Advertisement

ಕೀಟ ಬಾಧೆಯಿಂದ ಬೆಳೆ ಉಳಿಸಲು ಬಂದಿದೆ ಯಂತ್ರ

04:47 PM Dec 01, 2018 | Team Udayavani |

ನರಗುಂದ: ಅಲ್ಪ ಮಳೆಗಾಲದಲ್ಲೂ ಅಷ್ಟಿಷ್ಟು ಬೆಳೆ ತೆಗೆಯುವ ರೈತನಿಗೆ ಕೀಟಗಳು ಬೆನ್ನಿಗೆ ಅಂಟಿಕೊಂಡ ಬೇತಾಳವಿದ್ದಂತೆ. ಅಂತಹ ಕೀಟ ಬಾಧೆಯಿಂದ ಕೃಷಿ ಬೆಳೆಗಳನ್ನು ಉಳಿಸಲು ಕೃಷಿ ಇಲಾಖೆ ಹೊಸದಾಗಿ ಸ್ವಯಂ ಚಾಲಿತ ಕೀಟನಾಶಕ ಯಂತ್ರವನ್ನು ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.

Advertisement

ಇತ್ತೀಚೆಗೆ ಬಹುತೇಕ ಕೃಷಿ ಬೆಳೆಗಳಲ್ಲಿ ಕೀಟರೋಗ ಬಾಧೆಯು ಹೆಚ್ಚಾಗಿ ಕಂಡುಬರುತ್ತಿದೆ. ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಹೆಚ್ಚಿನ ಕೃಷಿ ವಿಸ್ತೀರ್ಣದಲ್ಲಿ ಬೆಳೆದ ಕಡಲೆ ಬೆಳೆಯಲ್ಲಿ ಕೂಡ ಕೀಟರೋಗ ಬಾಧೆ ಕಂಡುಬಂದಿದೆ. ರೈತರು ನೇರವಾಗಿ ರಸಾಯನಿಕ ಔಷಧಿಗಳ ಸಿಂಪಡಣೆಗೆ ಹೋಗುವ ಮೊದಲು ಸಮಗ್ರ ಪೀಡೆ ನಿರ್ವಹಣೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಆತ್ಮಾ ಯೋಜನೆ ಅಡಿಯಲ್ಲಿ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಇವರ ಮಾರ್ಗದರ್ಶನದಲ್ಲಿ ವಿನೂತನ ಕ್ರಮಕ್ಕೆ ಮುಂದಾಗಿದೆ.

ದಾವಣಗೆರೆ ಯಂತ್ರ: ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ಲಕ್ಷ್ಮೀ  ಏಜನ್ಸಿಸ್‌ ಕಂಪನಿಯ ಸೋಲಾರ್‌ ಕೀಟನಾಶಕ ಯಂತ್ರಗಳನ್ನು ರೈತರಿಗೆ ಪರಿಚಯಿಸಲಾಗಿದೆ. 4,875 ರೂ. ಬೆಲೆಯ ಯಂತ್ರವನ್ನು ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಬನಹಟ್ಟಿ ಗ್ರಾಮದ ಕೃಷಿ ಜಮೀನಿನಲ್ಲಿ ಅಳವಡಿಸಲಾಗಿದೆ.

ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಅವರು ಕೃಷಿ ಜಮೀನುಗಳಿಗೆ ಭೇಟಿ ನೀಡಿ ಸಾಂಕೇತಿಕವಾಗಿ ಸೋಲಾರ್‌ ಟ್ರ್ಯಾ ಪ್‌ ಅಳವಡಿಸುವ ಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ವಿವರಿಸಿದ್ದಾರೆ. ನಬಾರ್ಡ್‌ ಸಂಸ್ಥೆ ಪ್ರತಿನಿಧಿ ಶ್ರೀನಿವಾಸ, ಆತ್ಮಾ ಯೋಜನೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಬಸಲಿಂಗಪ್ಪ ಹಾಲವರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಶಿವಾನಂದ ಸಾಠೆ, ಬನಹಟ್ಟಿ ಗ್ರಾಮದ ಫಲಾನುಭವಿ ರೈತರು, ಕಂಪನಿ ಪ್ರತಿನಿಧಿಗಳು ಇದ್ದರು.

ಪರಿಸರ ಸ್ನೇಹಿ ಯಂತ್ರ
ಪರಿಸರ ಸ್ನೇಹಿಯಾದ ಕಡಿಮೆ ವೆಚ್ಚದ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಯಂತ್ರವನ್ನು ಅಳವಡಿಸುವ ಸಂದರ್ಭದಲ್ಲಿ ಲಕ್ಷ್ಮೀ ಏಜನ್ಸಿಯ ಕರಿಬಸಪ್ಪ ಎಂ.ಜಿ. ಅವರು ಮಾಹಿತಿ ನೀಡಿ, ಹಗಲಿನಲ್ಲಿ ಸೂರ್ಯ ಪ್ರಕಾಶದಿಂದ ಚಾರ್ಜ್‌ ಆಗುವ ಯಂತ್ರವು ರಾತ್ರಿಯಾಗುತ್ತಿದ್ದಂತೆ ಸ್ವಯಂ ಚಾಲಿತವಾಗಿ ಬಲ್ಬ್ ಉರಿದು 10 ಘಂಟೆಯಷ್ಟೊತ್ತಿಗೆ ನಿಲ್ಲುತ್ತದೆ. ವಿಶೇಷ ಬೆಳಕಿಗೆ ಆಕರ್ಷಣೆಗೊಂಡ ಹಾರಾಡುವ ಕೀಟಗಳು ಕೆಳಗಿನ ಬುಟ್ಟಿಯಲ್ಲಿನ ದ್ರಾವಣದಲ್ಲಿ ಬಿದ್ದು ನಾಶವಾಗುತ್ತವೆ. ಈ ಯಂತ್ರವನ್ನು ಬಹತೇಕ ಎಲ್ಲ ಬೆಳೆಗಳಲ್ಲಿ ಅಳವಡಿಸಬಹುದಾಗಿದ್ದು, ಹಾರುವ ಕೀಟಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next