ಕನ್ನಡದಲ್ಲಿ ಈಗೀಗ ಒಂದಷ್ಟು ಹೊಸ ಪ್ರಯತ್ನಗಳು ನಡೆಯುತ್ತಲೇ ಇವೆ. ಆ ಸಾಲಿಗೆ “ಹೀಗೊಂದು ದಿನ’ ಚಿತ್ರವೂ ಒಂದು. ಇಲ್ಲಿ ಸಿಂಧು ಲೋಕನಾಥ್ ಮತ್ತು ಇತರೆ ಕಲಾವಿದರನ್ನು ಹೊರತುಪಡಿಸಿದರೆ, ಉಳಿದವರೆಲ್ಲರೂ ಹೊಸಬರೇ. ಇಲ್ಲೊಂದು ಪ್ರಯತ್ನ ನಡೆದಿದೆ. ಅದು, ಅನ್‌ಕಟ್ ಫಿಲ್ಮ್ ಎಂಬ ಪ್ರಯೋಗ. “ಅನ್‌ಕಟ್ ಮೂವಿ’ ಅಂದರೆ, ಒಂದು ದೃಶ್ಯವನ್ನು ಒಂದೇ ಶಾಟ್‌ನಲ್ಲಿ ತೆಗೆದಿರೋದು.
ಹಾಗಂತ ಇಡೀ ಸಿನಿಮಾವನ್ನು ಒಂದೇ ಶಾಟ್‌ನಲ್ಲಿ ತೆಗೆಯಲಾಗಿದೆ ಅಂದುಕೊಳ್ಳುವಂತಿಲ್ಲ. ಆ ಸೀನ್‌ನಲ್ಲಿ ಬರುವ ಕಲಾವಿದರಾಗಲಿ, ಕ್ಯಾಮೆರಾವಾಗಲಿ, ಎಲ್ಲೂ ಆ್ಯಂಗಲ್ ಚೇಂಜ್ ಆಗೊದಿಲ್ಲ. ಕ್ಯಾಮೆರಾ ಕಟ್ ಆಗಲ್ಲ, ಡೈಲಾಗ್ ಕಟ್ ಆಗಲ್ಲ. ಸಿನಿಮಾ ನೋಡಿದರೆ, ಇಡೀ ಸಿನಿಮಾನೇ ಒಂದೇ ಶಾಟ್‌ನಲ್ಲಿ ತೆಗೆದಂತೆ ಭಾಸವಾಗುತ್ತೆ. ಅನ್‌ಕಟ್ ಮೂವಿ ಅಂತ ಉದಾಹರಿಸುವುದಾದರೆ, ಮನೆಯಿಂದ ರೆಡಿಯಾಗಿ ಅಪ್ಪ,ಅಮ್ಮನ ಮಾತನಾಡಿಸಿ ಹೊರಗೆ ಬಂದು, ಅಲ್ಲೆಲ್ಲಾ ಸುತ್ತಾಡಿ, ಬಸ್ ಸ್ಟಾಪ್‌ಗೆ ಹೋಗಿ, ಬಸ್ ಹತ್ತೋದು, ಇಳಿಯೋದು, ಮಾತಾಡೋದು ಇವೆಲ್ಲವನ್ನೂ ಒಂದೇ ಶಾಟ್‌ನಲ್ಲಿ ತೆಗೆದಿರುವಂತೆ ಫೀಲ್ ಆಗುತ್ತೆ. ಹೀಗಂತ ವಿವರ ಕೊಡುತ್ತಾರೆ ನಿರ್ದೇಶಕ ವಿಕ್ರಮ್ ಯೋಗಾನಂದ್.
ವಿಕ್ರಮ್ ಯೋಗಾನಂದ್‌ಗೆ ಇದು ಮೊದಲ ಚಿತ್ರ. ಹೊಸದೇನಾದರೂ ಮಾಡಬೇಕು ಅಂತ ಯೋಚಿಸಿದಾಗ ಅವರಿಗೆ ಅನ್‌ಕಟ್ ಐಡಿಯಾ ಬಂದು ಈ ಚಿತ್ರ ಮಾಡಿದ್ದಾರಂತೆ. “ಚಿತ್ರದ ಕಥೆ ಎರಡು ಗಂಟೆಯಲ್ಲಿ ನಡೆಯುವಂಥದ್ದು. ಸಿನಿಮಾ ಕೂಡ ಎರಡು ಗಂಟೆ ಅವಧಿಯಲ್ಲೇ ಇರುವಂಥದ್ದು. ಒಬ್ಬ ಹುಡುಗಿ ಒಂದು ಗುರಿ ಇಟ್ಟುಕೊಂಡು ಮನೆಯಿಂದ ಹೊರಗೆ ಹೋಗುತ್ತಾಳೆ, ಆ ಮಧ್ಯೆ ಅವಳಿಗೆ ಏನೆಲ್ಲಾ ಎದುರಾಗುತ್ತೆ, ಅವಳ ಕೆಲಸ ಆಗುತ್ತೋ, ಇಲ್ಲವೋ, ಅಲ್ಲಿ ಆಕೆ ಏನೇನು ಕಲಿಯುತ್ತಾಳೆ ಅನ್ನೋದೇ ಕಥೆ’ ಎಂದು ವಿವರ ಕೊಡುತ್ತಾರೆ ವಿಕ್ರಮ್ ಯೋಗಾನಂದ್.
ಇನ್ನು, “ಲವ್ ಇನ್ ಮಂಡ್ಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಸಿಂಧು ಲೋಕನಾಥ್ ಇತ್ತೀಚೆಗೆ ಸುದ್ದಿಯಾಗಿದ್ದು, “ಲೂಸ್ ಕನೆಕ್ಷನ್’ ಎಂಬ ವೆಬ್‌ಸೀರಿಸ್‌ನಲ್ಲಿ. ಅದು ಬಿಟ್ಟರೆ, ಈ ಚಿತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. “ಕಳೆದ ವರ್ಷ ಶುರುವಾಗಿದ್ದ ಈ ಚಿತ್ರ ಈಗ ತೆರೆಗೆ ಬರಲು ರೆಡಿಯಾಗಿದೆ. ವಿಕಾಸ್, ವಿಕ್ರಮ್ ಬಂದು ಕಥೆ ಹೇಳಿದಾಗ, ಹೊಸತನ ಇದೆ ಎನಿಸಿತು. ಚಾಲೆಂಜಿಂಗ್ ಇದ್ದುದರಿಂದ ಮಾಡಿದ್ದೇನೆ. ಇದಕ್ಕಾಗಿ ಸಾಕಷ್ಟು ರಿಹರ್ಸಲ್ ಮಾಡಲಾಗಿದೆ. ಅಂದಹಾಗೆ, ಇದೊಂದು ಹಾಸ್ಯ ಇಟ್ಟುಕೊಂಡು ಮಾಡಿರುವ ಚಿತ್ರ. ಕಥೆ ಬೆಳಗ್ಗೆ 6 ರಿಂದ 8 ಗಂಟೆಯವರೆಗೆ ನಡೆಯಲಿದೆ. ಹಾಗಾಗಿ ಬೆಳಗಿನ ಜಾವ 6 ಗಂಟೆಯಿಂದ 8 ಗಂಟೆಯವರೆಗೆ ಮಾತ್ರ ಶೂಟಿಂಗ್ ನಡೆಯುತ್ತಿತ್ತು. ಕಥೆ ಕೂಡ ಆ ವಾತಾವರಣ ಬಯಸುತ್ತಿತ್ತು. ಆ ಟ್ರಾಫಿಕ್, ಆ ಲೈಟ್ಸ್ ಎಲ್ಲವೂ ಪೂರಕವಾಗಿರುತ್ತಿತ್ತು. ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ’ ಎನ್ನುತ್ತಾರೆ ಸಿಂಧು.
ಚಿತ್ರಕ್ಕೆ ವಿಕಾಸ್ ಕಥೆ ಬರೆದಿದ್ದಾರೆ. ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಮಿತ್ರ, ಗುರುಪ್ರಸಾದ್ ಮತ್ತು “ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ’ ಪ್ರವೀಣ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಭಿಲಾಶ್ ಗುಪ್ತ ಸಂಗೀತ ನೀಡಿದ್ದು, ಅವರಿಗಿದು ಮೊದಲ ಅನುಭವ. ನಿರ್ದೇಶಕರೇ ಇಲ್ಲಿ ಕ್ಯಾಮೆರಾ ಹಿಡಿದಿರುವುದು ಇನ್ನೊಂದು ವಿಶೇಷ.