು ಕೌಶಲಾಧಾರಿತ ಚಟುವಟಿಕೆಗಳನ್ನು ಒದಗಿಸಲು ಈ ರೀತಿಯ ತಂಡ ರಚನೆ ಮಾಡಲಾಗಿದೆ. ಶಾಲೆಗಳಿಗೆ ನಿರಂತರ ಭೇಟಿ ನೀಡಿ ವರದಿ ಸಲ್ಲಿಸಲಿದ್ದಾರೆ.
*ವಿ.ಸುಮಂಗಳಾ,
ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ

*ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next