ಮುಂಡಗೋಡ: ಮುಂಗಾರು ಪೂರ್ವ ಮಳೆ ಅವಾಂತರಕ್ಕೆ ರಾಜ್ಯದ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಅನ್ನದಾತರ ಬದುಕು ಅಸಹನೀಯವಾಗಿದೆ. ಎಡಬಿಡದೆ ಸುರಿದ ಮಳೆಯಿಂದಾಗಿ ರಾಶಿ ಮಾಡಿದ ಗೋವಿನ ಜೋಳ ಮೊಳಕೆಯೊಡೆಯುತ್ತಿದ್ದು ತನ್ನ ಉಳಿದ ಬೆಳೆಯನ್ನು ರಕ್ಷಿಸಿಕೊಳ್ಳಲು ಮುಡಸಾಲಿ ಗ್ರಾಮದ ರೈತರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ತಾಡಪತ್ರಿಗಳಿಂದ ಗುಡಿಸಲ ಮಾದರಿಯಲ್ಲಿ ಶೆಡ್ ನಿರ್ಮಿಸಿ ಅದರಲ್ಲಿ ಜೋಳ, ಭತ್ತದ ರಾಶಿ ಹಾಕಿ ವಿದ್ಯುತ್ ಬೆಳಕು ಹಾಗೂ ಫ್ಯಾನ್ ಮೂಲಕ ಬೆಳೆಗಳನ್ನು ಒಣಗಿಸುತ್ತಿದ್ದಾರೆ.
ತಾಲೂಕಿನಲ್ಲಿ ಈಗಾಗಲೇ ರೈತರು ಭತ್ತದ ಕೊಯ್ಲು ಮಾಡಿದ್ದಾರೆ. ನಿರಂತರ ಮಳೆಯಿಂದಾಗಿ ಕೊಯ್ದ ಭತ್ತದ ತೆನೆಗಳು ಗದ್ದೆಯಲ್ಲಿಯೇ ಮೊಳಕೆಯೊಡೆಯುತ್ತಿವೆ. ಗೋವಿನ ಜೋಳ ತೆನೆಗಳನ್ನು ಕಟಾವು ಮಾಡಿದ ರೈತರಿಗೆ ಅಕಾಲಿಕ ಮಳೆ ಮತ್ತು ಮೋಡ ಮುಸುಕಿದ ವಾತಾವರಣದಿಂದ ಅವುಗಳನ್ನು ಒಣಗಿಸಲು ಆಗದೆ ಪೇಚಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂಗಾರು ಬೆಳೆಯಲ್ಲಿ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ರೈತರು ತಮ್ಮ ಗದ್ದೆಯಲ್ಲಿನ ಗೋವಿನ ಜೋಳ ಕಟಾವು ಮಾಡಿ ಕಾಳಗಳನ್ನು ಒಣಗಿಸಲು ರಸ್ತೆಯಲ್ಲಿ ಹಾಕಿದ್ದರು. ಕಳೆದ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಬೆಳೆಗೆ ತಾಡಪತ್ರಿ ಹೊದಿಕೆ ಹಾಕಲಾಗಿದ್ದರೂ ಗೋವಿನ ಜೋಳ ಮಳೆ ನೀರಿಗೆ ಸಿಕ್ಕು ಮೊಳಕೆಯೊಡೆಯುತ್ತಿದ್ದವು. ಹೇಗಾದರು ಮಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹೊಸ ಪ್ಲ್ಯಾನ್ ಮಾಡಿದ್ದಾರೆ.
ರೈತರಾದ ರಾಮಕೃಷ್ಣ ಪಾಟೀಲ್, ಪರಶುರಾಮ ಕೀರ್ತೆಪ್ಪನವರ, ಮಾರುತಿ ಕೀರ್ತೆಪ್ಪನರ, ನಾಗೇಂದ್ರ ಹಿರೇಹಳ್ಳಿ, ಈಶ್ವರಪ್ಪ ಗುಲ್ಯಾನವರ, ಶಿವಾನಂದ ಕೇದಾರ, ಲಕ್ಷ್ಮಣ ಬಂಕಾಪುರ, ಸುರೇಶ ದಂಡಿ ಮತ್ತು ಜಗದೀಶ ಪಾಟೀಲ್ ಅವರು ತಾಡಪತ್ರಿಗಳಿಂದಲೇ ಗುಡಿಸಲಿನ ಮಾದರಿಯಲ್ಲಿ ಶೆಡ್ ನಿರ್ಮಿಸಿ ಅದರೊಳಗೆ ಕಾಳಿನ ರಾಶಿ ಹಾಕಿದ್ದಾರೆ. ಶೆಡ್ ಒಳಗೆ ವಿದ್ಯುತ್ ಲೈಟ್ ಹಾಗೂ ಪ್ಯಾನ್ ಅಳವಡಿಸಿ ಕಾಳನ್ನು ಒಣಗಿಸುತ್ತಿದ್ದಾರೆ.
ವರ್ಷವಿಡೀ ಕಷ್ಟಪಟ್ಟು ಸಾಲ ಮಾಡಿ ಗೊಬ್ಬರ, ಆಳು-ಕಾಳು ಎಂದು ಖರ್ಚು ಮಾಡಿ ಬೆಳೆಗಳನ್ನು ಬೆಳೆದ ರೈತರಿಗೆ ಇನ್ನೇನು ಫಸಲು ಕೈಗೆ ಸಿಗುವ ಸಮಯದಲ್ಲಿ ಅಕಾಲಿಕ ಮಳೆಯಿಂದ ಹಾನಿಯಾಗಿದೆ. ಈ ರೈತರ ವಿನೂತನ ಪ್ರಯೋಗ ಇತರೆ ರೈತರಿಗೆ ಮಾದರಿಯಾಗಿದೆ.
8 ದಿನಗಳ ಹಿಂದೆ 3 ಎಕರೆ ಹೊಲದಲ್ಲಿ ಬೆಳೆದ ಗೋವಿನ ಜೋಳ ಕಟಾವು ಮಾಡಿ ರಸ್ತೆ ಬದಿ ಒಣಗಿಸಲು ಹಾಕಿದ್ದೆ. ಐದಾರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದ ಕಾರಣ ಕಾಳುಗಳ ಮೇಲೆ ತಾಡಪತ್ರಿಗಳ ಹೊದಿಕೆ ಮಾಡಿದೆ. ಆದರೆ ತಾಡಪತ್ರಿ ಒಳಗೆ ನೀರು ಹಾಗೂ ಹೊದಿಕೆ ಮಾಡಿದ ಕಾರಣ ಕಾಳು ಜವಳು ಹಿಡಿದು ಮೊಳಕೆಯೊಡೆಯುತ್ತಿತ್ತು. ತಾಡಪತ್ರಿ ಗುಡಿಸಲು ಹಾಕಿ ಒಳಗೆ ಪ್ಯಾನ್ ಹಾಗೂ ವಿದ್ಯುತ್ ಲೈಟ್ ಅಳವಡಿಸಿ ಹಸಿಯಾದ ಕಾಳುಗಳನ್ನು ಒಣಗಿಸುತ್ತಿದ್ದೇನೆ. ಇದ್ದನ್ನು ನೋಡಿ ಗ್ರಾಮದ ಇತರೆ ರೈತರು ಮಾಡುತ್ತಿದ್ದಾರೆ.
ರಾಮಕೃಷ್ಣ ಪಾಟೀಲ್, ಮುಡಸಾಲಿ ರೈತ ಮುನೇಶ ತಳವಾರ