Advertisement

ಚಿದಾನಂದ ಮೂರ್ತಿಗೆ ಭಾವಪೂರ್ಣ ವಿದಾಯ

10:38 PM Jan 12, 2020 | Lakshmi GovindaRaj |

ಬೆಂಗಳೂರು: ಸಾಹಿತಿ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರಿಗೆ ಸರ್ಕಾರಿ ಗೌರವದೊಂದಿಗೆ ಭಾವಪೂರ್ಣ ವಿದಾಯ ಸಲ್ಲಿಸಲಾಯಿತು. ಯಾವುದೇ ಪೂಜಾ ವಿಧಿ ವಿಧಾನಗಳಿಲ್ಲದೇ ಭಾನುವಾರ ಸುಮನಹಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Advertisement

ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಚಿವ ವಿ.ಸೋಮಣ್ಣ, ಮಾಜಿ ಶಾಸಕ ಮುನಿರತ್ನ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಸೇರಿ ಹಲವು ಗಣ್ಯರು ಚಿದಾನಂದಮೂರ್ತಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆ ನೆರವೇರುತ್ತಿದ್ದಂತೆ “ಚಿದಾನಂದಮೂರ್ತಿ ಅಮರರಾಗಲಿ’, “ಸಿರಿಗನ್ನಡಂ ಗೆಲ್ಗೆ’ ಘೋಷಣೆಗಳ ಮೂಲಕ ವಿದಾಯ ಹೇಳಲಾಯಿತು.

ಭಾನುವಾರ ಬೆಳಗ್ಗೆ 10 ಗಂಟೆವರೆಗೂ ಹಂಪಿನಗರದ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌ ನಾಗಾಭರಣ, ನಟ ಚೇತನ್‌ ಸೇರಿ ಹಲವರು ಅಂತಿಮ ದರ್ಶನ ಪಡೆದರು. ನಂತರ ಹೂಗಳಿಂದ ಅಲಂಕೃತಗೊಂಡಿದ್ದ ವಾಹನದಲ್ಲಿ ಸುಮನಹಳ್ಳಿಯ ವಿದ್ಯುತ್‌ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು.

ಚಿದಾನಂದಮೂರ್ತಿಯವರ ಕುಟುಂ ಬಸ್ಥರು, ಬೆಂಬಲಿಗರು, ಅಭಿಮಾನಿಗಳು ಅಂತ್ಯಕ್ರಿಯೆ ವೇಳೆ ಹಾಜರಿದ್ದರು. ಪಿತೃ ವಿಯೋಗದ ಶೋಕದಲ್ಲಿದ್ದ ಹಿರಿಯ ಪುತ್ರ ವಿನಯಕುಮಾರ್‌ ಅವರು ಚಿದಾನಂದಮೂರ್ತಿ ಅವರ ಪಾದ ಮುಟ್ಟಿ ನಮಸ್ಕರಿಸಿ ಹಣೆಗೆ ಮುತ್ತಿಟ್ಟು ಭಾವುಕರಾದರು. 11 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನೆರವೇರಿತು.

ಬಳಿಕ ಮಾತನಾಡಿದ ವಿನಯ ಕುಮಾರ್‌, ನೋವಿನಲ್ಲಿ ನಮ್ಮ ಜತೆಗಿದ್ದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕೋಗಲೂರು ಜನತೆಯ ಕ್ಷಮೆ ಕೇಳುತ್ತೇನೆ. ತಂದೆ ಆಸೆಯನ್ನು ನಾನು ಪೂರೈಸಿದ್ದೇನೆ. ತುಂಗಾಭದ್ರಾ ನದಿಯಲ್ಲಿ ಅಸ್ಥಿ ವಿಸರ್ಜಿಸಿ ಎಂದು ಹಂಪಿಯಲ್ಲಿರುವ ಸ್ನೇಹಿತರು ಕೇಳಿಕೊಂಡಿದ್ದಾರೆ. ಆದರೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.

Advertisement

ಸಂಶೋಧನಾ ಪೀಠ ಸ್ಥಾಪನೆಗೆ ಒತ್ತಾಯ: ಚಿದಾನಂದಮೂರ್ತಿಯವರು ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಸಂಶೋಧನೆ ನಡೆಸಿದ್ದು, ಹಂಪಿಯಲ್ಲಿಯೇ ಹೆಚ್ಚಾಗಿ ಕಾಲ ಕಳೆದಿದ್ದಾರೆ. ಅಲ್ಲಿನ ಜನರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹಾಗಾಗಿ ಹಂಪಿ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ “ಸಂಶೋಧನಾ ಪೀಠ’ ಆರಂಭಿಸಬೇಕು ಎಂಬುದು ಅಭಿಮಾನಿಗಳು, ಶಿಷ್ಯರ ಒತ್ತಾಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿನಯ ಕುಮಾರ್‌, ಹುಟ್ಟೂರಿನಲ್ಲಿ ಈಗಾಗಲೇ ಸಂಶೋಧನಾ ಪೀಠ ಸ್ಥಾಪನೆ ಆಗಿದೆ. ಅವರ ಅಭಿಮಾನಿಗಳು ಹಂಪಿಯಲ್ಲಿ ಸಂಶೋಧನಾ ಪೀಠ ಸ್ಥಾಪನೆಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗುವುದು. ನಾವು ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

ಕನ್ನಡದ ಅಸ್ಮಿತೆಗೆ ಹೋರಾಡಿದ ಧೀಮಂತರು ಚಿದಾನಂದ ಮೂರ್ತಿಗಳು. ಭಾಷಾಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ ಅವರ ಅಗಲಿಕೆಯಿಂದ ನಮ್ಮ ಸಂಸ್ಕೃತಿ, ಭಾಷೆ, ರಾಷ್ಟ್ರಕ್ಕೆ ನಷ್ಟವಾಗಿದೆ. ನಾಡು-ನುಡಿಗೆ ಅವರ ಸೇವೆ ಚಿರಸ್ಮರಣೀಯ.
-ಟಿ.ಎಸ್‌.ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

ಕನ್ನಡಕ್ಕೆ ಚಿದಾನಂದಮೂರ್ತಿ ಗಳು ದೊಡ್ಡ ಕೊಡುಗೆ ನೀಡಿದ್ದು, ಶಾಸ್ತ್ರೀಯ ಸ್ಥಾನಮಾನ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕನ್ನಡದ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದ ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ.
-ಮನು ಬಳಿಗಾರ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next