“ನೀರಿಳಿಯದ ಗಂಟಲಿನಲ್ಲಿ ಕಡುಬು ತುರುಕಿಸುವುದು’ ಅಂತ ಒಂದು ಮಾತಿದೆ. ಅಂದರೆ ಸಣ್ಣ ಗಂಟಲಿನೊಳಗೆ ದೊಡ್ಡ ವಸ್ತುವನ್ನು ಸೇರಿಸುವುದು ದೊಡ್ಡ ಸಾಹಸ ಅಂತರ್ಥ. ಸಣ್ಣ ಬಾಯಿಯ ಪಾತ್ರೆಯೊಳಗೆ ದೊಡ್ಡ ಮೊಟ್ಟೆಯನ್ನು ತೂರಿಸಿ ಗೆಳೆಯರಿಂದ ಶಹಬ್ಟಾಸ್ ಅನ್ನಿಸಿಕೊಳ್ಳೋ ಆಸೆ ಇದ್ಯಾ? ಹಾಗಾದ್ರೆ ಈ ಪ್ರಯೋಗ ಮಾಡಿ.
ಬೇಕಾದ ವಸ್ತುಗಳು: ಬೇಯಿಸಿದ ಮೊಟ್ಟೆ, ಸಣ್ಣ ಬಾಯಿಯ ಗಾಜಿನ ಬೀಕರ್, ಬೆಂಕಿಪೊಟ್ಟಣ
ಪ್ರದರ್ಶನ: ಜಾದೂಗಾರ ಬೇಯಿಸಿದ ದೊಡ್ಡ ಮೊಟ್ಟೆಯೊಂದನ್ನು ತೆಗೆದುಕೊಳ್ಳುತ್ತಾನೆ. ಬೆಂಕಿ ಕಡ್ಡಿ ಗೀರಿ ಸಣ್ಣ ಬಾಯಿಯ ಗಾಜಿನ ಬೀಕರಿನೊಳಗೆ ಹಾಕುತ್ತಾನೆ. ತಕ್ಷಣ ಬೇಯಿಸಿದ ಮೊಟ್ಟೆಯನ್ನು ಬೀಕರಿನ ಸಣ್ಣ ಬಾಯಿಯೊಳಗೆ ಸಲೀಸಾಗಿ ನುಗ್ಗಿಸುತ್ತಾನೆ.
ತಯಾರಿ: ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು 15 ನಿಮಿಷಗಳ ಕಾಲ ಬೇಯಿಸಿ. ನಂತರ ಅದನ್ನು ನೀರಿನಿಂದ ಹೊರ ತೆಗೆದು ಮೊಟ್ಟೆಯ ಸಿಪ್ಪೆ/ಕವಚ ಸುಲಿಯಿರಿ. ನಂತರ ಖಾಲಿ ಗಾಜಿನ ಬೀಕರಿನೊಳಗೆ ನಾಲ್ಕೈದು ಬೆಂಕಿ ಕಡ್ಡಿ ಗೀರಿ ಹಾಕಿ. ಬೆಂಕಿ ಆರುವುದರೊಳಗೆ, ಮೊಟ್ಟೆಯನ್ನು ಬೀಕರಿನ ಬಾಯಿಯೊಳಗೆ ನಿಧಾನವಾಗಿ ತೂರಿಸಿ, ಒಳಗೆ ಬೆಂಕಿ ಇರುವುದರಿಂದ, ದೊಡ್ಡ ಮೊಟ್ಟೆಯು ಸಣ್ಣ ಬೀಕರಿನೊಳಗೆ ತೂರಿಕೊಳ್ಳುತ್ತದೆ.
ಇದು ಕಣಟ್ಟಿನ ಜಾದೂವೇನಲ್ಲ. ಇದೊಂದು ವೈಜ್ಞಾನಿಕ ಪ್ರಯೋಗವಷ್ಟೇ. ಆದರೂ ಚಾಕಚಕತ್ಯೆಯಿಂದ ಮಾತ್ರ ಪ್ರಯೋಗದಲ್ಲಿ ಯಶಸ್ಸು ಕಾಣಬಹುದು. ಪ್ರದರ್ಶನಕ್ಕೂ ಮುನ್ನ ಹಲವಾರು ಬಾರಿ ಪ್ರಯೋಗ ಮಾಡಲೇಬೇಕು. ಪ್ರದರ್ಶನದ ನಂತರ ನಿಮ್ಮ ಗೆಳೆಯರಿಗೂ ಇದನ್ನು ಮಾಡಿ ತೋರಿಸಲು ಹೇಳಿ. ಬಹುತೇಕರು ಮೊದಲ ಪ್ರಯತ್ನದಲ್ಲಿ ಯಶಸ್ಸು ಕಾಣುವುದಿಲ್ಲ.