Advertisement

ಕನಕಮಜಲು ಗ್ರಾಮಕ್ಕೆ ಬಂತು ಪರಿಸರ ಸ್ನೇಹಿ ಶೌಚಾಲಯ

12:43 AM Feb 03, 2020 | Sriram |

ಕನಕಮಜಲು: ಕೇಂದ್ರ ಸರಕಾರದ ಜನಸ್ನೇಹಿ ಸಾರ್ವಜನಿಕ ಶೌಚಾಲಯ ಆಶಯದಲ್ಲಿ ಕನಕಮಜಲು ಗ್ರಾಮದಲ್ಲಿ ನವೀನ ಮಾದರಿಯ ಪರಿಸರ ಸ್ನೇಹಿ ಶೌಚಾಲಯ ನಿರ್ಮಾಣವಾಗಿದೆ. ಬಯಲು ಮುಕ್ತ ಗ್ರಾಮದಲ್ಲಿ ಗ್ರಾಮಸ್ಥರ ಸಾರ್ವಜನಿಕ ಶೌಚಾಲಯದ ಬೇಡಿಕೆ ಈಡೇರಿದೆ.

Advertisement

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕನಕಮಜಲು ಗ್ರಾಮದ ಮುಖ್ಯ ಪೇಟೆಯಲ್ಲಿದೆ ಈ ಜನಸ್ನೇಹಿ ಶೌಚಾಲಯ. ಪ್ರತಿದಿನ 24 ಗಂಟೆಯೂ ಈ ಶೌಚಾಲಯ ಲಭ್ಯವಿರುತ್ತದೆ. ಹೆದ್ದಾರಿಯ ಪಕ್ಕದಲ್ಲಿಯೇ ಶೌಚಾಲಯ ಇರುವುದರಿಂದ ರಸ್ತೆಯ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಿದೆ.

ರೆಡಿಮೇಡ್‌ ಶೌಚಾಲಯ
ಕನಕಮಜಲಿನ ಸಾರ್ವಜನಿಕ ಶೌಚಾಲಯವನ್ನು ನೂತನ ಮಾದರಿಯಲ್ಲಿ ನಿರ್ಮಿಸಲಾಗಿದೆ. ಕನಕಮಜಲು ಗ್ರಾ.ಪಂ. ಸದಸ್ಯರು ಮತ್ತು ಅಧಿಕಾರಿಗಳ ಯೋಜನೆಯಲ್ಲಿ ಈ ಜನಸ್ನೇಹಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಮುಂದಾಗಿದ್ದು, ಇದರ ಕೋಣೆ ಮತ್ತು ಛಾವಣಿ ರೆಡಿಮೇಡ್‌ ಆಗಿದೆ. ಬೇಸ್‌ಮೆಂಟ್‌ ಮತ್ತು ಅಡಿಪಾಯ ನಿರ್ಮಿಸಿ ಕೋಣೆಯನ್ನು ಜೋಡಿಸಲಾಗಿದೆ. ಇದನ್ನು ತೆಗೆದು ಪುನಃ ಜೋಡಿಸಬಹುದಾದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಶೌಚಾಲಯದ ಸಾಗಾಟವೂ ಸುಲಭ. ಸಾರ್ವಜನಿಕ ಶೌಚಾಲಯದಲ್ಲಿ ಎರಡು ಕೋಣೆಗಳಿವೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪುತ್ತೂರಿನ ಮಾಸ್ಟರ್‌ ಪ್ಲಾನರಿಯವರು ಈ ವಿನೂತನ ಮಾದರಿಯ ಶೌಚಾಲಯ ನಿರ್ಮಿಸಿದ್ದಾರೆ.

24 ಗಂಟೆಯೂ ನೀರು ಪೂರೈಕೆ
ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 1.5 ಲಕ್ಷ ರೂ. ವ್ಯಯಿಸ ಲಾಗಿದ್ದು, ಗಾಂಧಿ ಗ್ರಾಮ ಪುರಸ್ಕಾರ ಅನುದಾನ, ನಿರ್ಮಲ ಗ್ರಾಮ ಪುರಸ್ಕಾರ ಅನುದಾನ ಬಳಸಲಾಗಿದೆ.

ಗ್ರಾಮದ ನಿವಾಸಿ ಬಿ.ಎಚ್‌. ಗುಡ್ಡಪ್ಪ ಗೌಡ ತಮ್ಮ ತೋಟದ ಜಾಗವನ್ನು ಕೊಟ್ಟು ಸಹಕರಿಸಿದ್ದಾರೆ. ಶೌಚಾಲಯದ ಪಕ್ಕ ನೀರಿನ ಟ್ಯಾಂಕ್‌ ಅಳವಡಿಸಲಾಗಿದೆ. ಸಾವಿರ ಲೀ. ಟ್ಯಾಂಕ್‌ಗೆ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಸಲಾಗುತ್ತಿದೆ. ದಿನವಿಡೀ ನೀರಿನ ಲಭ್ಯತೆಯಿದೆ.

Advertisement

15 ವರ್ಷಗಳ ಬೇಡಿಕೆ
ಕನಕಮಜಲು ಗ್ರಾಮವು ಬಯಲು ಮುಕ್ತ ಗ್ರಾಮವೆಂದು ಘೋಷಿಸಲಾಗಿದ್ದು, ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯ ಬೇಕೆನ್ನುವ ಕೂಗು 15 ವರ್ಷಗಳಿಂದಲೇ ಇತ್ತು. ಗ್ರಾಮಸಭೆ, ಜಮಾಬಂದಿ, ಸಾಮಾನ್ಯ ಸಭೆ ಹೀಗೆ ಎಲ್ಲ ಸಭೆಗಳಲ್ಲಿ ಸಾರ್ವಜನಿಕ ಶೌಚಾಲಯದ ಪ್ರಸ್ತಾವ ಮಾಡಲಾಗಿತ್ತು. ಮೊದಲಿಗೆ ಜಾಗದ ಕೊರತೆ ಇತ್ತು. ಹೀಗಾಗಿ ಸ್ವಲ್ಪ ತಡವಾಯಿತು. ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಲಾಯಿತು ಎಂದು ಗ್ರಾ.ಪಂ. ಸಿಬಂದಿ ಹೇಳುತ್ತಾರೆ. ಜನಸ್ನೇಹಿ ಶೌಚಾಲಯ ನಿರ್ಮಿಸಿ, ಕನಕಮಜಲು ಗ್ರಾ.ಪಂ. ಪ್ರಶಂಸೆಗೆ ಪಾತ್ರವಾಗಿದೆ.

ಶೌಚಾಲಯದಲ್ಲಿ ಚಿತ್ರ-ಬರಹಗಳು ಆಕರ್ಷಿಸುತ್ತಿವೆ. ಗೋಡೆಯಲ್ಲಿ ಹೂವಿನ ಚಿತ್ರ ಬಿಡಿಸಲಾಗಿದೆ. “ಸ್ವಚ್ಛ ಸುಂದರ ಶೌಚಾಲಯ’, ಸ್ವಚ್ಛ ಪರಿಸರ ಜೀವನ ಸುಖಕರ ಆಗಬೇಕು ಪರಿಸರ ಸ್ವಚ್ಛತೆ ಉಳಿಯಬೇಕು, ಮುಂದಿನ ಜನತೆ, ಸ್ವಚ್ಛ ಪ್ರಕೃತಿ ನಮ್ಮ ಸಂಸ್ಕೃತಿ, ಸ್ವಚ್ಛ ಪರಿಸರದ ಅರಿವು ಜೀವ ಸಂಕುಲದ ಉಳಿವು ಮುಂತಾದ ಬರಹಗಳನ್ನು ಬರೆಸಲಾಗಿದೆ.

ಆವಶ್ಯಕತೆ ಇತ್ತು
ಕನಕಮಜಲು ಗ್ರಾಮದಲ್ಲಿ ಶೌಚಾಲಯದ ಆವಶ್ಯಕತೆ ಇತ್ತು. ಜಾಗದ ಸಮಸ್ಯೆ ಎದುರಾದಾಗ ಗ್ರಾಮಸ್ಥರ ಮನವೊಲಿಸಿ ಅವರ ಸಹಕಾರದಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಸ್ವಚ್ಛತೆಗೆ ಗ್ರಾಮಸ್ಥರು ಹೆಚ್ಚಿನ ಗಮನ ಹರಿಸಿದರೆ ಈ ಕಾರ್ಯ ಸಾರ್ಥಕವಾಗಬಹುದು.
-ಶ್ರೀಧರ ಕುತ್ಯಾಳ
ಉಪಾಧ್ಯಕ್ಷ, ಗ್ರಾ.ಪಂ. ಕನಕಮಜಲು

-ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next