Advertisement

ಒಂದು ಮೊಟ್ಟೆಯ ಕಥೆ

12:47 PM Nov 18, 2017 | |

ಹುಬ್ಬಳ್ಳಿ: ಕಳೆದ ಒಂದೂವರೆ ತಿಂಗಳಿಂದ ಕೋಳಿ ಮೊಟ್ಟೆ ದುಬಾರಿಯಾಗುತ್ತಿದೆ. 100 ಮೊಟ್ಟೆಗಳ ದರದಲ್ಲಿ ದಿಢೀರನೇ 180 ರೂ.ಗಳ ಏರಿಕೆ ಕಂಡು ಬಂದಿದೆ. ಮೊಟ್ಟೆಯ ದರ ದಿನದಿಂದ ದಿನಕ್ಕೆ ಮೇಲೆರುತ್ತಲೇ ಇದ್ದುದರಿಂದ ವ್ಯಾಪಾರಸ್ಥರ, ಹಾಗೂ ಅಂಗಡಿಕಾರರ ನಿದ್ದೆಗೆಡಿಸಿದೆ.

Advertisement

ಕಳೆದ ಅಕ್ಟೋಬರ್‌ 1ರಿಂದ ಮೊಟ್ಟೆ ದರ ಏರುತ್ತಲೇ ಇದ್ದು ಇಳಿಯುತ್ತಿಲ್ಲ. ಸೆಪ್ಟೆಂಬರ್‌ನಲ್ಲಿ 100 ಮೊಟ್ಟೆಗಳಿಗೆ 370 ರೂ. ಗಳಿಗೆ ನೂರು ಇತ್ತು, ಆದರೆ ಈಗ ಮೊಟ್ಟೆಯ ದರ ಇದೀಗ 550 ರೂ.ಗಳಿಗೆ ಹೆಚ್ಚಳಗೊಂಡಿದೆ. ಮೊಟ್ಟೆ ಪ್ರಿಯರ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ.

ಕೋಳಿ ಮೊಟ್ಟೆಯ ಬೇಡಿಕೆ ಪ್ರಮಾಣವನ್ನೇ ಬಂಡವಾಳ ಮಾಡಿಕೊಂಡಿರುವ ಮಾರಾಟಗಾರರು ದಿನನಿತ್ಯ ಹೊಸ ದರದೊಂದಿಗೆ ಮಾರಾಟ ಮಾಡುವಂತಾಗಿದೆ. ಕಳೆದ 2-3 ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ದರ ಅತೀ ಹೆಚ್ಚು ಎನ್ನಬಹುದು.

ಇಷ್ಟೇ ಅಲ್ಲ ಈ ದರ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿವೆ. ಚಳಿಗಾಲದಲ್ಲಿ ಮೊಟ್ಟೆ ತಿನ್ನುವುದರಿಂದ ದೇಹದ ಉಷ್ಣತೆ ಕಾಯ್ದುಕೊಳ್ಳಬಹುದು ಎನ್ನುವ ಜನರ ನಂಬಿಕೆಯೇ ಮೊಟ್ಟೆಯ ದರ ಹೆಚ್ಚಲು ಕಾರಣ ಎನ್ನಲಾಗಿದೆ. ಚಳಿಗಾಲ ಮುಗಿಯುವವರೆಗೂ ಮೊಟ್ಟೆಯ ದರದಲ್ಲಿ ಇಳಿಕೆ ಸಾಧ್ಯತೆಯಿಲ್ಲ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ರಾಜ್ಯ ಸರಕಾರದಿಂದ ಇತ್ತೀಚೆಗೆ ಅಂಗನವಾಡಿ ಮಕ್ಕಳು ಹಾಗೂ ಬಾಣಂತಿಯರಿಗೆ ಮೊಟ್ಟೆ ನೀಡುವಂತೆ ರಾಜ್ಯ ಸರಕಾರ ಆದೇಶಿಸಿದೆ. ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎನ್ನುವುದು ಎಲ್ಲ ರೀತಿಯಿಂದ ತಿಳಿದು ಬಂದಿದೆ. ವೈದ್ಯರೂ ಕೂಡಾ ಮೊಟ್ಟೆ ತಿನ್ನುವಂತೆ ಸಲಹೆ ನೀಡುತ್ತಾರೆ. 

Advertisement

ಬೇಡಿಕೆಯಂತೆ ಸಿಗುತ್ತಿಲ್ಲ ಮೊಟ್ಟೆ: ಇಲ್ಲಿನ ಕಮರಿಪೇಟೆ ಅಶೋಕ ಮೊಟ್ಟೆ ಕೇಂದ್ರದಲ್ಲಿ ದಿನನಿತ್ಯ 68,250 ಮೊಟ್ಟೆಯ ಒಂದು ಲೋಡ್‌ ಬೇಕಾಗುತ್ತದೆ. ಆದರೆ ಮಾರುಕಟ್ಟೆಗೆ ತಕ್ಕಂತೆ ಮೊಟ್ಟೆಗಳು ಬರುತ್ತಿಲ್ಲ. ಈ ಹಿಂದೆ ಒಂದು ಲೋಡ್‌ ಮೊಟ್ಟೆಗಳು (68,250) ಸಿಗುತ್ತಿದ್ದವು. 

ಆದರೆ  ಇದೀಗ 52 ಸಾವಿರ ಮೊಟ್ಟೆಗಳು ಸಿಗುತ್ತಿದ್ದು ಇದರಿಂದ 10 ಸಾವಿರಕ್ಕೂ ಹೆಚ್ಚು ಮೊಟ್ಟೆಗಳ ಕೊರತೆಯಾಗುತ್ತಿದೆ. ಮಹಾರಾಷ್ಟ್ರ ಭಾಗಕ್ಕೆ ಮೊಟ್ಟೆ ಹೆಚ್ಚು ಸರಬರಾಜು ಮಾಡಲಾಗುತ್ತಿದ್ದು, ನಮ್ಮಲ್ಲಿನ ಕೊರತೆಗೆ ಮುಖ್ಯ ಕಾರಣ. ಚಳಿಯ ಕಾರಣದಿಂದಾಗಿ ಆ ಭಾಗದಲ್ಲಿ ಮೊಟ್ಟೆಗಳ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ಕೊಪ್ಪಳದ ಗಿಣಗೇರಾದಿಂದ ಮೊಟ್ಟೆಗಳು ಬರುತ್ತಿದ್ದು ಈ ಹಿಂದೆ ಅಲ್ಲಿ 5 ಲಕ್ಷಕ್ಕೂ ಹೆಚ್ಚು ಕೋಳಿ ಸಾಕಾಣಿಕೆ ಮಾಡಲಾಗಿತ್ತು. ಇದೀಗ ಸಾಕಾಣಿಕೆ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಉತ್ತರ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಗಳ ಮಾರಾಟ ಮಾಡಲಾಗುತ್ತಿದೆ ಎಂದು ಮೊಟ್ಟೆ ಕೇಂದ್ರದ ಮಾಲಿಕ ವಾಸುದೇವ ಕ್ಷೀರಸಾಗರ ಹೇಳುತ್ತಾರೆ. 

ದರದಲ್ಲಿ ಏರಿಕೆ: ಅಕ್ಟೋಬರ್‌ 1ರಂದು ಮೊಟ್ಟೆಯ ದರ 370 ರೂ.ಗಳು, ಅಕ್ಟೋಬರ್‌ 15ರಂದು 390 ರೂ.ಗಳು, 17ರಂದು 400 ರೂ.ಗಳು, ನವೆಂಬರ 2ರಂದು 450 ರೂ.ಗಳು, ನ.12ರಂದು 500 ರೂ.ಗಳು, ನ.17ರಂದು 550 ರೂ.ಗಳ ದರ ಏರಿಕೆಯಾಗುತ್ತಲೇ ಬಂದಿದೆ. 

* „ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next